ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಪಿಎಲ್ ಕ್ರಿಕೆಟ್: ಮುಂಬೈಗೆ ರೋಚಕ ಜಯ

ಸಜನಾ ಸಿಕ್ಸರ್, ಹರ್ಮನ್, ಯಷ್ಟಿಕಾ ಅರ್ಧಶತಕ
Published 23 ಫೆಬ್ರುವರಿ 2024, 18:44 IST
Last Updated 23 ಫೆಬ್ರುವರಿ 2024, 18:44 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಹುಡುಗಿ ಸಜೀವನ್ ಸಜನಾ ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಡೆದ ‘ವಿಜಯದ ಸಿಕ್ಸರ್‌’ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಚಕ ಗೆಲುವಿಗೆ ಕಾರಣವಾಯಿತು. ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕನಸು ಕೈಗೂಡಲಿಲ್ಲ.

172 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ತಂಡಕ್ಕೆ ಕೊನೆಯ ಎಸೆತದಲ್ಲಿ ಐದು ರನ್‌ಗಳ ಅಗತ್ಯವಿತ್ತು. ಆಗ ಕ್ರೀಸ್‌ಗೆ ಬಂದ ಸಜನಾ ಅವರು ಬೌಲರ್ ಅಲಿಸ್ ಕ್ಯಾಪ್ಸಿ ಎಸೆತವನ್ನು ಸಿಕ್ಸರ್‌ಗೆ ಎತ್ತಿದರು. ಮುಂಬೈ ತಂಡವು 4 ವಿಕೆಟ್‌ಗಳಿಂದ ಜಯಿಸಿತು.

ಒಂದೊಮ್ಮೆ ಸಜನಾ ಸಿಕ್ಸರ್‌ ಬಾರಿಸುವಲ್ಲಿ ವಿಫಲರಾಗಿದ್ದರೆ, ಯಷ್ಟಿಕಾ ಭಾಟಿಯಾ (57; 45ಎ, 4X8, 6X2) ಮತ್ತು ಹರ್ಮನ್‌ಪ್ರೀತ್ (55; 34ಎ, 4X7, 6X1) ಚೆಂದದ ಅರ್ಧಶತಕಗಳು ವ್ಯರ್ಥವಾಗುತ್ತಿದ್ದವು. ಆದರೆ ಡೆಲ್ಲಿ ತಂಡದ ಅಲಿಸ್ ಕ್ಯಾಪ್ಸಿ (75; 53ಎ, 4X9, 6X3) ಹಾಗೂ ಜೆಮೀಮಾ ರಾಡ್ರಿಗಸ್ (42; 24ಎ, 4X5, 6X2) ಅವರ ಜೊತೆಯಾಟಕ್ಕೆ ಗೆಲುವಿನ ಮೆರಗು ಮೂಡುತ್ತಿತ್ತು. ಆದರೆ ಹಾಗಾಗಲಿಲ್ಲ.

ಗುರಿ ಬೆನ್ನಟ್ಟಿದ ಮುಂಬೈ ತಂಡ ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಆಘಾತ ಅನುಭವಿಸಿತು. ಮೆರಿಜಾನೆ ಕ್ಯಾಪ್ ಬೌಲಿಂಗ್‌ನಲ್ಲಿ ಹೆಯಲಿ ಮ್ಯಾಥ್ಯೂಸ್ ಖಾತೆ ತೆರೆಯದೇ ಔಟಾದರು. ಈ ಹೊತ್ತಿನಲ್ಲಿ ಯಷ್ಟಿಕಾ ಜವಾಬ್ದಾರಿಯುತ ಆಟವಾಡಿದರು. ಅವರು ನಥಾಲಿ ಶಿವರ್ ಬ್ರಂಟ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ನಾಯಕಿ ಹರ್ಮನ್‌ಪ್ರೀತ್ ಅವರೊಂದಿಗೆ 56 ರನ್ ಸೇರಿಸಿದರು.

ಆದರೆ 14ನೇ ಓವರ್‌ನಲ್ಲಿ ಯಷ್ಟಿಕಾ ವಿಕೆಟ್ ಕಬಳಿಸಿದ ಅರುಂಧತಿ ರೆಡ್ಡಿ, ಡೆಲ್ಲಿ ತಂಡದಲ್ಲಿ ಜಯದ ಆಸೆ ಚಿಗುರಿಸಿದರು. ಆದರೆ ಹರ್ಮನ್ ಬೌಲರ್‌ಗಳ ತಂತ್ರಗಳನ್ನು ವಿಫಲಗೊಳಿಸಿದರು. ಅಮೆಲಿಯಾ ಕೇರ್ ಕೂಡ 18 ಎಸೆತಗಳಲ್ಲಿ 24 ರನ್‌ ಗಳಿಸಿದರು.

ಕೊನೆಯ ಎರಡು ಓವರ್‌ಗಳಲ್ಲಿ 22 ರನ್‌ಗಳ ಅಗತ್ಯವಿದ್ದಾಗ ಇನಿಂಗ್ಸ್‌ನಲ್ಲಿ ನಾಟಕೀಯ ತಿರುವುಗಳು ಕಂಡುಬಂದವು. ಅಮೆಲಿಯಾ ಔಟಾದರು. 19ನೇ ಓವರ್‌ನಲ್ಲಿ ಅನಾಬೆಲ್ ಮೊದಲ ಐದು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಕೊಟ್ಟಿದ್ದರು. ಆದರೆ ಕೊನೆ ಎಸೆತದಲ್ಲಿ ಹರ್ಮನ್ ಸಿಕ್ಸ್ ಹೊಡೆಯುವ ಮೂಲಕ ತಮ್ಮ ಅರ್ಧಶತಕ ಪೂರೈಸಿಕೊಂಡರು.

ಕೊನೆಯ ಓವರ್‌ನಲ್ಲಿ 12 ರನ್ ಅಗತ್ಯವಿತ್ತು. ಆ ಓವರ್ ಬೌಲಿಂಗ್ ಮಾಡಿದ ಕ್ಯಾಪ್ಸಿ ಮೊದಲ ಎಸೆತದಲ್ಲಿ ಪೂಜಾ ಹಾಗೂ ಐದನೇ ಎಸೆತದಲ್ಲಿ ಹರ್ಮನ್‌ಪ್ರೀತ್ ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಕೊನೆಯ ಎಸೆತದಲ್ಲಿ ಮಿಂಚಿದ ಸಜನಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 171 (ಮೆಗ್ ಲ್ಯಾನಿಂಗ್ 31, ಅಲಿಸ್ ಕ್ಯಾಪ್ಸಿ 75, ಜೆಮೀಮಾ ರಾಡ್ರಿಗಸ್ 42, ಮೆರಿಜೇನ್ ಕ್ಯಾಪ್ 16, ನಥಾಲಿ ಸಿವರ್ ಬ್ರಂಟ್ 33ಕ್ಕೆ2, ಅಮೆಲಿಯಾ ಕೆರ್ 43ಕ್ಕೆ2) ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 173 (ಯಷ್ಟಿಕಾ ಭಾಟಿಯಾ 57, ಹರ್ಮನ್‌ಪ್ರೀತ್ ಕೌರ್ 55, ಅಮೆಲಿಯಾ ಕೆರ್ 24,ಅರುಂಧತಿ ರೆಡ್ಡಿ 27ಕ್ಕೆ2, ಅಲಿಸ್ ಕ್ಯಾಪ್ಸಿ 23ಕ್ಕೆ2) ಫಲಿತಾಂಶ:ಮುಂಬೈ ಇಂಡಿಯನ್ಸ್ ತಂಡಕ್ಕೆ 4 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್.

  ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ಚಿತ್ರ ನಟ ಟೈಗರ್ ಶ್ರಾಫ್ ನೃತ್ಯ ಪ್ರದರ್ಶನ ನೀಡಿದರು  –ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
  ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ಚಿತ್ರ ನಟ ಟೈಗರ್ ಶ್ರಾಫ್ ನೃತ್ಯ ಪ್ರದರ್ಶನ ನೀಡಿದರು  –ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ಚಿತ್ರ ನಟ ಶಾರುಕ್ ಖಾನ್ ತಂಡದ ನಾಯಕಿಯರ ಜೊತೆ  – ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಮಹಿಳಾ ಪ್ರೀಮಿಯರ್ ಲೀಗ್‌ ಉದ್ಘಾಟನೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಲಿವುಡ್ ಚಿತ್ರ ನಟ ಶಾರುಕ್ ಖಾನ್ ತಂಡದ ನಾಯಕಿಯರ ಜೊತೆ  – ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ರಥದಲ್ಲಿ ಬಂದ ನಾಯಕಿಯರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಬಾಲಿವುಡ್ ನಟರ ರಂಗು ಚೆಲ್ಲಿತು. ಟೂರ್ನಿಯಲ್ಲಿ ಆಡುವ ಐದು ತಂಡಗಳ ನಾಯಕಿಯರನ್ನು ಅಲಂಕೃತ ರಥಗಳಲ್ಲಿ ವೇದಿಕೆಗೆ ಕರೆತಂದಿದ್ದು ಗಮನ ಸೆಳೆಯಿತು. ಸಿಡಿಮದ್ದುಗಳ ಸದ್ದು ಝಗಮಗಿಸುವ ದೀಪಗಳ ನಡುವೆ ನಡೆದ ಸಮಾರಂಭದಲ್ಲಿ ರಥಗಳಲ್ಲಿ ಸಾಲು ಸಾಲಾಗಿ ಬಂದ ನಾಯಕಿಯರಾದ   ಮೆಗ್‌ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್)  ಬೆತ್ ಮೂನಿ (ಗುಜರಾತ್ ಟೈಟನ್ಸ್) ಸ್ಮೃತಿ ಮಂದಾನ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಅಲಿಸಾ ಹೀಲಿ (ಯುಪಿ ವಾರಿಯರ್ಸ್) ಮತ್ತು ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್) ಅವರನ್ನು ಬಾಲಿವುಡ್ ತಾರೆ ಶಾರೂಕ್ ಖಾನ್ ಸ್ವಾಗತಿಸಿದರು. ಹಾಲಿ ಚಾಂಪಿಯನ್ ಮುಂಬೈ ತಂಡದ ನಾಯಕಿ ಡಬ್ಲ್ಯುಪಿಎಲ್ ಕಪ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕಾರ್ಯದರ್ಶಿ ಜಯ್ ಶಾ ರಾಜೀವ್ ಶುಕ್ಲಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT