ಸೋಮವಾರ, ಜುಲೈ 4, 2022
24 °C
ಮಹಿಳೆಯರ ವಿಶ್ವಕ‌ಪ್ ಕ್ರಿಕೆಟ್ ಟೂರ್ನಿ: ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

ಮಹಿಳೆಯರ ವಿಶ್ವಕ‌ಪ್| ಸೆಮಿಫೈನಲ್‌ ಕನಸಿನಲ್ಲಿ ಮಿಥಾಲಿ ರಾಜ್ ಬಳಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್ ಚರ್ಚ್‌: ಅನಿಶ್ಚಿತತೆಯಲ್ಲಿರುವ ಭಾರತ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಸೆಮಿಫೈನಲ್ ಪ್ರವೇಶಿಸಬೇಕಾಗದರೆ ಈ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗಕ್ಕೆ ಜಯ ಅನಿವಾರ್ಯ. 

ಕಳೆದ ಬಾರಿಯ ರನ್ನರ್ ಅಪ್ ಭಾರತಕ್ಕೆ ಈ ಆವೃತ್ತಿಯಲ್ಲಿ ಇದುವರೆಗೆ ನಿರೀಕ್ಷಿತ ಸಾಮರ್ಥ್ಯ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ. ಆರು ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಗೆಲ್ಲಲು ತಂಡಕ್ಕೆ ಸಾಧ್ಯವಾಗಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದುಕೊಳ್ಳಬಹುದಾಗಿದೆ.  

ಒಂದು ವೇಳೆ ದಕ್ಷಿಣ ಆಫ್ರಿಕಾ ಗೆದ್ದರೂ ಇದಕ್ಕೂ ಮೊದಲು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಇಂಗ್ಲೆಂಡ್ ಸುಲಭವಾಗಿ ಮಣಿದರೆ ಭಾರತದ ಕನಸು ನನಸಾಗಲಿದೆ.  

ಟೂರ್ನಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗದ ಸತತ ವೈಫಲ್ಯ ಕಂಡಿದೆ. ಬೌಲಿಂಗ್‌ನಲ್ಲೂ ಅತ್ಯುತ್ತಮ ಸಾಧನೆ ಈ ವರೆಗೆ ಮೂಡಿಬರಲಿಲ್ಲ. ನಾಯಕಿ ಮಿಥಾಲಿ ರಾಜ್ ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಅವರು ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ತಲಾ ಒಂದೊಂದು ಶತಕ ಗಳಿಸಿದ್ದು ಬಿಟ್ಟರೆ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರಿಗೂ ಗಮನಾರ್ಹ ಸಾಧನೆ ಮಾಡಲು ಆಗಲಿಲ್ಲ.  

ಬೌಲಿಂಗ್ ವಿಭಾಗದಲ್ಲಿ ಮಧ್ಯಮ ವೇಗಿ ಮೇಘನಾ ಸಿಂಗ್ ಬದಲಿಗೆ ಸ್ಪಿನ್ನರ್ ಪೂನಂ ಯಾದವ್ ಅವರಿಗೆ ಅವಕಾಶ ನೀಡಿರುವುದರಿಂದ ತಂಡಕ್ಕೆ ಹೆಚ್ಚು ಪ್ರಯೋಜನವೇನೂ ಆಗಲಿಲ್ಲ.

ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವುದರಿಂದ ಈ ಪಂದ್ಯದಲ್ಲಿ ನಿರಾತಂಕವಾಗಿ ಆಡಲಿದೆ. 

ಪಂದ್ಯ ಆರಂಭ: ಬೆಳಿಗ್ಗೆ 6.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು