ಮಂಗಳವಾರ, ಸೆಪ್ಟೆಂಬರ್ 22, 2020
24 °C

ಅಫ್ಗಾನ್ ಎದುರಿನ ಸರಣಿ ಕೈಬಿಟ್ಟ ಜಿಂಬಾಬ್ವೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹರಾರೆ: ಕೋವಿಡ್–19ರ ಹಾವಳಿ ಹೆಚ್ಚುತ್ತಿರುವುದರಿಂದ ಅಫ್ಗಾನಿಸ್ತಾನ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಐದು ಪಂದ್ಯಗಳ ಸರಣಿ ಈ ತಿಂಗಳಲ್ಲಿ ಜಿಂಬಾಬ್ವೆಯಲ್ಲಿ ಆರಂಭಗೊಳ್ಳಬೇಕಾಗಿತ್ತು.

ಬಯೊ ಸೆಕ್ಯೂರ್ ಸೌಲಭ್ಯದಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಆದರೆ ದೇಶದ ಕ್ರೀಡಾ ಆಯೋಗವು ಯಾವುದೇ ತಂಡ‌ವನ್ನು ಆಹ್ವಾನಿಸುವಂಥ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ ಎಂದು ಹೇಳಿತ್ತು. ಹೀಗಾಗಿ ಸರಣಿಯನ್ನು ರದ್ದು ಮಾಡಲು ಜಿಂಬಾಬ್ವೆ ಕ್ರಿಕೆಟ್ ಶನಿವಾರ ನಿರ್ಧರಿಸಿದೆ. ಈ ಕುರಿತು ಅದು ಟ್ವೀಟ್ ಕೂಡ ಮಾಡಿದೆ.

‘ಪರಿಸ್ಥಿತಿ ಚೆನ್ನಾಗಿಲ್ಲ. ಆದ್ದರಿಂದ ಸರಣಿ ರದ್ದು ಮಾಡುವ ನಿರ್ಧಾರ ಸೂಕ್ತವಾಗಿದೆ. ಕ್ರೀಡಾ ಚಟುವಟಿಕೆ ಪುನರಾರಂಭಗೊಳ್ಳಬೇಕು ಎಂದು ನಾವು ಬಯಸುತ್ತೇವೆ. ಆದರೆ ಸರ್ಕಾರದ ಆರೋಗ್ಯ ಮಾರ್ಗಸೂಚಿಗಳನ್ನು ಕಡೆಗಣಿಸುವಂತಿಲ್ಲ. ಆಟಗಾರರು, ಅಧಿಕಾರಿಗಳು, ಸ್ವಯಂಸೇವಕರು, ವಿವಿಧ ಸೇವೆಗಳನ್ನು ಒದಗಿಸುವವರು, ಅಭಿಮಾನಿಗಳು ಮತ್ತು ಎಲ್ಲಕ್ಕಿಂತ ವಿಶೇಷವಾಗಿ ಸಾರ್ವಜನಿಕರ ಆರೋಗ್ಯ ಮುಖ್ಯ. ಆದ್ದರಿಂದ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ’ ಎಂದು ಜಿಂಬಾಬ್ವೆ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ಗಿವ್‌ಮೊರ್ ಮಕೋನಿ ತಿಳಿಸಿದ್ದಾರೆ.

ಮೂರು ಏಕದಿನ ಪಂದ್ಯಗಳಲ್ಲಿ ಆಡಲು ಭಾರತ ತಂಡ ಕೂಡ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳುವ ಯೋಜನೆ ಇತ್ತು. ಪಂದ್ಯಗಳು ಆಗಸ್ಟ್ 22ರಂದು ಆರಂಭಗೊಳ್ಳಬೇಕಾಗಿತ್ತು. ಆ ಸರಣಿಯನ್ನು ಈಗಾಗಲೇ ಜಿಂಬಾಬ್ವೆ ರದ್ದು ಮಾಡಿದೆ. ಜಿಂಬಾಬ್ವೆ ತಂಡವು ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ಎದುರು ಏಕದಿನ ಮತ್ತು ಟ್ವೆಂಟಿ–20 ಸರಣಿಯನ್ನು ಆಡಿತ್ತು. ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ ಕಣಕ್ಕೆ ಇಳಿಯಲು ಸಾಧ್ಯವಾಗಲಿಲ್ಲ.

ಕ್ರೀಡೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಕಳೆದ ವರ್ಷ ಮೂರು ತಿಂಗಳ ನಿಷೇಧ ಹೇರಿತ್ತು. ದುಬೈನಲ್ಲಿ ನಡೆದಿದ್ದ ಸಭೆಯ ನಂತರ ಅಕ್ಟೋಬರ್‌ನಲ್ಲಿ ನಿಷೇಧ ವಾಪಸ್ ತೆಗೆದುಕೊಳ್ಳಲಾಗಿತ್ತು. ಜಿಂಬಾಬ್ವೆ ಕ್ರಿಕೆಟ್‌ನ ಮುಖ್ಯಸ್ಥ ತವೆಂಗಾ ಮುಕುಲಾನಿ ಮತ್ತು ಕ್ರೀಡಾ ಸಚಿವ ಕಿಸ್ಟಿ ಕವೆಂಟ್ರಿ ಆ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು