ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಜಯದ ದಾರಿ ತೋರಿದ ರೂಟ್‌

ಬಾರ್ಬಡಿಡ್‌ನ ಜೋಫ್ರಾ ದಾಳಿ; ಬಸವಳಿದ ಕೆರಿಬಿಯನ್ನರು
Last Updated 14 ಜೂನ್ 2019, 20:00 IST
ಅಕ್ಷರ ಗಾತ್ರ

ಸೌತಾಂಪ್ಟನ್: ಇಂಗ್ಲೆಂಡ್‌ ತಂಡದ ಜೋ ರೂಟ್ ಅವರ ಅಜೇಯ ಶತಕ ಮತ್ತು ಚುರುಕಾದ ಬೌಲಿಂಗ್‌ ಮುಂದೆ ವೆಸ್ಟ್ ಇಂಡೀಸ್ ತಂಡವು ಶುಕ್ರವಾರ ಸೋಲಿನ ಕಹಿ ಅನುಭವಿಸಿತು.

ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ತಂಡ 44.4 ಓವರ್‌ಗಳಲ್ಲಿ 212 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಆತಿಥೇಯರು 33.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 213 ರನ್ ಹೊಡೆದರು. ಇಯಾನ್ ಮಾರ್ಗನ್ ಬಳಗವು 8 ವಿಕೆಟ್‌ಗಳಿಂದ ಗೆದ್ದಿತು. ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ಮೂರನೇ ಗೆಲುವನ್ನು ದಾಖಲಿಸಿತು.

ಕೆರಿಬಿಯನ್ ನಾಡಿನ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅಬ್ಬರಿಸದಂತೆ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ (30ಕ್ಕೆ3) ಮತ್ತು ಸಾಂದರ್ಭಿಕ ಸ್ಪಿನ್ನರ್ ಜೋ ರೂಟ್ (27ಕ್ಕೆ2) ನೋಡಿಕೊಂಡರು. ಬ್ಯಾಟಿಂಗ್‌ನಲ್ಲಿ ಮಿಂಚಿದ ಆರಂಭ ಆಟಗಾರ ರೂಟ್ (ಅಜೇಯ 100; 94 ಎಸೆತ, 11 ಬೌಂಡರಿ) ಶತಕ ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 16ನೇ ಶತಕ. ಈ ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಇಂಗ್ಲೆಂಡ್ ತಂಡದ ನಾಲ್ಕನೇ ಬ್ಯಾಟ್ಸ್‌ಮನ್ ಅವರು. ಬೇಸ್ಟೊ (45) ಜೊತೆ ಅವರು ಮೊದಲ ವಿಕೆಟ್‌ಗೆ 95 ರನ್‌ ಸೇರಿಸಿದರು.

ಆರಂಭದಲ್ಲೇ ಜೀವದಾನದ ಪ್ರಯೋಜನ ಪಡೆದ ಕ್ರಿಸ್ ಗೇಲ್ (36; 41 ಎಸೆತಗಳು, 5ಬೌಂಡರಿ, 1ಸಿಕ್ಸರ್) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ, ಎವಿನ್ ಲೂಯಿಸ್ (2 ರನ್) ಮತ್ತು ಶಾಯ್ ಹೋಪ್ (11) ಬೇಗನೆ ನಿರ್ಗಮಿಸಿದರು. ಇದರಿಂದಾಗಿ ಪವರ್ ಪ್ಲೇ ಹಂತದಲ್ಲಿಯೇ 55 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ನಿಕೊಲಸ್ ಪೂರನ್ (63; 78ಎಸೆತ, 3ಬೌಂಡರಿ, 1ಸಿಕ್ಸರ್) ಮತ್ತು ಶಿಮ್ರೊನ್ ಹೆಟ್ಮೆಯರ್ (39; 48ಎಸೆತ, 4ಬೌಂಡರಿ) ನಾಲ್ಕನೇ ವಿಕೆಟ್‌ಗೆ 89 ರನ್‌ ಸೇರಿಸಿ ತುಸು ಚೇತರಿಕೆ ನೀಡಿದರು.

30ನೇ ಓವರ್‌ ಬೌಲಿಂಗ್ ಮಾಡಿದ ಸಾಂದರ್ಭಿಕ ಬೌಲರ್ ಜೋ ರೂಟ್ ಅವರು ಈ ಜೊತೆಯಾಟವನ್ನು ಮುರಿದರು. ಶಿಮ್ರೊನ್ ಹೆಟ್ಮೆಯರ್ ವಿಕೆಟ್ ಗಳಿಸಿದರು. ತಮ್ಮ ಎಸೆತದಲ್ಲಿ ಕ್ಯಾಚ್ ಪಡೆದ ರೂಟ್ ಸಂಭ್ರಮಿಸಿದರು. ತಮ್ಮ ನಂತರದ ಇನ್ನೊಂದು ಓವರ್‌ನಲ್ಲಿ ಅವರು ಜೇಸನ್ ಹೋಲ್ಡರ್‌ ಅವರ ವಿಕೆಟ್‌ ಅನ್ನೂ ಕಬಳಿಸಿದರು.

ಬಾರ್ಬಡಿಸ್‌ನ ಜೋಫ್ರಾ ಆರ್ಚರ್ 40ನೇ ಓವರ್‌ನಲ್ಲಿ ಪೂರನ್ ವಿಕೆಟ್ ಕಬಳಿಸಿದರು. ಇದರಿಂದಾಗಿ ಇಂಗ್ಲೆಂಡ್ ಬಳಗವು ನಿರಾಳವಾಯಿತು. ಜೋಫ್ರಾ ಕೊನೆಯ ಹಂತದಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಮತ್ತು ಶೆಲ್ಡನ್ ಕಾಟ್ರೆಲ್ ಅವರ ವಿಕೆಟ್‌ಗಳನ್ನು ಪಡೆದರು.

16 ಎಸೆತಗಳಲ್ಲಿ 21 ರನ್‌ ಗಳಿಸಿದ ಆ್ಯಂಡ್ರೆ ರಸೆಲ್ ಅವರನ್ನು ಮಾರ್ಕ್ ವುಡ್ ಅವರು ಔಟ್ ಮಾಡಿದ್ದರಿಂದ ವಿಂಡೀಸ್‌ ತಂಡಕ್ಕೆ ದೊಡ್ಡ ಮೊತ್ತ ಗಳಿಸುವ ಅವಕಾಶ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT