ದುಬೈ: ಉತ್ತಮ ಲಯದಲ್ಲಿರುವ ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್, ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದು 63ನೇ ಸ್ಥಾನಕ್ಕೆ ಏರಿದ್ದಾರೆ. ಬ್ಯಾಟರ್‌ಗಳ ಈ ವಿಭಾಗದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ.
21 ವರ್ಷದ ಜೈಸ್ವಾಲ್,ಪೋರ್ಟ್ ಆಫ್ ಸ್ಪೇನ್‌ನಲ್ಲಿ ‘ಡ್ರಾ’ ಆಗಿದ್ದ ಎರಡನೇ ಟೆಸ್ಟ್‌ನಲ್ಲಿ ಕ್ರಮವಾಗಿ 57 ಮತ್ತು 38 ರನ್ ಗಳಿಸಿದ್ದು, ಅವರು 465 ಪಾಯಿಂಟ್ಸ್ ಕಲೆಹಾಕಿದ್ದು 11 ಸ್ಥಾನಗಳಷ್ಟು ಮೇಲೇರಿದ್ದಾರೆ. ಶರ್ಮಾ ಕ್ರಮವಾಗಿ 80 ಮತ್ತು 57 ರನ್ ಬಾರಿಸಿದ್ದು, 759 ಪಾಯಿಂಟ್ಸ್ ಶೇಖರಿಸಿದ್ದಾರೆ. ಅವರು ಭಾರತದ ಬ್ಯಾಟರ್‌ಗಳ ಪೈಕಿ ಉತ್ತಮ ರ್‍ಯಾಂಕಿಂಗ್ ಹೊಂದಿದ್ದಾರೆ. ಶ್ರೀಲಂಕಾದ ಟೆಸ್ಟ್ ನಾಯಕ ದಿಮುತ್ ಕರುಣಾರತ್ನೆ, ರೋಹಿತ್ ಜತೆ 9ನೇ ಕ್ರಮಾಂಕ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಪ್ರಗತಿ ಕಂಡಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು 883 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ರವಿಚಂದ್ರನ್ ಅಶ್ವಿನ್, ಬೌಲರ್‌ಗಳ ಪಟ್ಟಿಯಲ್ಲಿ ಆಧಿಪತ್ಯ ಮುಂದುವರಿಸಿದ್ದು 879 ಪಾಯಿಂಟ್ಸ್ ಹೊಂದಿದ್ದಾರೆ. ರವೀಂದ್ರ ಜಡೇಜಾ (782) ಅವರು ಆರನೇ ಸ್ಥಾನಕ್ಕೇರಿದ್ದಾರೆ. ಪೇಸ್ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಆರು ಸ್ಥಾನಗಳಷ್ಟು ಬಡ್ತಿ ಪಡೆದಿದ್ದು 33ನೇ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.