ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆನ್ರಿ, ಲಾಕಿ ದಾಳಿಗೆ ಶ್ರೀಲಂಕಾ ದೂಳೀಪಟ

ಹತ್ತು ವಿಕೆಟ್‌ಗಳ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್; ಲಂಕಾ ತಂಡಕ್ಕೆ ನಿರಾಶೆ
Last Updated 13 ಜೂನ್ 2019, 14:47 IST
ಅಕ್ಷರ ಗಾತ್ರ

ಕಾರ್ಡಿಫ್: ಹಾಲಿ ರನ್ನರ್ಸ್‌ ಅಪ್ ನ್ಯೂಜಿಲೆಂಡ್ ತಂಡವು ಈ ಬಾರಿ ಟೂರ್ನಿಯಲ್ಲಿ ಅಮೋಘ ಜಯದ ಆರಂಭ ಮಾಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ಬಳಗವು ಶ್ರೀಲಂಕಾ ತಂಡವನ್ನು136 ರನ್‌ಗಳಿಗೆ ಆಲೌಟ್ ಮಾಡಿತು. ತನ್ನ ಒಂದೂ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ಗುರಿ ಮುಟ್ಟಿತು. ಶ್ರೀಲಂಕಾತಂಡವು 29.2 ಓವರ್‌ಗಳಲ್ಲಿ ಗಳಿಸಿದ್ದನ್ನು, ಕಿವೀಸ್ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ (ಔಟಾಗದೆ 73; 51ಎಸೆತ, 8ಬೌಂಡರಿ, 2ಸಿಕ್ಸರ್) ಮತ್ತು ಕಾಲಿನ್ ಮನ್ರೊ (ಔಟಾಗದೆ 58; 47ಎಸೆತ, 6 ಬೌಂಡರಿ, 1ಸಿಕ್ಸರ್) ಜೊತೆಗೂಡಿ ಕೇವಲ 16.1ಓವರ್‌ಗಳಲ್ಲಿ ಪೇರಿಸಿದರು. ಇದರಿಂದಾಗಿ ಕೇನ್ ವಿಲಿಯಮ್ಸನ್‌ ಬಳಗವು ಹತ್ತು ವಿಕೆಟ್‌ಗಳ ಜಯ ಸಾಧಿಸಿತು.

ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಅವರು ದುಬಾರಿಯಾದರು. ಕೇವಲ ಐದು ಓವರ್‌ಗಳಲ್ಲಿ 46 ರನ್‌ಗಳನ್ನು ಬಿಟ್ಟುಕೊಟ್ಟರು. ಉಳಿದ ಬೌಲರ್‌ಗಳಿಗೂ ವಿಕೆಟ್ ಒಲಿಯಲಿಲ್ಲ. ತಂಡದ ಯಾವುದೇ ವಿಭಾಗದಿಂದಲೂ ಛಲದ ಹೋರಾಟ ಕಂಡುಬರಲಿಲ್ಲ.

ಆದರೆ, ಎಲ್ಲ ತಂಡಗಳಿಗೂ ಕಠಿಣ ಸವಾಲೊಡ್ಡುವ ತನ್ನ ಸಾಮರ್ಥ್ಯವನ್ನು ಕಿವೀಸ್ ಸಾಬೀತುಪಡಿಸಿರು.ಗಪ್ಟಿಲ್ ಮತ್ತುಮನ್ರೊ ಅರ್ಧಶತಕಗಳ ಆಟದ ಮೂಲಕ ತಾವು ನಿರ್ಲಕ್ಷಿಸುವ ಆರಂಭಿಕ ಜೋಡಿಯಲ್ಲ ಎಂಬ ಸಂದೇಶ ಕೊಟ್ಟರು. ಆಕರ್ಷಕ ಡ್ರೈವ್, ಪುಲ್ ಮತ್ತು ಕಟ್‌ಗಳ ಆಟ ಆವರ ಬ್ಯಾಟಿಂಗ್‌ನಲ್ಲಿತ್ತು.

ಹೆನ್ರಿ, ಲಾಕಿ ಬಿರುಗಾಳಿ: ಇಬ್ಬರು ಬಲಗೈ ವೇಗಿಗಳಾದ ಮ್ಯಾಟ್ ಹೆನ್ರಿ (29ಕ್ಕೆ3) ಮತ್ತು ಲಾಕಿ ಫರ್ಗ್ಯುಸನ್ (22ಕ್ಕೆ3) ಭರಾಟೆಗೆ ಶ್ರೀಲಂಕಾ ಬ್ಯಾಟಿಂಗ್ ಪಡೆ ದೂಳೀಪಟವಾಯಿತು. ಇಬ್ಬರೂ ‘ಬೌಲಿಂಗ್ ಜೊತೆಯಾಟ’ದಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಉರುಳಿಸಿದರು.

ಆದರೆ, ಲಂಕಾ ತಂಡದ ನಾಯಕ ದಿಮುತ ಕರುಣಾರತ್ನೆ ಮಾತ್ರ ಏಕಾಂಗಿ ಹೋರಾಟ ನಡೆಸಿದರು.ಆರಂಭಿಕ ಬ್ಯಾಟ್ಸ್‌ಮನ್ ದಿಮುತ 84 ಎಸೆತಗಳನ್ನು ಎದುರಿಸಿ ಔಟಾಗದೆ 52 ರನ್‌ ಗಳಿಸಿದರು. ಅವರು 146 ನಿಮಿಷಗಳವರೆಗೆ ಕ್ರೀಸ್‌ನಲ್ಲಿದ್ದರು.

ಅವರಿಗೆ ಕೇವಲ ನಾಲ್ಕು ಬೌಂಡರಿ ಗಳಿಸಲು ಸಾಧ್ಯವಾಯಿತು. ಇಡೀ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ. ಆದರೆ ಅವರ ತಾಳ್ಮೆಯ ಆಟದಿಂದಾಗಿ ಶ್ರೀಲಂಕಾ ತಂಡವು ಅತ್ಯಲ್ಪ ತಂಡಕ್ಕೆ ಉರುಳುವ ಭೀತಿಯನ್ನು ತಪ್ಪಿಸಿಕೊಂಡಿತು.

ಪಂದ್ಯದ ಎರಡನೇ ಎಸೆತದಲ್ಲಿಯೇ ವಿಕೆಟ್ಗಳಿಸಿದ ಮ್ಯಾಟ್‌ ಹೆನ್ರಿ ತಮ್ಮ ತಂಡದ ಅಭಿಯಾನಕ್ಕೆ ಚಾಲನೆ ನೀಡಿದರು. ಅವರ ನೇರ ಎಸೆತವು ಎಡಗೈ ಬ್ಯಾಟ್ಸ್‌ಮನ್ ಲಾಹಿರು ತಿರಿಮಾನ್ನೆ ಅವರ ಪ್ಯಾಡ್‌ಗೆ ಅಪ್ಪಳಿಸಿತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇದರಿಂದಾಗಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಡಿಆರ್‌ಎಸ್ ಮೊರೆ ಹೋದರು. ತಿರಿಮಾನ್ನೆ ಔಟ್ ಎಂದು ತೀರ್ಪು ಹೊರಹೊಮ್ಮಿತು.

ಕುಶಾಲ ಪೆರೆರಾ (29 ರನ್) ಮತ್ತು ತಿಸಾರ ಪೆರೆರಾ (27 ರನ್) ಅವರಿಬ್ಬರೇ ಎರಡಂಕಿ ಮೊತ್ತ ದಾಖಲಿಸಿದರು. ಉಳಿದ ಎಲ್ಲ ಬ್ಯಾಟ್ಸ್‌ಮನ್‌ಗಳೂ ವೈಫಲ್ಯ ಅನುಭವಿಸಿದರು. ಇದರಿಂದಾಗಿ ತಂಡವು 60 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಆದರೆ, ಕರುಣಾರತ್ನೆ ಒಬ್ಬರೇ ಹೋರಾಟ ಮುಂದುವರಿಸಿದರು. ಒಂದು ಕಡೆ ವಿಕೆಟ್‌ ಗಳು ಉರುಳುತ್ತಿದ್ದರೆ ಇನ್ನೊಂದೆಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಸಾಧ್ಯವಾದಷ್ಟೂ ವೇಗದಲ್ಲಿ ರನ್‌ಗಳನ್ನು ಗಳಿಸುವ ಒತ್ತಡ ಅವರ ಮೇಲಿತ್ತು. ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಅವರು ಕೊನೆಗೂ ಸಫಲರಾದರು!

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 105 ರನ್‌ಗಳಿಗೆ ಆಲೌಟ್‌ ಆಗಿತ್ತು. ವೆಸ್ಟ್‌ ಇಂಡೀಸ್ ತಂಡವು ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ಒಂಬತ್ತನೇ ಬಾರಿ ಸಾಧನೆ
ನ್ಯೂಜಿಲೆಂಡ್ ತಂಡವು ವಿಶ್ವಕಪ್ ಇತಿಹಾಸದಲ್ಲಿ ಒಟ್ಟು ಒಂಬತ್ತು ಬಾರಿ ಹತ್ತು ವಿಕೆಟ್‌ಗಳ ಅಂತರದ ಜಯ ಸಾಧನೆ ಮಾಡಿತು.

ಶ್ರೀಲಂಕಾ ತಂಡದ ವಿರುದ್ಧ ಜಯಿಸಿ ಈ ದಾಖಲೆ ಬರೆಯಿತು. ಇದೇ ಮೊದಲ ಬಾರಿಗೆ ಶ್ರೀಲಂಕಾ ಎದುರು ಇಷ್ಟು ದೊಡ್ಡ ಅಂತರದಿಂದ ಗೆದ್ದಿತು. ಇಲ್ಲಿಯವರೆಗೆ ಎರಡೂ ತಂಡಗಳು ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ನ್ಯೂಜಿಲೆಂಡ್ ಐದು ಬಾರಿ ಮತ್ತು ಶ್ರೀಲಂಕಾ ಆರು ಸಲ ಜಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT