ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಮಹಿಳಾ ಟ್ವೆಂಟಿ–20 ಚಾಲೆಂಜ್‌ ಕ್ರಿಕೆಟ್‌ ಫೈನಲ್‌ ಇಂದು

ಸೂಪರ್‌ನೋವಾಸ್‌ಗೆ ವೆಲೋಸಿಟಿ ‘ಚಾಲೆಂಜ್‌’: ಯಾರ ಮುಡಿಗೆ ಕಿರೀಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಒಂದೆಡೆ ಹರ್ಮನ್‌ಪ್ರೀತ್ ಕೌರ್‌ ಸಾರಥ್ಯದ ಸೂಪರ್‌ನೋವಾಸ್‌‌, ಮತ್ತೊಂದೆಡೆ ಮಿಥಾಲಿ ರಾಜ್‌ ಮುಂದಾಳತ್ವದ ವೆಲೋಸಿಟಿ.

ಈ ತಂಡಗಳ ಪೈಕಿ ಮಹಿಳಾ ಟ್ವೆಂಟಿ–20 ಚಾಲೆಂಜ್‌ ಕ್ರಿಕೆಟ್‌ನ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲ ಈಗ ಗರಿಗೆದರಿದೆ.

ಶನಿವಾರ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಉಭಯ ತಂಡಗಳು ಎದುರಾಗಲಿವೆ. ಸೂಪರ್‌ನೋವಾಸ್‌ ತಂಡ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರೆ, ವೆಲೋಸಿಟಿ ಎರಡನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದೆ.

ಗುರುವಾರ ನಡೆದಿದ್ದ ಲೀಗ್‌ ಹಂತದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆ ಹೋರಾಟದಲ್ಲಿ ಹರ್ಮನ್‌ಪ್ರೀತ್‌ ಪಡೆ 12 ರನ್‌ಗಳಿಂದ ಜಯಿಸಿತ್ತು. ಈ ಗೆಲುವು ಸೂಪರ್‌ನೋವಾಸ್‌ ಆಟಗಾರ್ತಿಯರ ಮನೋಬಲ ಹೆಚ್ಚುವಂತೆ ಮಾಡಿದೆ.

ಇನಿಂಗ್ಸ್ ಆರಂಭಿಸುವ ಪ್ರಿಯಾ ಪೂನಿಯಾ ಮತ್ತು ಚಾಮರಿ ಅಟ್ಟಪಟ್ಟು ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಅಂಗಳಕ್ಕಿಳಿಯುವ ಜೆಮಿಮಾ ರಾಡ್ರಿಗಸ್ ವಿಶ್ವಾಸದ ಗಣಿಯಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಅಜೇಯ 77ರನ್‌ ಗಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಅವರು ಮತ್ತೊಮ್ಮೆ ವೆಲೋಸಿಟಿ ಬೌಲರ್‌ಗಳ ಬೆವರಿಳಿಸಲು ಕಾತರರಾಗಿದ್ದಾರೆ.

ಸೋಫಿ ಡಿವೈನ್ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಅವರೂ ಅಬ್ಬರದ ಆಟ ಆಡಿ ತಂಡದ ಮೊತ್ತ ಹೆಚ್ಚಿಸಬಲ್ಲರು.

ರಾಧಾ ಯಾದವ್‌, ಅನುಜಾ ಪಾಟೀಲ್‌, ನಟಾಲಿಯಾ ಶೀವರ್‌, ಸೋಫಿ ಡಿವೈನ್‌ ಮತ್ತು ಪೂನಂ ಯಾದವ್‌ ಅವರು ಬೌಲಿಂಗ್‌ನಲ್ಲಿ ಸೂಪರ್‌ನೋವಾಸ್‌ ತಂಡದ ಬೆನ್ನೆಲುಬಾಗಿದ್ದಾರೆ.

ಮಿಥಾಲಿ ಪಡೆಯು ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದೆ.

ಡೇನಿಯಲ್‌ ವ್ಯಾಟ್‌, ಮಿಥಾಲಿ ಮತ್ತು ವೇದಾ ಕೃಷ್ಣಮೂರ್ತಿ ಅವರು ಬ್ಯಾಟಿಂಗ್‌ನಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ. ಹೇಲಿ ಮ್ಯಾಥ್ಯೂಸ್‌, ಶಫಾಲಿ ವರ್ಮಾ ಮತ್ತು ಸುಷ್ಮಾ ವರ್ಮಾ ಅವರು ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವುದು ಅಗತ್ಯ.

ಶಿಖಾ ಪಾಂಡೆ ಮತ್ತು ಅಮೆಲಿಯಾ ಕೆರ್‌ ಅವರು ಬೌಲಿಂಗ್‌ ವಿಭಾಗಕ್ಕೆ ಬಲ ತುಂಬುತ್ತಿದ್ದಾರೆ. ಅವರಿಗೆ ಜಹನಾರ ಆಲಮ್‌, ಕೋಮಲ್‌ ಜಂಜಾದ್‌, ಹೇಲಿ ಮ್ಯಾಥ್ಯೂಸ್‌, ಏಕ್ತಾ ಬಿಷ್ಠ್‌ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು