ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸರ್ಕಾರದ ಅಂಗಳದಲ್ಲಿ ‘ಚೆಂಡು’

ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಲು ಭಾರತಕ್ಕೆ ಒತ್ತಡ
Last Updated 20 ಫೆಬ್ರುವರಿ 2019, 19:54 IST
ಅಕ್ಷರ ಗಾತ್ರ

ದೆಹಲಿ/ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯವೆಂದರೆ ಕುತೂಹಲದ ಕಣಜ. ಉಭಯ ತಂಡಗಳು ಯಾವಾಗ ಮುಖಾಮುಖಿಯಾದಾಗಲೂ ವಿಶ್ವದ ಕಣ್ಣು ಆ ಪಂದ್ಯದತ್ತ ನೆಟ್ಟಿರುತ್ತದೆ.

ಇದೀಗ ಉಭಯ ತಂಡಗಳು ಮುಖಾಮುಖಿಯಾಗಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಪುಲ್ವಾಮಾ ಭಯೋತ್ಪಾದನೆ ದಾಳಿಯನ್ನು ಖಂಡಿಸಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯಗಳು ಹೆಚ್ಚುತ್ತಿವೆ. ಭಾರತ ಸರ್ಕಾರವು ನೀಡುವ ನಿರ್ಧಾರದತ್ತ ಬಿಸಿಸಿಐ ಚಿತ್ತ ನೆಟ್ಟಿದೆ.

ಮೇ 30ರಂದು ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಲೀಗ್ ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಒಂದೊಮ್ಮೆ ಬಿಸಿಸಿಐ ಈ ಪಂದ್ಯವನ್ನು ಬಹಿಷ್ಕರಿಸಿದರೆ, ಪಾಕ್ ತಂಡವು ಮೂರು ಪಾಯಿಂಟ್‌ಗಳನ್ನು ಪಡೆಯುತ್ತದೆ. ಅದರಿಂದಾಗಿ ಮುಂದಿನ ಹಂತಕ್ಕೆ ಸಾಗಲು ಆ ತಂಡಕ್ಕೆ ಬಲ ಬರುತ್ತದೆ. ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾದರೆ ಭಾರತವು ಪಂದ್ಯವನ್ನು ಬಹಿಷ್ಕರಿಸಿದರೆ ಟೂರ್ನಿಯಿಂದಲೇ ಹೊರಬೀಳಬೇಕಾಗುತ್ತದೆ. ಅಲ್ಲದೇ ಐಸಿಸಿಯ ಕಠಿಣ ನಿಯಮಗಳ ಪ್ರಕಾರ ಬಿಸಿಸಿಐ ದೊಡ್ಡ ದಂಡ ಪಾವತಿಸಬೇಕಾಗಬಹುದು.

‘ಪ್ರತಿಯೊಂದು ಟೂರ್ನಿಗೂ ಅದರದ್ದೇ ಆದ ನಿಯಮಾವಳಿ ಇರುತ್ತದೆ. ಅದನ್ನು ಮೀರುವುದು ಯಾವುದೇ ತಂಡಕ್ಕೂ ಸುಲಭವಲ್ಲ. ವಿಶ್ವಮಟ್ಟದ ಟೂರ್ನಿಯಲ್ಲಂತೂ ಇದು ಕಷ್ಟಸಾಧ್ಯ. ಬಹಿಷ್ಕರಿಸಿದರೆ ದೊಡ್ಡ ದಂಡ ಮತ್ತು ಅಮಾನತು ಶಿಕ್ಷೆಯನ್ನೂ ಅನುಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಿಸಿಸಿಐ ಮತ್ತು ಭಾರತ ಸರ್ಕಾರಗಳು ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು’ ಎಂದು ಹಿರಿಯ ಕ್ರಿಕೆಟಿಗ ಮತ್ತು ಉತ್ತರಪ್ರದೇಶದ ಸಚಿವ ಚೇತನ್ ಚೌಹಾಣ್‌ ಸಲಹೆ ನೀಡಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತವು ಇದುವರೆಗೆ ಪಾಕ್ ವಿರುದ್ಧ ಒಂದೂ ಪಂದ್ಯ ಸೋತಿಲ್ಲ. 1992ರಿಂದ 2015ರವರೆಗೆ ಐದು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳಲ್ಲಿಯೂ ಭಾರತವೇ ಮೇಲುಗೈ ಸಾಧಿಸಿದೆ.

2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆದಿಲ್ಲ. ಆದರೆ, ಐಸಿಸಿಯ ಏಷ್ಯಾ ಕಪ್, ಚಾಂಪಿಯನ್ಸ್‌ ಟ್ರೋಫಿ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು.ದ್ವಿಪಕ್ಷೀಯ ಸರಣಿಗಳ ಒಪ್ಪಂದವನ್ನು ಭಾರತವು ಉಲ್ಲಂಘಿಸಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿ, ದೊಡ್ಡ ಮೊತ್ತದ ಪರಿಹಾದ ಬೇಡಿಕೆ ಇಟ್ಟಿತ್ತು. ಐಪಿಎಲ್‌ನಲ್ಲಿಯೂ ಪಾಕ್ ಆಟಗಾರರನ್ನು ಯಾವುದೇ ಫ್ರಾಂಚೈಸ್ ಸೇರ್ಪಡೆ ಮಾಡಿಕೊಂಢಿಲ್ಲ.

‘ದೇಶ ಮೊದಲು. ಉಳಿದೆದ್ದಲ್ಲವೂ ನಂತರ. ಭಾರತವು ಪಾಕ್ ವಿರುದ್ಧದ ಪಂದ್ಯವನ್ನು ಭಾರತವು ಬಹಿಷ್ಕರಿಸಬೇಕು’ ಎಂದು ಮಂಗಳವಾರ ಹಿರಿಯ ಸ್ಪಿನ್ನರ್ ಹರಭಜನ್ ಸಿಂಗ್ ಹೇಳಿದ್ದರು. ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್‌ ಬೆಂಬಲಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್‌ ಸಿಆರ್‌ಪಿಎಫ್ ಯೋಧರ ಬಸ್‌ ಮೇಲೆ ಬಾಂಬ್ ದಾಳಿ ನಡೆಸಿದ್ದ. ಈ ಘಟನೆಯಲ್ಲಿ 49 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಇದರಿಂದಾಗಿ ಪಾಕ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ತಮ್ಮ ಕ್ರೀಡಾಂಗಣಗಳಲ್ಲಿ ಇದ್ದ ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನು ತೆರವುಗೊಳಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿವೆ.

ಸರ್ಕಾರದ ನಿರ್ಧಾರಕ್ಕೆ ಬದ್ಧ: ಬಿಸಿಸಿಐ
ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಭಾರತವು ಕಣಕ್ಕಿಳಿಯುವ ಕುರಿತು ಕೇಂದ್ರ ಸರ್ಕಾರವು ನಿರ್ಧರಿಸಲಿದೆ. ಒಂದೊಮ್ಮೆ ಸರ್ಕಾರವು ನಿರಾಕರಿಸಿದರೆ ಪಂದ್ಯ ಬಹಿಷ್ಕರಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ದೇಶಕ್ಕೆ ಮೊದಲ ಆದ್ಯತೆ. ಸರ್ಕಾರವು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಪಾಕ್‌ಗೆ ತಕ್ಕ ಪಾಠ ಕಲಿಸಬೇಕು:ಚಾಹಲ್
ನವದೆಹಲಿ (ಪಿಟಿಐ): ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದನೆ ದಾಳಿಯು ಅಮಾನವೀಯ ಮತ್ತು ಅಕ್ಷಮ್ಯ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದೇ ಸಕಾಲ ಎಂದು ಭಾರರ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ಹೇಳಿದ್ದಾರೆ.

ಬುಧವಾರ ಅವರು ‘ಇಂಡಿಯಾ ಟುಡೆ’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ವಿಶ್ವಕಪ್‌ನಲ್ಲಿ ಭಾರತವು ಪಾಕ್ ಎದುರಿನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಒಬ್ಬರು , ಇಬ್ಬರು ಆಟಗಾರರು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದೇನಿದ್ದರೂ ಭಾರತ ಸರ್ಕಾರ ಮತ್ತು ಬಿಸಿಸಿಐ ತೆಗೆದುಕೊಳ್ಳಬೇಕಾದ ನಿರ್ಧಾರ. ಮಂಡಳಿಯ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ’ ಎಂದರು.

‘ಈ ಘಟನೆಯಿಂದ ತೀವ್ರ ದುಃಖವಾಗಿದೆ. ಪ್ರತಿ ಎರಡು ಮೂರು ತಿಂಗಳುಗಳಿಗೊಮ್ಮೆ ಉಗ್ರಗಾಮಿಗಳ ದಾಳಿಗೆ ನಾಗರಿಕರು, ಅಮಾಯಕರು ಮತ್ತು ಸೈನಿಕರು ಬಲಿಯಾಗುತ್ತಿದ್ದಾರೆ. ಇದು ನಿಲ್ಲಬೇಕು. ಅದಕ್ಕೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಲೆಗ್‌ಸ್ಪಿನ್ನರ್ ಚಾಹಲ್ ಹೇಳಿದರು.

ಬಿಸಿಸಿಐ –ಐಸಿಸಿ ನಿರ್ಧರಿಸಲಿ: ಸಚಿವ
‘ಕ್ರಿಕೆಟ್ ಕುರಿತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ದೇಶದಲ್ಲಿ ಪಾಕ್‌ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಸಿನೆಮಾ, ಸಂಗೀತ ಕ್ಷೇತ್ರಗಳಲ್ಲಿ ಪಾಕ್‌ ಕಲಾವಿದರನ್ನು ಬಹಿಷ್ಕರಿಸುವ ಅಭಿಯಾನ ನಡೆಯುತ್ತಿದೆ. ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸಿದ ನಂತರ ಬಿಸಿಸಿಐ ಮತ್ತು ಐಸಿಸಿಯು ನಿರ್ಧಾರ ಕೈಗೊಳ್ಳಬೇಕು’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

‘ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇದುವರೆಗೂ ಹುತ್ಮಾತ್ಮ ಸೈನಿಕರ ಕುರಿತು ಅಥವಾ ಘಟನೆಯ ಕುರಿತು ವಿಷಾದವನ್ನೂ ವ್ಯಕ್ತಪಡಿಸಿಲ್ಲ.’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶ ಮೊದಲು..
ದೇಶ ಮೊದಲು. ಉಳಿದದ್ದೆಲ್ಲ ಆಮೇಲೆ. ಬೇರೆಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಭಟನೆ ತೀವ್ರವಾಗುತ್ತಿದೆ. ಭಾರತ ತಂಡವು ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಕಣಕ್ಕಿಳಿಯುವ ಬಗ್ಗೆ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರವನ್ನು ಬಿಸಿಸಿಐ ಪಾಲಿಸುವುದು ಖಚಿತ. ಒಂದೊಮ್ಮೆ ಪಂದ್ಯ ಬಹಿಷ್ಕರಿಸಿದರೆ ಐಸಿಸಿಯು ದಂಡ ವಿಧಿಸಬಹುದು. ಅದೇನೂ ದೊಡ್ಡ ವಿಷಯವಲ್ಲ ಎಂದು ಹಿರಿಯ ಅಂತರರಾಷ್ಟ್ರೀಯ ಅಂಪೈರ್ ವಿ.ಎನ್. ಕುಲಕರ್ಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT