ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಪಿಎಲ್‌: ಮುಂಬೈಗೆ ಸತತ ಎರಡನೇ ಜಯ, ಮತ್ತೆ ಮುಗ್ಗರಿಸಿದ ಆರ್‌ಸಿಬಿ

Last Updated 6 ಮಾರ್ಚ್ 2023, 21:02 IST
ಅಕ್ಷರ ಗಾತ್ರ

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು.

ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು. ಮುಂಬೈಗೆ ಇದು ಎರಡನೇ ಗೆಲುವು.

ಆರ್‌ಸಿಬಿ ನೀಡಿದ 156 ರನ್‌ಗಳ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ, 34 ಎಸೆತಗಳು ಬಾಕಿ ಇರುವಂತೆಯೇ ಒಂದು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಆಲ್‌ರೌಂಡ್‌ ಆಟವಾಡಿದ ಹೇಯ್ಲಿ ಮ್ಯಾಥ್ಯೂಸ್‌ (ಔಟಾಗದೆ 77 ರನ್‌, 28ಕ್ಕೆ 3 ವಿಕೆಟ್‌) ಮತ್ತು ನತಾಲಿ ಸಿವೆರ್ ಬ್ರಂಟ್‌ (ಔಟಾಗದೆ 55 ರನ್‌, 29ಎ) ಮುಂಬೈ ಗೆಲುವನ್ನು ಸುಲಭಗೊಳಿಸಿದರು.

ಆರಂಭಿಕ ಬ್ಯಾಟರ್ ಯಷ್ಟಿಕಾ ಭಾಟಿಯಾ (23) ಔಟಾದ ಬಳಿಕ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಹೇಯ್ಲಿ ಮತ್ತು ನತಾಲಿ 114 ರನ್‌ ಸೇರಿಸಿದರು. ತಂಡವು 14.2 ಓವರ್‌ಗಳಲ್ಲಿ 159 ರನ್‌ ಗಳಿಸಿತು.

ಹೇಯ್ಲಿ ಅವರ ಇನಿಂಗ್ಸ್‌ನಲ್ಲಿ 13 ಬೌಂಡರಿ ಒಂದು ಸಿಕ್ಸರ್ ಇದ್ದರೆ, ಸಿವೆರ್ ಒಂಬತ್ತು ಬೌಂಡರಿ 1 ಸಿಕ್ಸರ್ ಸಿಡಿಸಿದರು.

ಆರ್‌ಸಿಬಿ ಸಾಧಾರಣ ಮೊತ್ತ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಸ್ಮೃತಿ ಮಂದಾನ ಬಳಗ 18.4 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟಾಯಿತು.

ಹೇಯ್ಲಿ ಮ್ಯಾಥ್ಯೂಸ್‌ ಮತ್ತು ತಲಾ ಎರಡು ವಿಕೆಟ್‌ ಪಡೆದ ಸಾಯಿಕಾ ಇಶಾಕ್‌ ಹಾಗೂ ಅಮೇಲಿ ಕೆರ್‌ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ನಾಯಕಿ ಸ್ಮೃತಿ (23 ರನ್‌, 17 ಎ., 4X5) ಮತ್ತು ಸೋಫಿ ಡಿವೈನ್‌ (16 ರನ್‌) ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 39 ರನ್ ಸೇರಿಸಿ ಉತ್ತಮ ಮೊತ್ತದ ಸೂಚನೆ ನೀಡಿದ್ದರು. ಆದರೆ ಮುಂದಿನ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. 5.3 ಓವರ್‌ ಆದಾಗ ತಂಡ 43 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು.

ಬಳಿಕ ರಿಚಾ ಘೋಷ್‌ (28) ಮತ್ತು ಆಲ್‌ರೌಂಡರ್ ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟೀಲ್‌ (23) ತಂಡದ ಮೊತ್ತ 150ರ ಗಡಿ ದಾಟಲು ಕಾರಣರಾದರು.

ಬೆಂಗಳೂರಿನ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು 60 ರನ್‌ಗಳಿಂದ ಪರಾಭವಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 18.4 ಓವರ್‌ಗಳಲ್ಲಿ 155 (ಸ್ಮೃತಿ ಮಂದಾನ 23, ಸೋಫಿ ಡಿವೈನ್‌ 16, ಎಲೈಸ್‌ ಪೆರಿ 13, ರಿಚಾ ಘೋಷ್‌ 28, ಕನಿಕಾ ಅಹುಜಾ 22, ಶ್ರೇಯಾಂಕಾ ಪಾಟೀಲ್‌ 23, ಮೇಗನ್‌ ಶುಟ್‌ 20, ಹೇಯ್ಲಿ ಮ್ಯಾಥ್ಯೂಸ್‌ 28ಕ್ಕೆ 3, ಸಾಯಿಕಾ ಇಶಾಕ್‌ 26ಕ್ಕೆ 2, ಅಮೇಲಿ ಕೆರ್‌ 30ಕ್ಕೆ 2, ಪೂಜಾ ವಸ್ತ್ರಕರ್‌ 8ಕ್ಕೆ 1).

ಮುಂಬೈ ಇಂಡಿಯನ್ಸ್: 14.2 ಓವರ್‌ಗಳಲ್ಲಿ 1ಕ್ಕೆ 159 (ಹೇಯ್ಲಿ ಮ್ಯಾಥ್ಯೂಸ್‌ ಔಟಾಗದೆ 77, ಯಷ್ಟಿಕಾ ಭಾಟಿಯಾ 23, ನತಾಲಿ ಸಿವೆರ್ ಬ್ರಂಟ್‌ ಔಟಾಗದೆ 55; ಪ್ರೀತಿ ಬೋಸ್‌ 34ಕ್ಕೆ 1). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್‌ಗಳ ಜಯ

ಇಂದಿನ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್– ಯುಪಿ ವಾರಿಯರ್ಸ್

ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT