ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾಗೆ ಜಯದ ಲಯಕ್ಕೆ ಮರಳುವ ನಿರೀಕ್ಷೆ

ಶ್ರೀಲಂಕಾ ತಂಡಕ್ಕೆ ಮಷ್ರಫೆ ಮೊರ್ತಜಾ ಬಳಗದ ಸವಾಲು; ನುವಾನ್ ಪ್ರದೀಪ್ ಅಲಭ್ಯ
Last Updated 10 ಜೂನ್ 2019, 20:15 IST
ಅಕ್ಷರ ಗಾತ್ರ

ಬ್ರಿಸ್ಟಲ್: ಸತತ ಎರಡು ಸೋಲಿನಿಂದ ಕಂಗಾಲಾಗಿರುವ ಬಾಂಗ್ಲಾದೇಶ ತಂಡ ಮಂಗಳವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು, ಜಯದ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.

ಟೂರ್ನಿಯಲ್ಲಿ ಬಾಂಗ್ಲಾದೇಶ ಉತ್ತಮ ಆರಂಭವನ್ನೇನೊ ಮಾಡಿತ್ತು. ದಕ್ಷಿಣ ಆಫ್ರಿಕಾವನ್ನು ಮಣಿಸಿದ ತಂಡ ಆ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಮೊತ್ತ (6ಕ್ಕೆ 330) ದಾಖಲಿಸಿ ಗಮನ ಸೆಳೆದಿತ್ತು. ಉಳಿದ ತಂಡಗಳಿಗೆ ತನ್ನನ್ನು ಕಡೆಗಣಿಸುವಂತಿಲ್ಲ ಎಂಬ ಸಂದೇಶ ರವಾನಿಸಿತ್ತು.

ಆದರೆ ನಂತರದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೋರಾಡಿದರೂ ಎರಡು ವಿಕೆಟ್‌ಗಳಿಂದ ಸೋಲನುಭವಿತು. ಆತಿಥೇಯ ಇಂಗ್ಲೆಂಡ್‌ ತಂಡವಂತೂ 106 ರನ್‌ಗಳಿಂದ ಸುಲಭವಾಗಿ ಬಾಂಗ್ಲಾ ವಿರುದ್ಧ ಜಯಗಳಿಸಿತ್ತು.

ತಂಡದ ಆರಂಭ ಆಟಗಾರರು ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಸೌಮ್ಯ ಸರ್ಕಾರ್ ಮತ್ತು ತಮೀಮ್ ಇಕ್ಬಾಲ್ ಅವರಿಗೆ ಮೂರು ಪಂದ್ಯಗಳಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗಿಲ್ಲ.

ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಅವರು ಇಂಗ್ಲೆಂಡ್ ವಿರುದ್ಧ ಶತಕ ದಾಖಲಿಸಿ ಮಿಂಚಿದ್ದರು. ಹೀಗಾಗಿ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ಅವರ ಹೆಗಲೇರಿದೆ. ಬೌಲಿಂಗ್ ವಿಭಾಗವೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲರ್‌ಗಳು 386 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಭರವಸೆಯಲ್ಲಿ ಶ್ರೀಲಂಕಾ: ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ ಶ್ರೀಲಂಕಾ ನಂತರ ಪುಟಿದೆದ್ದಿದೆ. ಹೀಗಾಗಿ ಗೆಲುವಿನ ಭರವಸೆ ಹೊಂದಿದೆ. ಅಫ್ಗಾನಿಸ್ತಾನವನ್ನು ಮಣಿಸಿರುವ ದಿಮುತ್ ಕರುಣಾರತ್ನೆ ಬಳಗ, ತನ್ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು ಮಳೆಯ ಕಾರಣ ಒಂದು ಪಾಯಿಂಟ್‌ಗೆ ಸಮಾಧಾನಪಡಬೇಕಾಯಿತು.

ನುವಾನ್‌ ಪ್ರದೀಪ್‌ ಅಲಭ್ಯ: ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿರುವುದು ಶ್ರೀಲಂಕಾಕ್ಕೆ ಇನ್ನೊಂದು ಸಮಸ್ಯೆಯಾಗಿದೆ. ಆಡಿದ ಎರಡು ಪಂದ್ಯಗಳಲ್ಲಿ ತಂಡಕ್ಕೆ 50 ಓವರ್‌ ಪೂರ್ತಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ.

ಅಫ್ಗಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಯಶಸ್ವಿ ಬೌಲರ್‌ ಎನಿಸಿದ್ದ ವೇಗದ ಬೌಲರ್‌ ಬೆರಳಿನ ಗಾಯದಿಂದಾಗಿ ಮಂಗಳವಾರದ ಮಂಗಳವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಅನುಭವಿ ಬೌಲರ್‌ ಮಾಲಿಂಗ ಮೇಲೆ ಒತ್ತಡ ಹೆಚ್ಚಿದೆ.

*
ಬೌಲಿಂಗ್ ವಿಭಾಗದ ವೈಫಲ್ಯ ಬೇಸರ ಮೂಡಿಸಿದೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಮಿಂಚಿದ್ದ ಬೌಲರ್‌ಗಳು ಶ್ರೀಲಂಕಾ ವಿರುದ್ಧವೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ.
-ಶಕೀಬ್ ಅಲ್ ಹಸನ್, ಬಾಂಗ್ಲಾದೇಶ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT