ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Rankings: ಅಗ್ರ 10ರಲ್ಲಿ ಸ್ಥಾನ ಪಡೆದ ಯಶಸ್ವಿ

Published 6 ಮಾರ್ಚ್ 2024, 13:24 IST
Last Updated 6 ಮಾರ್ಚ್ 2024, 13:24 IST
ಅಕ್ಷರ ಗಾತ್ರ

ದುಬೈ: ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಬುಧವಾರ ಪ್ರಕಟವಾದ ಐಸಿಸಿ ಕ್ರಮಾಂಕಪಟ್ಟಿಯ ಟೆಸ್ಟ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಹಾಲಿ ಸರಣಿಯಲ್ಲಿ ರನ್‌ಹೊಳೆ ಹರಿಸಿರುವ ಜೈಸ್ವಾಲ್ 12 ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಕಳೆದ ವರ್ಷ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್ 727 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. 22 ವರ್ಷದ ಜೈಸ್ವಾಲ್‌ ಟೆಸ್ಟ್‌ ಸರಣಿಯ ಒಂದರಲ್ಲಿ 600ಕ್ಕೂ ಹೆಚ್ಚು ರನ್ ಹೊಡೆದ ಭಾರತದ ಐದನೇ ಆಟಗಾರ ಎನಿಸಿದ್ದಾರೆ. ಸುನೀಲ್ ಗಾವಸ್ಕರ್‌, ದಿಲೀಪ್ ಸರ್ದೇಸಾಯಿ, ರಾಹುಲ್ ದ್ರಾವಿಡ್‌ ಮತ್ತು ವಿರಾಟ್ ಕೊಹ್ಲಿ ಇತರ ನಾಲ್ವರು.

ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್‌ಗಳಲ್ಲಿ ಅವರು 93.57 ಸರಾಸರಿಯಲ್ಲಿ 655 ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ದ್ವಿಶತಕ, ಎರಡು ಅರ್ಧ ಶತಕಗಳಿವೆ. ಗಾವಸ್ಕರ್‌ ಸರಣಿಯೊಂದರಲ್ಲಿ ಅತ್ಯಧಿಕ (774) ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ 131 ರನ್ ಹೊಡೆದ ರೋಹಿತ್ ಶರ್ಮಾ ಕ್ರಮಾಂಕಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಏರಿದ್ದಾರೆ. ಹಾಲಿ ಸರಣಿಗೆ ಅಲಭ್ಯರಾಗಿರುವ ಪ್ರಮುಖ ಬ್ಯಾಟರ್ ವಿರಾಟ್‌ ಕೊಹ್ಲಿ ಒಂದು ಸ್ಥಾನ ಬಡ್ತಿ ಪಡೆದು ಎಂಟನೇ ಕ್ರಮಾಂಕದಲ್ಲಿದ್ದಾರೆ.

ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್ (870) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಜೋ ರೂಟ್ (799) ಮತ್ತು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್‌ (789) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ. ಹ್ಯಾಜಲ್‌ವುಡ್ ಮತ್ತು ನೇಥನ್ ಲಯುನ್ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT