ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಆಯ್ಕೆ ಸಂತಸ; ಇನ್ನೊಂದೆಡೆ ಪುತ್ರಿ ವಿಯೋಗ!

ಪಾಕಿಸ್ತಾನ ತಂಡದ ಆಟಗಾರ ಆಸಿಫ್‌ ಅಲಿ ಕಥೆ–ವ್ಯಥೆ
Last Updated 21 ಮೇ 2019, 1:03 IST
ಅಕ್ಷರ ಗಾತ್ರ

ಕರಾಚಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದ ಆಸಿಫ್ ಅಲಿ ಅವರಿಗೆ ಸಂತಸ ಅನುಭವಿಸುವ ಅವಕಾಶ ಸಿಗಲಿಲ್ಲ. ಏಕೆಂದರೆ, ಆಯ್ಕೆ ಸುದ್ದಿ ಬರುವ ಮುನ್ನವೇ ತಮ್ಮ ಮುದ್ದಿನ ಮಗಳ ಸಾವಿನ ವಾರ್ತೆಗೆ ಅವರು ಕುಸಿದಿದ್ದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎರಡು ವರ್ಷದ ನೂರ್ ಫಾತೀಮಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆಸಿಫ್ ಅಲಿ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಪಾಕ್‌ ತಂಡದಲ್ಲಿ ಆಡುತ್ತಿದ್ದರು. ಸರಣಿಯ ಒಂದು ಪಂದ್ಯ ಮಳೆಗೆ ಆಹುತಿಯಾಗಿತ್ತು. ಉಳಿದ ನಾಲ್ಕು ಪಂದ್ಯಗಳಲ್ಲಿಯೂ ಪಾಕ್ ಸೋತಿತ್ತು. ಆ ಎಲ್ಲ ಪಂದ್ಯಗಳಲ್ಲಿ ಅಲಿ ಆಡಿದ್ದರು. ಎರಡು ಅರ್ಧಶತಕಗಳನ್ನು ಹೊಡೆದಿದ್ದರು.

‘ಅಲಿಯ ದುಃಖದಲ್ಲಿ ನಮ್ಮ ಐಎಸ್‌ಎಲ್‌ಯು ಬಳಗವೂ ಭಾಗಿಯಾಗಿದೆ. ಮಗಳ ಅಗಲುವಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅಲಿ ಕುಟಂಬಕ್ಕೆ ನೀಡಲಿ. ಮಗಳು ಆಸ್ಪತ್ರೆಯಲ್ಲಿ ಸಾವು–ಬದುಕಿನ ಹೋರಾಟ ನಡೆಸುತ್ತಿದ್ದ ಒತ್ತಡದ ಸಂದರ್ಭದಲ್ಲಿಯೂ ಅಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಧೈರ್ಯ ಮತ್ತು ಅಚಲ ಆತ್ಮವಿಶ್ವಾಸಕ್ಕೆ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ನಮಗೆಲ್ಲರಿಗೂ ಪ‍್ರೇರಣೆಯಾಗಿದ್ದಾರೆ’ ಎಂದು ಅವರು ಪಾಕಿಸ್ತಾನ ಸೂಪರ್ ಲೀಗ್‌ ಟೂರ್ನಿಯಲ್ಲಿ ಆಡುವ ಇಸ್ಲಾಮಾಬಾದ್ ಯುನೈಟೆಡ್‌ ತಂಡವು ಟ್ವೀಟ್ ಮಾಡಿದೆ.

ಏಪ್ರಿಲ್ 24ರಂದು ಪಾಕ್ ತಂಡದೊಂದಿಗೆ ಅಲಿ ಇಂಗ್ಲೆಂಡ್‌ಗೆ ತೆರಳುವ ಮುನ್ನ ತಮ್ಮ ಮಗಳನ್ನು ಅಮೆರಿಕಕ್ಕೆ ಚಿಕಿತ್ಸೆಗೆ ಕಳುಹಿಸುವುದಾಗಿ ಟ್ವೀಟ್ ಮಾಡಿದ್ದರು. ಚಿಕಿತ್ಸೆ ಫಲಿಸಿ ಮಗಳು ಗುಣಮುಖಳಾಗಲೆಂದು ಹಾರೈಸಿರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

‘ಪಿಎಸ್‌ಎಲ್ ಟೂರ್ನಿಯ ನಾಲ್ಕನೇ ಆವೃತ್ತಿ ನಡೆಯುವಾಗಲೇ ಅಲಿಗೆ ತಮ್ಮ ಮಗಳ ಅನಾರೋಗ್ಯದ ಕುರಿತು ಗೊತ್ತಿತ್ತು’ ಎಂದು ಹೇಳಿದ ಐಎಸ್‌ಎಲ್‌ಯು ಕೋಚ್. ಆಸ್ಟ್ರೇಲಿಯಾದ ಹಿರಿಯ ಆಟಗಾರ ಡೀನ್ ಜೋನ್ಸ್‌ ಕಣ್ಣೀರಾದರು. ಹಲವು ಹಿರಿಯ ಕ್ರಿಕೆಟಿಗರೂ ವಿಷಾದ ವ್ಯಕ್ತಪಡಿಸಿದ್ದಾರೆ.

ಸರ್ಫರಾಜ್ ನಾಯಕ: ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಸರ್ಫರಾಜ್ ಅಹಮದ್ ಅವರು ಪಾಕಿಸ್ತಾನ ತಂಡವನ್ನು ಮುನ್ನಡೆಸುವರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಸೋಮವಾರ 16 ಆಟಗಾರರ ತಂಡವನ್ನು ಪ್ರಕಟಿಸಿದೆ.

ಎರಡು ವರ್ಷಗಳ ಹಿಂದೆ ಸರ್ಫರಾಜ್ ನಾಯಕತ್ವದ ತಂಡವು ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿತ್ತು.

ಹೋದ ತಿಂಗಳು ಇಂಗ್ಲೆಂಡ್‌ಗೆ ತೆರಳಿದ್ದ ತಂಡವು ಆತಿಥೇಯ ತಂಡದ ಎದುರು ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಿತು. 0–4ರಿಂದ ಸೋತಿತು.

ತಂಡ ಇಂತಿದೆ

ಸರ್ಫರಾಜ್ ಅಹಮದ್ (ನಾಯಕ), ಫಕ್ರ್‌ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಾಂ, ಹ್ಯಾರಿಸ್ ಸೊಹೈಲ್, ಆಸಿಫ್ ಅಲಿ, ಶೋಯಬ್‌ ಮಲಿಕ್, ಮೊಹಮ್ಮದ್ ಹಫೀಜ್, ಇಮಾದ್ ವಾಸೀಂ, ಶಾದಾಬ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮಿರ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ಹಸನೈನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT