ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL 2024 | ಆರ್‌ಸಿಬಿ ಕನಸು ನನಸಾಗಿಸಿದ ವನಿತೆಯರು

Published 17 ಮಾರ್ಚ್ 2024, 22:39 IST
Last Updated 17 ಮಾರ್ಚ್ 2024, 22:39 IST
ಅಕ್ಷರ ಗಾತ್ರ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದಿತು.  ಆರ್‌ಸಿಬಿ ತಂಡದ ಅಭಿಮಾನಿಗಳ ‘ಕನಸು’ ಈಡೇರಿತು. 

ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು ಈಡೇರಿಲ್ಲ. ಆದರೆ ಇದೀಗ ಸ್ಮೃತಿ ಮಂದಾನ ನಾಯಕತ್ವದ ಮಹಿಳಾ ತಂಡವು ಡಬ್ಲ್ಯುಪಿಎಲ್‌ನ ಎರಡನೇ ಆವೃತ್ತಿಯಲ್ಲಿಯೇ ಪ್ರಶಸ್ತಿ ಜಯಿಸಿತು.  ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಬಾರಿಸಿತು. 

ಆರ್‌ಸಿಬಿ ತಂಡದ  ಸೋಫಿ ಮಾಲಿನೊ ಅವರ ‘ಮ್ಯಾಜಿಕ್ ಓವರ್‘ ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ ಸ್ಪಿನ್ ಮೋಡಿಯಿಂದಾಗಿ ಬೆಂಗಳೂರು ತಂಡವು ಜಯಭೇರಿ ಬಾರಿಸಿತು.  ಟಾಸ್ ಗೆದ್ದು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು.  ಈ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಜಯ ಸುಲಭವಾಗಿ ಒಲಿಯಲಿಲ್ಲ. ಡೆಲ್ಲಿ ಬೌಲರ್‌ಗಳ ತಂತ್ರಗಾರಿಕೆಯನ್ನು ಎಚ್ಚರಿಕೆಯಿಂದ ಎದುರಿಸುವ ಸವಾಲನ್ನು ಆರ್‌ಸಿಬಿ ಎದುರಿಸಿತು. ಇದರಿಂದಾಗಿ ಫಲಿತಾಂಶವು ಕೊನೆಯ ಓವರ್‌ನಲ್ಲಿ ನಿರ್ಧಾರವಾಯಿತು. ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ತಂಡದ ಗೆಲುವಿಗೆ ಮೂರು ರನ್‌ಗಳು ಬೇಕಿದ್ದವು. ಆಗ ರಿಚಾ ಘೋಷ್ ಗಳಿಸಿದ ವಿಜಯ ಬೌಂಡರಿಯೊಂದಿಗೆ ಆರ್‌ಸಿಬಿ ಸಂಭ್ರಮ ಗರಿಗೆದರಿತು. ಡೆಲ್ಲಿ ತಂಡವು ಸತತ ಎರಡನೇ ವರ್ಷವೂ ರನ್ನರ್ಸ್ ಅಪ್ ಆಯಿತು.

ಸೋಫಿ–ಶ್ರೇಯಾಂಕ ಮೋಡಿ: ಮೆಗ್‌ ಲ್ಯಾನಿಂಗ್ (23; 23ಎ, 4X3) ಮತ್ತು ಶಫಾಲಿ ವರ್ಮಾ (44; 27ಎ, 4X2, 6X3) ಅವರಿಬ್ಬರೂ ಡೆಲ್ಲಿ ತಂಡಕ್ಕೆ ಅಮೋಘ ಆರಂಭ ನೀಡಿದರು. ಅದರಿಂದಾಗಿ ಕೇವಳ ಏಳು ಓವರ್‌ಗಳಲ್ಲಿ ತಂಡವು ವಿಕೆಟ್ ನಷ್ಟವಿಲ್ಲದೇ 64 ರನ್ ಸೇರಿಸಿತ್ತು. ಆದರೆ ನಂತರದ 49 ರನ್‌ಗಳ ಅಂತರದಲ್ಲಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.

ಎಂಟನೇ ಓವರ್‌ನಲ್ಲಿ  ಮೂರು ವಿಕೆಟ್ ಕಿತ್ತು ತಮ್ಮ ಖಾತೆಗೆ ಸೇರಿಸಿಕೊಂಡ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಸೋಫಿ (20ಕ್ಕೆ3) ಡೆಲ್ಲಿ ತಂಡಕ್ಕೆ ದೊಡ್ಡ ಆಘಾತ ನೀಡಿದರು. 

ಸೋಫಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಶಫಾಲಿ ಅವರು ಜಾರ್ಜಿಯಾ ವೆರ್ಹಾಮ್‌ಗೆ ಕ್ಯಾಚಿತ್ತರು. ಡೆಲ್ಲಿ ತಂಡದ ಭರವಸೆಯ ಬ್ಯಾಟರ್ ಜೆಮಿಮಾ ರಾಡ್ರಿಗಸ್ ತಾವೆದುರಿಸಿದ ಎರಡನೇ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ನಂತರದ ಎಸೆತದಲ್ಲಿ ಅಲೈಸ್ ಕ್ಯಾಪ್ಸಿಯನ್ನೂ ಬೌಲ್ಡ್ ಮಾಡಿದ ಸೋಫಿ ಸಂಭ್ರಮಿಸಿದರು. ಇಬ್ಬರೂ ಪ್ರಮುಖ ಬ್ಯಾಟರ್‌ಗಳು ಖಾತೆ ತೆರೆಯದೇ ಮರಳಿದ್ದು ದೊಡ್ಡ ನಷ್ಟವಾಯಿತು. 

ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದ ರಾಧಾ ಯಾದವ್ (12; 9ಎ) ಅವರನ್ನು ತಮ್ಮ ಚುರುಕಾದ ಫೀಲ್ಡಿಂಗ್ ಮತ್ತು ನೇರ ಥ್ರೋ ಮೂಲಕ ರನೌಟ್ ಮಾಡಿದ ಸೋಫಿ ಮಾಲಿನೊ ಆರ್‌ಸಿಬಿಗೆ ಮತ್ತೊಂದು ಕಾಣಿಕೆ ನೀಡಿದರು.  ಸೋಫಿ ಮಾಡಿದ ಗಾಯಕ್ಕೆ ಕರ್ನಾಟಕದ ಆಫ್‌ಸ್ಪಿನ್ನರ್ ಶ್ರೇಯಾಂಕ (3.3–0–12–4) ಉಪ್ಗು ಸವರಿದರು. 

ಆರಂಭಿಕ ಬ್ಯಾಟರ್ ಮೆಗ್ ಲ್ಯಾನಿಂಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 15ನೇ ಓವರ್‌ನಲ್ಲಿ ಮಿನು ಮಣಿಗೂ ಡಗ್‌ಔಟ್ ಹಾದಿ ತೋರಿಸಿದರು.

19ನೇ ಓವರ್‌ನಲ್ಲಿ ಅರುಂಧತಿ ರೆಡ್ಡಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಅದೇ ಓವರ್‌ನಲ್ಲಿ ತಾನಿಯಾ ಭಾಟಿಯಾ ಅವರು ವಿಕೆಟ್‌ಕೀಪರ್‌ ರಿಚಾಗೆ ಕ್ಯಾಚ್ ಆದರು.  ಲೆಗ್ ಸ್ಪಿನ್ನರ್ ಆಶಾ ಶೋಭನಾ (14ಕ್ಕೆ2) ಡೆಲ್ಲಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ತಮ್ಮ ಒಂದೇ ಓವರ್‌ನಲ್ಲಿ ಮರಿಝಾನ್ ಕ್ಯಾಪ್ ಮತ್ತು ಜೆಸ್ ಯಾನ್ಸೆನ್ ವಿಕೆಟ್‌ಗಳನ್ನು ಉರುಳಿಸಿದರು. 

ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡಕ್ಕೆ ₹6 ಕೋಟಿ ಬಹುಮಾನ

ರನ್ನರ್ಸ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹3 ಕೋಟಿ ಬಹುಮಾನ

ಶ್ರೇಯಾಂಕ ಪಾಟೀಲಗೆ ಪರ್ಪಲ್‌ ಕ್ಯಾಪ್‌, ಎಲಿಸ್‌ ಪೆರಿಗೆ ಆರೇಂಜ್‌ ಕ್ಯಾಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT