ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆತನದ ವಿಜಯ; ಭಾರತ-ಪಾಕ್ ಫೈನಲ್ ಬಯಸಿದ ಸಕ್ಲೈನ್ ಮುಷ್ತಾಕ್

Last Updated 28 ಅಕ್ಟೋಬರ್ 2021, 13:58 IST
ಅಕ್ಷರ ಗಾತ್ರ

ದುಬೈ: ಮೊದಲ ಪಂದ್ಯದಲ್ಲಿ ಗೆಳೆತನದ ಸಂದೇಶ ರವಾನಿಸಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮಗದೊಮ್ಮೆ ಮುಖಾಮುಖಿಯಾದರೆ ಉತ್ತಮವಾಗಿರುತ್ತಿತ್ತು ಎಂದು ಪಾಕಿಸ್ತಾನದ ಕೋಚ್ ಸಕ್ಲೈನ್ ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಈ ಮೂಲಕ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿತ್ತು.

'ಭಾರತ ಫೈನಲ್‌ಗೆ ಪ್ರವೇಶಿಸಿದರೆ ಅತ್ಯುತ್ತಮ ವಿಷಯ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಭಾರತವನ್ನು ನಾವು ಸೋಲಿಸಿದ್ದಕ್ಕಲ್ಲ. ಬದಲಾಗಿ ಭಾರತ ಬಲಿಷ್ಠ ತಂಡವಾಗಿದೆ. ಪ್ರತಿಯೊಬ್ಬರೂ ಅವರನ್ನು ನೆಚ್ಚಿನ ತಂಡವೆಂದು ಪರಿಗಣಿಸುತ್ತಾರೆ' ಎಂದು ಹೇಳಿದರು.

ನಾವು ಇನ್ನೂ ಒಂದು ಪಂದ್ಯವನ್ನು ಆಡಿದರೆ ನಮ್ಮ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ಸಕ್ಲೈನ್ ನಂಬಿಕೆ ವ್ಯಕ್ತಪಡಿಸಿದರು.

'ಹಿಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹಾಗೂ ನಮ್ಮ ಆಟಗಾರರು ಪರಸ್ಪರ ಬೆರೆತುಕೊಂಡಿರುವ ರೀತಿ ನೋಡಿದರೆ ನಾವೆಲ್ಲರೂ ಮಾನವರಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಇದು ಕೇವಲ ಕ್ರಿಕೆಟ್ ಪಂದ್ಯವಾಗಿದೆ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದೇವೆ' ಎಂದು ತಿಳಿಸಿದರು.

'ಈ ಸಂದೇಶ ಕಳುಹಿಸಿದ್ದಕ್ಕಾಗಿ ಆಟಗಾರರಿಗೆ ಅಭಿನಂದನೆಗಳು. ಗೆಳೆತನವು ಜಯಿಸಬೇಕು, ದ್ವೇಷವು ಸೋಲಬೇಕು' ಎಂದು ಹೇಳಿದರು.

'ಚಾಂಪಿಯನ್ ಆಗಲು ಬಂದಾಗ ನೀವು ಎದುರಾಳಿಗಳ ಬಗ್ಗೆ ಗಮನ ಹರಿಸುವುದಿಲ್ಲ. ನಮ್ಮ ಆಟದ ಮೇಲೆ ಗಮನ ಹರಿಸುತ್ತೇವೆ. ಇಂಗ್ಲೆಂಡ್ ಫೇವರಿಟ್ ತಂಡವಾಗಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಪ್ರಬಲ ತಂಡವೆನಿಸಿದೆ. ಬದ್ಧತೆ, ಮನೋಭಾವ ಹಾಗೂ ಪ್ರಕ್ರಿಯೆ ಎಂಬ ಅಂಶಗಳು ನಮ್ಮ ಕೈಯಲ್ಲಿದೆ ಎಂದು ನಾನು ನಂಬುತ್ತೇನೆ. ಫಲಿತಾಂಶ ನಮ್ಮ ಕೈಯಲಿಲ್ಲ' ಎಂದು ಹೇಳಿದರು.

'ಯಾವ ತಂಡದ ವಿರುದ್ಧ ಆಡಿದರೂ ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಬೇಕು. ಭಾರತ ಫೈನಲ್ ಪ್ರವೇಶಿಸಿದರೆ ಐಸಿಸಿಗೆ ಸಂತೋಷವಾಗುತ್ತದೆ. ಅಭಿಮಾನಿಗಳು ಸಂತಸಗೊಳ್ಳುತ್ತಾರೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT