ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ vs ಶ್ರೀಲಂಕಾ: ಲಂಕೆಗೆ ಲಸಿತ್ ಜಯದ ಕಾಣಿಕೆ

ಇಂಗ್ಲೆಂಡ್ ತಂಡಕ್ಕೆ ಆಘಾತ: ಮ್ಯಾಥ್ಯೂಸ್ ದಿಟ್ಟ ಬ್ಯಾಟಿಂಗ್
Last Updated 22 ಜೂನ್ 2019, 2:26 IST
ಅಕ್ಷರ ಗಾತ್ರ

ಲೀಡ್ಸ್‌: ಅನುಭವಿ ವೇಗಿ ಲಸಿತ್ ಮಾಲಿಂಗ ಮತ್ತೊಮ್ಮೆ ತಮ್ಮ ಭುಜಬಲ ಪರಾಕ್ರಮ ಮೆರೆದರು. ಶ್ರೀಲಂಕಾ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಸ್ಫೋಟಕ ಬ್ಯಾಟಿಂಗ್ ಪಡೆ ಇರುವ ಇಂಗ್ಲೆಂಡ್ ತಂಡಕ್ಕೆ 232 ರನ್‌ಗಳ ಸಾಧಾರಣ ಗುರಿಯನ್ನು ನೀಡಿದ್ದ ಶ್ರೀಲಂಕಾ ತಂಡವು 20 ರನ್‌ಗಳಿಂದ ಗೆದ್ದಿತು. ಲಸಿತ್ ಮಾಲಿಂಗ (43ಕ್ಕೆ4) ಅವರು ಜಯದ ರೂವಾರಿಯಾದರು. ಬೆನ್ ಸ್ಟೋಕ್ಸ್‌ (ಔಟಾಗದೆ 82) ಅವರ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ. ಇಂಗ್ಲೆಂಡ್ ತಂಡವು 43.4 ಓವರ್‌ಗಳಲ್ಲಿ 186 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ, 45ನೇ ಓವರ್‌ನಲ್ಲಿ ಲಸಿತ್ ಬೌಲಿಂಗ್‌ನಲ್ಲಿ ಮೆಂಡಿಸ್ ಕ್ಯಾಚ್ ಕೈಚೆಲ್ಲಿದ್ದರಿಂದ ಸ್ಟೋಕ್ಸ್‌ಗೆ ಜೀವದಾನ ಲಭಿಸಿತು. ಇದ ರಿಂದಾಗಿ ಶ್ರೀಲಂಕಾ ತಂಡಕ್ಕೆ ಆತಂಕ ಎದುರಾಯಿತು.

ಸ್ಟೋಕ್ಸ್‌ ಕೊನೆಯ ವಿಕೆಟ್ ಜೊತೆಯಾಟದಲ್ಲಿ ಮಾರ್ಕ್‌ ವುಡ್ ಅವರೊಂದಿಗೆ 26 ರನ್ ಗಳಿಸಿದರು. 47ನೇ ಓವರ್‌ನ ಕೊನೆಯ ಎಸೆತದಲ್ಲಿ ನುವಾನ ಪ್ರದೀಪ್ ಅವರು ಮಾರ್ಕ್ ಅವರ ವಿಕೆಟ್‌ ಪಡೆದು ನಿಟ್ಟುಸಿರುಬಿಟ್ಟರು. ಶ್ರೀಲಂಕಾ ತಂಡಕ್ಕೆ ಟೂರ್ನಿಯಲ್ಲಿ ಇದು ಎರಡನೇ ಗೆಲುವು. ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ಎರಡು ಮಳೆಗೆ ಕೊಚ್ಚಿಹೋಗಿದ್ದವು. ಇನ್ನೆರಡರಲ್ಲಿ ಸೋತಿತ್ತು. ಇಂಗ್ಲೆಂಡ್ ತಂಡಕ್ಕೆ ಇದು ಎರಡನೇ ಸೋಲು.

ಲಸಿತ್ ಕೊಟ್ಟ ಪೆಟ್ಟು: ಇಂಗ್ಲೆಂಡ್ ತಂಡವು ಹೋದ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ರನ್‌ಗಳ ಹೊಳೆಯನ್ನೇ ಹರಿಸಿತ್ತು. ಆದರೆ, ಇಲ್ಲಿ ಅವರ ಆಟ ನಡೆಯಲಿಲ್ಲ. ಅದಕ್ಕೆ ಕಾರಣವಾಗಿದ್ದು ಲಸಿತ್ ಬೌಲಿಂಗ್. ಅವರು ಜೇಮ್ಸ್‌ ವಿನ್ಸಿ (14 ರನ್), ಜಾನಿ ಬೆಸ್ಟೊ , ಜೋ ರೂಟ್ (57 ರನ್) ಮತ್ತು ಜೋಸ್ ಬಟ್ಲರ್ (10 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು. ಗಾಯದಿಂದ ಬಳಲುತ್ತಿರುವ ಜೇಸನ್ ರಾಯ್ ಆಡಿರಲಿಲ್ಲ. ಅದರಿಂದಾಗಿ ಉತ್ತಮ ಆರಂಭ ದೊರೆಯಲಿಲ್ಲ.

ಮ್ಯಾಥ್ಯೂಸ್ ಮಿಂಚು: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡವು ಎರಡು ಮತ್ತು ಮೂರನೇ ಓವರ್‌ಗಳಲ್ಲಿ ಆಘಾತಕ್ಕೆ ಒಳಗಾಯಿತು. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ದಿಮುತ್ ಕರುಣಾರತ್ನೆ ಔಟಾದರು. ಆಗ ತಂಡ ಕೇವಲ ಮೂರು ರನ್ ಗಳಿಸಿತ್ತು. ಮೂರನೇ ಓವರ್‌ನಲ್ಲಿ ಕುಶಾಲ್ ಪೆರೇರಾ ನಿರ್ಗಮಿಸಿದರು. ಮೂರು ಎಸೆತಗಳ ಅಂತರದಲ್ಲಿ ಮೂರು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ವಿಶ್ವ ಫರ್ನಾಂಡೊ (49; 39 ಎಸೆತ, 2 ಸಿಕ್ಸರ್‌, 6 ಬೌಂಡರಿ) ಮತ್ತು ಕುಶಾಲ್ ಮೆಂಡಿಸ್ (46; 68 ಎ, 2 ಬೌಂ) ಮೂರನೇ ವಿಕೆಟ್‌ಗೆ 59 ರನ್ ಸೇರಿಸಿದರು.

ಫರ್ನಾಂಡೊ ಔಟಾದ ನಂತರ ಮ್ಯಾಥ್ಯೂಸ್ ಮಿಂಚಿದರು. ಕುಶಾಲ್ ಜೊತೆ 71 ರನ್ ಸೇರಿಸಿದ ಅವರು ಧನಂಜಯ ಡಿಸಿಲ್ವಾ ಜೊತೆ 57 ರನ್‌ ಸೇರಿಸಿದರು. 115 ಎಸೆತಗಳನ್ನು ಎದು ರಿಸಿದ ಅವರ ತಾಳ್ಮೆಯ ಬ್ಯಾಟಿಂಗ್‌ನಲ್ಲಿ 85 ರನ್‌ ಮೂಡಿ ಬಂತು. ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು. ಜೊಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್ ಕಬಳಿಸಿದರೆ, ಆದಿಲ್ ರಶೀದ್ ಎರಡು ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT