ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ | ಶ್ರೇಯಾ ಮಿಂಚು: ನೈಸ್‌ ಬೆಂಗಳೂರಿಗೆ ಜಯ

Published 8 ಜೂನ್ 2024, 7:58 IST
Last Updated 8 ಜೂನ್ 2024, 7:58 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ‘ನೈಸ್‌ ಬೆಂಗಳೂರು’, ‘ಕೆಐಒಸಿ ಬೆಂಗಳೂರು’ ಹಾಗೂ ‘ಹೆರಾನ್ಸ್‌ ಬೆಂಗಳೂರು’ ತಂಡಗಳು ಜಯ ಸಾಧಿಸಿದವು.

ಟಾಸ್‌ ಗೆದ್ದ ಆತಿಥೇಯ ಬೌಲ್‌ಔಟ್‌ ಅಕಾಡೆಮಿ ತಂಡದವರು ಬೌಲಿಂಗ್ ಆಯ್ದುಕೊಂಡರು. ಶ್ರೇಯಾ ಚೌಹಾಣ್ (89 ರನ್‌) ಅವರ ಅರ್ಧ ಶತಕದ ಬಲದಿಂದ ‘ನೈಸ್‌ ಬೆಂಗಳೂರು’ ತಂಡವು 25 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ಗಳ ಬೃಹತ್ ಗುರಿ ನೀಡಿತು. ಶ್ರೇಯಾ ಅವರಿಗೆ ಸಿ.ಯು.ಇಂಚರಾ (40 ರನ್‌) ಸಾಥ್‌ ನೀಡಿದರು.

ಗುರಿ ಬೆನ್ನತ್ತಿದ ಬೌಲ್‌ಔಟ್‌ ಅಕಾಡೆಮಿ ತಂಡದವರು 25 ಓವರ್‌ಗಳಲ್ಲಿ 8 ವಿಕೆಟ್‌ಗೆ 128 ರನ್‌ ಗಳಿಸಿ 46 ರನ್‌ಗಳಿಂದ ಸೋಲು ಅನುಭವಿಸಿದರು. ಪಿ.ಸಲೊನಿ, ಯಶಿಕಾ ಕೆ.ಗೌಡ ತಲಾ 26 ರನ್‌ ಮಾತ್ರ ಗಳಿಸಿದರು. ನೈಸ್‌ ತಂಡದ ವೈಷ್ಣವಿ ಆಚಾರ್ಯ 3 ವಿಕೆಟ್‌ ಉರುಳಿಸಿ ಗೆಲುವಿಗೆ ಕಾರಣರಾದರು. 

ಮತ್ತೊಂದು ಪಂದ್ಯದಲ್ಲಿ ಕೆಐಒಸಿ ಬೆಂಗಳೂರು ತಂಡದವರು ಶೀನ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು. ಮೊದಲು ಬ್ಯಾಟ್‌ ಮಾಡಿದ ಶೀನ್ ಬೆಂಗಳೂರು ತಂಡವು 25 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿತು. ಅನನ್ಯಾ ಹೆಗಡೆ 3 ಹಾಗೂ ರೀತೂ ಆರ್‌.ಗೌಡ 2 ವಿಕೆಟ್‌ ಪಡೆದು ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕೆಐಒಸಿ ತಂಡವು ಸಾಕ್ಷಿ (37 ರನ್) ಹಾಗೂ ಅನನ್ಯಾ ಹೆಗಡೆ (20 ರನ್‌) ನೆರವಿನಿಂದ 21.4 ಓವರ್‌ಗಳಲ್ಲಿ ಗುರಿ ಮುಟ್ಟಿತು. 

ಮಧ್ಯಾಹ್ನದ ಮೊದಲ ಪಂದ್ಯದಲ್ಲಿ ಸಹ್ಯಾದ್ರಿ ಶಿವಮೊಗ್ಗ ತಂಡದ ವಿರುದ್ಧ ಹೆರಾನ್ಸ್ ಬೆಂಗಳೂರು ತಂಡದವರು 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು. ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ ತಂಡದ ಆಟಗಾರ್ತಿಯರನ್ನು ಸಜನಾ ಕಪೂರ್‌ ಹಾಗೂ ಸಂವಿಧಾ ಅರುಣ್ ಕಾಡಿದರು. ಇಬ್ಬರೂ 4 ವಿಕೆಟ್‌ ಉರುಳಿಸಿ 15.4 ಓವರ್‌ಗಳಲ್ಲಿ 69 ರನ್‌ಗೆ ಆಲ್‌ಔಟ್‌ ಮಾಡಿದರು. 

ಗುರಿ ಬೆನ್ನಟ್ಟಿದ ಹೆರಾನ್ಸ್ ತಂಡದವರು ಆರಂಭಿಕ ಬ್ಯಾಟರ್‌ಗಳಾದ ದಿವ್ಯಾ ಗಿರೀಶ್‌ (32 ರನ್‌) ಹಾಗೂ ಅನ್ನಪೂರ್ಣ (28 ರನ್‌) ನೆರವಿನಿಂದ 6.3 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವಿನ ನಗೆ ಬೀರಿದರು.

ಬೂಟ್‌ಕ್ಯಾಂಪ್ ಕ್ರಿಕೆಟ್‌ ಅಕಾಡೆಮಿ ಬೆಂಗಳೂರು ಹಾಗೂ ಎಸ್‌ಎಂಎಸ್‌ ಉಡುಪಿ ತಂಡದ ಪಂದ್ಯವು ಮಳೆ ಕಾರಣ ರದ್ದಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT