ಸೋಮವಾರ, ಆಗಸ್ಟ್ 26, 2019
20 °C

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್‌ ಸೇರ್ಪಡೆ 

Published:
Updated:

ದುಬೈ: ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್‌ ಸೇರ್ಪಡೆಯಾಗಿದೆ. 

ಕೂಟದಲ್ಲಿ ಮಹಿಳಾ ಟಿ20ಗೆ ಅವಕಾಶ ನೀಡುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮತ್ತು ಇಂಗ್ಲೆಂಡ್‌–ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ಕೋರಿಕೆ ಸಲ್ಲಿಸಿದ್ದವು. ಈ ಕೋರಿಕೆ ಮನ್ನಿಸಿರುವ ‘ಕಾಮನ್‌ವೆಲ್ತ್‌ ಗೇಮ್‌ ಫೆಡರೇಷನ್‌’ (ಸಿಜಿಎಫ್‌) ಮಹಿಳಾ ಟಿ20 ಕ್ರಿಕೆಟ್‌ಅನ್ನು ಕೂಟದಲ್ಲಿ ಸೇರ್ಪಡೆ ಮಾಡಿರುವುದಾಗಿ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಮನು ಸಾವ್ನೆ, ‘ಮಹಿಳಾ ಕ್ರಿಕೆಟ್‌ಗೆ, ಜಗತ್ತಿನ ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಐತಿಹಾಸಿಕ ಕ್ಷಣ,’ ಎಂದು ಬಣ್ಣಿಸಿದ್ದಾರೆ. 

ಮಹಿಳೆಯರ ಕ್ರಿಕೆಟ್‌ಗೆ ಜಾಗತಿಕ ಮನ್ನಣೆ ಒದಗಿಸಿಕೊಡಲು ಕಾಮನ್‌ವೆಲ್ತ್ ಕೂಟದಲ್ಲಿ ಈ ಕ್ರೀಡೆಯನ್ನು ಸೇರಿಸಲು ಒತ್ತಾಯ ಮಾಡಲಾಗುತ್ತಿದೆ. ಈ ಪ್ರಯತ್ನಕ್ಕೆ ಎಲ್ಲ ಸದಸ್ಯ ರಾಷ್ಟ್ರಗಳಿಂದ ಬೆಂಬಲ ಸಿಕ್ಕಿದೆ ಎಂದು ಸಿಜಿಎಫ್‌ಗೆ ಕೋರಿಕೆ ಸಲ್ಲಿಸುವುದಕ್ಕೂ ಮೊದಲು ಐಸಿಸಿ ತಿಳಿಸಿತ್ತು. 

ಕ್ವಾಲಾಲಂಪುರದಲ್ಲಿ 1998ರಲ್ಲಿ ನಡೆದಿದ್ದ ಕೂಟದಲ್ಲಿ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಪುರುಷ ತಂಡಗಳು ಮಾತ್ರ ಆಗ ಪಾಲ್ಗೊಂಡಿದ್ದವು. ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದಿತ್ತು.

Post Comments (+)