ಬುಧವಾರ, ಡಿಸೆಂಬರ್ 2, 2020
25 °C
ವಿಶ್ವಕಪ್ ಕ್ರಿಕೆಟ್‌

ಕೆರಿಬಿಯನ್ನರ ಭರ್ಜರಿ ಬ್ಯಾಟಿಂಗ್‌; ಅಫ್ಗಾನ್‌ಗೆ 312 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೀಡ್ಸ್‌: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಒಂದಾದರು ಗೆಲುವಿಗಾಗಿ ಹೋರಾಡುತ್ತಿರುವ ಅಫ್ಗಾನಿಸ್ತಾನಕ್ಕೆ ಇಂದು ಕೊನೆಯ ಪಂದ್ಯ. ಅಫ್ಗಾನಿಸ್ತಾನದ ಎದುರು ಟಾಸ್‌ ಗೆದ್ದಿರುವ ವೆಸ್ಟ್ ಇಂಡೀಸ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ತಂಡಗಳ ಹೋರಾಟ ಗೆಲುವಿನ ಮರ್ಯಾದೆಗಾಗಿ. 

ವೆಸ್ಟ್ ಇಂಡೀಸ್‌ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದೆ. ಗೇಲ್‌ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತದಲ್ಲಿದ್ದ ತಂಡಕ್ಕೆ ಎವಿನ್‌ ಲೆವಿಸ್‌(58) ಮತ್ತು ಶಾಯ್‌ ಹೋಪ್‌ ಉತ್ತಮ ಜತೆಯಾಟ ರನ್‌ ಗಳಿಕೆಗೆ ನೆರವಾಯಿತು.

ಕ್ಷಣಕ್ಷಣದ ಸ್ಕೋರ್‌: https://bit.ly/2Xpl8RS

ಅರ್ಧ ಶತಕ ಗಳಿಸಿದ ಶಾಯ್‌ ಹೋಪ್‌(77) ಮೊಹಮ್ಮದ್‌ ನಬಿ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ನಿಕೋಲಸ್‌ ಪೂರನ್‌(58) ಮತ್ತು ಜೇಸನ್‌ ಹೋಲ್ಡರ್‌(45) ಹೋರಾಟದಿಂದಾಗಿ ತಂಡ 300 ರನ್‌ ಗಡಿ ದಾಟಿತು. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ಲೊಸ್‌ ಬ್ರಾಥ್‌ವೈಟ್‌ 4 ಎಸೆತಗಳಲ್ಲಿ 14 ರನ್‌ ಸಿಡಿಸಿದರು. 

2 ಸಿಕ್ಸರ್‌, 6 ಬೌಂಡರಿ ಸಹಿತ ಅರ್ಧ ಶತಕ ಪೂರೈಸಿದ್ದ ಲೆವಿಸ್‌, ರಶೀದ್‌ ಖಾನ್‌ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ವಿಂಡೀಸ್‌ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌(7) ಈ ಪಂದ್ಯದಲ್ಲಿಯೂ ಮಿಂಚಲು ವಿಫಲರಾದರು. ದೌಲತ್‌ ಜದ್ರಾನ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಹೊರ ನಡೆದರು. ಬಿರುಸಿನ ಆಟವಾಡುತ್ತಿದ್ದ ಶಿಮ್ರನ್‌ ಹೆಟ್ಮೆಯರ್‌(39; 31 ಎಸೆತ) ಸಹ ದೌಲತ್‌ ದಾಳಿಗೆ ಆಟ ಮುಗಿಸಿದರು.

ದೌಲತ್‌ ಜದ್ರಾನ್‌ 2, ಮೊಹಮ್ಮದ್‌ ನಬಿ, ಸೈಯ್ಯದ್‌ ಹಾಗೂ ರಶೀದ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು. 

ಗೇಲ್‌, ಬ್ರಾತ್‌ವೇಟ್‌, ಶಾಯ್‌ ಹೋಪ್‌ ಮುಂತಾದ ಪವರ್‌ ಹಿಟ್ಟರ್‌ಗಳನ್ನು ಒಳಗೊಂಡ ವೆಸ್ಟ್‌ ಇಂಡೀಸ್‌ ತಂಡವನ್ನು, ಅಫ್ಗಾನಿಸ್ತಾನ ಹರಾರೆಯಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಎರಡು ಬಾರಿ ಸೋಲಿಸಿತ್ತು. ಇತ್ತೀಚೆಗೆ ಕೆಲವು ಘಟಾನುಘಟಿ ತಂಡಗಳಿಗೆ ಸೋತರೂ ಅಫ್ಗಾನಿಸ್ತಾನ ತೋರಿದ ಹೋರಾಟ ಗಮನ ಸೆಳೆದಿತ್ತು. ಮೊಹಮ್ಮದ್‌ ನಬಿ, ಮುಜಿಬುರ್‌ ರೆಹಮಾನ್‌ ಮತ್ತು ರಶೀದ್‌ ಖಾನ್‌ ಅವರನ್ನೊಳಗೊಂಡ ಬೌಲಿಂಗ್ ಪಡೆ ಬಲವಾಗಿದೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಸ್ಥಿರವಾಗಿಲ್ಲ.

1975 ಮತ್ತು 1979ರಲ್ಲಿ ವಿಶ್ವ ವಿಜೇತರಾಗಿದ್ದ ವೆಸ್ಟ್‌ ಇಂಡೀಸ್‌ ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿತ್ತು. ನಂತರ ಏಳು ಪಂದ್ಯಗಳಲ್ಲಿ ಆ ತಂಡಕ್ಕೆ ಗೆಲುವು ಮರೀಚಿಕೆಯಾಗಿದೆ. ವೆಸ್ಟ್‌ ಇಂಡೀಸ್‌ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಮತ್ತು ಅಫ್ಗಾನಿಸ್ತಾನ ಹತ್ತನೇ ಸ್ಥಾನದಲ್ಲಿವೆ. ಈ ಪಂದ್ಯದ ನಂತರವೂ ಅವುಗಳ ‘ಸ್ಥಾನಮಾನ’ದಲ್ಲಿ ಬದಲಾವಣೆಯಾಗದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು