ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND women vs SA women, 4th ODI| ಜಯದ ಭರವಸೆಯಲ್ಲಿ ಮಿಥಾಲಿ ಬಳಗ

ಮಹಿಳಾ ಕ್ರಿಕೆಟ್‌: ಭಾರತ–ದಕ್ಷಿಣ ಆಫ್ರಿಕಾ ನಾಲ್ಕನೇ ಏಕದಿನ ಪಂದ್ಯ ಇಂದು
Last Updated 13 ಮಾರ್ಚ್ 2021, 11:15 IST
ಅಕ್ಷರ ಗಾತ್ರ

ಲಖನೌ: ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆದೀರ್ಘಕಾಲದಿಂದ ಬಿರುಸಿನ ಬ್ಯಾಟರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಆಲ್‌ರೌಂಡರ್‌ ದೀಪ್ತಿ ಶರ್ಮಾ ಹಾಗೂ ವಿಕೆಟ್‌ ಕೀಪರ್ ಬ್ಯಾಟರ್‌ ಸುಷ್ಮಾ ವರ್ಮಾ ಅವರಿಂದ ಈ ಸ್ಥಾನವನ್ನು ತುಂಬಿಕೊಳ್ಳುವ ನಿರೀಕ್ಷೆಯೊಂದಿಗೆ ತಂಡವು ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಎರಡನೇ ಪಂದ್ಯದಲ್ಲಿ ಪುಟಿದೆದ್ದಿತ್ತು. ಆದರೆ ಶುಕ್ರವಾರ ನಡೆದ ಮೂರನೇ ಹಣಾಹಣಿಯಲ್ಲಿ ಆರು ರನ್‌ಗಳಿಂದ (ಡಕ್ವರ್ಥ್‌–ಲೂಯಿಸ್‌ ನಿಯಮದಡಿ) ಪ್ರವಾಸಿ ತಂಡದ ಎದುರು ನಿರಾಸೆ ಅನುಭವಿಸಿತ್ತು. ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದತ್ತು. ತಿರುಗೇಟು ನೀಡುವ ವಿಶ್ವಾಸದಲ್ಲಿ ಈ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 5 ವಿಕೆಟ್‌ಗೆ 248 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಪ್ರವಾಸಿ ತಂಡವು ಆರಂಭಿಕ ಬ್ಯಾಟರ್‌ ಲಿಜೆಲಿ ಲೀ ಅವರ ಅಮೋಘ ಶತಕದ(132) ನೆರವಿನಿಂದ ಜಯ ಸಾಧಿಸಿತ್ತು.

ಭಾರತದ ಇನಿಂಗ್ಸ್‌ನ ವೇಳೆ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಔಟಾದ ಬಳಿಕ, ಕೊನೆಯ 30 ಎಸೆತಗಳಲ್ಲಿ ಕೇವಲ 27 ರನ್‌ಗಳು ದಾಖಲಾಗಿದ್ದವು. ಈ ‘ಡೆತ್‌’ ಓವರ್‌ಗಳಲ್ಲಿ ಉತ್ತಮ ಆಟವಾಡುವ ಸಾಮರ್ಥ್ಯವನ್ನು ತಂಡ ವೃದ್ಧಿಸಿಕೊಳ್ಳಬೇಕಿದೆ. ಇನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿವಿಶ್ವಕಪ್ ಟೂರ್ನಿ ಇರುವುದರಿಂದ ತಂಡಕ್ಕೆ ಇದು ಅಗತ್ಯವೂ ಆಗಿದೆ.

‘ಪಂದ್ಯದ ಕೊನೆಯ ಹತ್ತು ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಆಟಗಾರ್ತಿಯರ ಅಗತ್ಯ ನಮಗಿದೆ. ಈ ಹಂತದಲ್ಲಿ ನಾವು ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಹರ್ಮನ್‌ ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಆ ಸ್ಥಾನಗಳನ್ನು ನಿಭಾಯಿಸಬಲ್ಲರು‘ ಎಂದು ಮಿಥಾಲಿ ರಾಜ್ ಶುಕ್ರವಾರ ಹೇಳಿದ್ದರು.

ದೀಪ್ತಿ ಶರ್ಮಾ ಅವರು ಭಾರತ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರು. ಆದರೆ ಸ್ಫೋಟಕ ಆಟವಾಡುವುದರಲ್ಲಿ ಅವರು ಇನ್ನಷ್ಟು ಪಳಗಬೇಕಿದೆ. ಯುವ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ಏಕದಿನ ಸರಣಿಯಿಂದ ಆಯ್ಕೆ ಸಮಿತಿಯು ಹೊರಗಿಟ್ಟಿರುವುದು ಕಳವಳದ ಸಂಗತಿಯಾಗಿದೆ.

ಮಿಥಾಲಿ ರಾಜ್ ಬ್ಯಾಟಿಂಗ್‌ನಲ್ಲಿ ಹಾಗೂ ಜೂಲನ್ ಗೋಸ್ವಾಮಿ (ಇದುವರೆಗೆ ಎಂಟು ವಿಕೆಟ್‌) ಬೌಲಿಂಗ್‌ನಲ್ಲಿ ಕೊಡುಗೆ ನೀಡುತ್ತಿದ್ದಾರೆ. ಜೂಲನ್‌ ಅವರಿಗೆ ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್‌ ಹಾಗೂ ಮಾನಸಿ ಜೋಷಿ ಸಹಕಾರ ನೀಡುತ್ತಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕಾ ಆತ್ಮವಿಶ್ವಾಸದಲ್ಲಿದ್ದು, ಸರಣಿ ಜಯದ ಹವಣಿಕೆಯಲ್ಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ

ಸ್ಥಳ: ಏಕಾನ ಕ್ರೀಡಾಂಗಣ, ಲಖನೌ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT