ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಶಾ, ರಿಷಭ್‌ ಪಂತ್‌ ಪರಾಕ್ರಮ: ಮೊದಲ ಸಲ ‘ಪ್ಲೇ ಆಫ್’ ಗೆದ್ದ ಡೆಲ್ಲಿ

ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌
Last Updated 8 ಮೇ 2019, 20:36 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಎಡಗೈ ಬ್ಯಾಟ್ಸ್‌ಮನ್ ರಿಷಭ್‌ ಪಂತ್‌ ಬುಧವಾರ ಇಲ್ಲಿನ ಎಸಿಎ–ವಿಡಿಸಿಎ ಕ್ರೀಡಾಂಗಣದಲ್ಲಿ ಸುರಿಸಿದ ರನ್ ಮಳೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪಾಳಯದಲ್ಲಿ ಖುಷಿಯ ಹೊಳೆ ಉಕ್ಕಿ ಹರಿಯಿತು.

ಈ ಬಾರಿಯ ಲೀಗ್‌ನ ಎಲಿಮಿ ನೇಟರ್‌ ಪಂದ್ಯದಲ್ಲಿ ಡೆಲ್ಲಿ, 2 ವಿಕೆಟ್‌ ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಜಯಭೇರಿ ಮೊಳಗಿಸಿತು.

ಐಪಿಎಲ್‌ ‘ಪ್ಲೇ ಆಫ್’ ಹಂತದಲ್ಲಿ ಮೊದಲ ಬಾರಿಗೆ ಪಂದ್ಯವೊಂದನ್ನು ಗೆದ್ದ ಶ್ರೇಯಕ್ಕೂ ಶ್ರೇಯಸ್‌ ಅಯ್ಯರ್‌ ಬಳಗ ಪಾತ್ರವಾಯಿತು. ಈ ತಂಡವು ಈ ಹಿಂದೆ ನಾಲ್ಕು ಬಾರಿ ‘ಪ್ಲೇ ಆಫ್‌’ ಹಂತದಲ್ಲಿ ಎಡವಿತ್ತು.

ಮೊದಲು ಬ್ಯಾಟ್‌ ಮಾಡಿದ ಸನ್‌ ರೈಸರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162ರನ್‌ ಸೇರಿಸಿತು. ನಾಟಕೀಯ ತಿರುವುಗಳೊಂದಿಗೆ ಸಾಗಿದ ‍ಪಂದ್ಯದಲ್ಲಿ ಅಂತಿಮವಾಗಿ ಡೆಲ್ಲಿ ಗೆಲುವಿನ ಕೇಕೆ ಹಾಕಿತು. ಈ ತಂಡವು 19.5 ಓವರ್‌ ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ರಿಷಭ್ ಪಂತ್‌ (49; 21ಎ, 2ಬೌಂ, 5ಸಿ) ಮತ್ತು ಪೃಥ್ವಿ ಶಾ (56; 38ಎ, 6ಬೌಂ, 2ಸಿ) ಜೊತೆಗೆ ಕೀಮೊ ಪಾಲ್‌ (ಔಟಾಗದೆ 5; 4ಎ, 1ಬೌಂ) ಆಟವೂ ಅಭಿಮಾನಿಗಳ ಮನ ಗೆದ್ದಿತು.

ಖಲೀಲ್‌ ಅಹ್ಮದ್‌ ಹಾಕಿದ ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಮೊದಲ ಎಸೆತ ವೈಡ್‌ ಆಯಿತು. ನಂತರದ ಎಸೆತದಲ್ಲಿ ಅಮಿತ್‌ ಮಿಶ್ರಾ ಒಂದು ರನ್‌ ಗಳಿಸಿದರು. ಮರು ಎಸೆತದಲ್ಲಿ ರನ್‌ ಬರಲಿಲ್ಲ. ಹೀಗಾಗಿ ಅಭಿಮಾನಿಗಳ ಎದೆಬಡಿತ ಜೋರಾಗಿತ್ತು. ಮೂರನೇ ಎಸೆತದಲ್ಲಿ ಕೀಮೊ ಪಾಲ್‌ ಒಂದು ರನ್‌ ಕಲೆಹಾಕಿದರೆ ಮರು ಎಸೆತದಲ್ಲಿ ಮಿಶ್ರಾ ಪೆವಿಲಿಯನ್‌ ಸೇರಿದರು. ರನ್‌ಔಟ್‌ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ‘ಅಕ್ರಾಸ್‌ ದಿ ಪಿಚ್‌’ ಓಡಿದರು. ಖಲೀಲ್‌ ಅಹ್ಮದ್‌ ಅವರ ರನ್‌ಔಟ್‌ ಪ್ರಯತ್ನಕ್ಕೆ ಅಡ್ಡಿಪಡಿಸಿದ ಕಾರಣ ಅಂಪೈರ್‌, ಔಟ್‌ ತೀರ್ಪು ನೀಡಿದರು. ಐದನೇ ಎಸೆತವನ್ನು ಪಾಲ್‌, ಮಿಡ್‌ವಿಕೆಟ್‌ನತ್ತ ಬೌಂಡರಿ ಗಳಿಸುತ್ತಿದ್ದಂತೆ ಡೆಲ್ಲಿ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಅರ್ಧಶತಕದ ಆರಂಭ: ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಪೃಥ್ವಿ ಮತ್ತು ಶಿಖರ್‌ ಧವನ್ ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 45 ಎಸೆತಗಳಲ್ಲಿ 66ರನ್‌ ಪೇರಿಸಿತು.

16 ಎಸೆತಗಳಲ್ಲಿ ಮೂರು ಬೌಂಡರಿ ಸಹಿತ 17ರನ್‌ ಗಳಿಸಿದ್ದ ವೇಳೆ ಧವನ್‌ ಸ್ಟಂಪ್ ಔಟ್‌ ಆದರು. ಇದರ ಬೆನ್ನಲ್ಲೇ ನಾಯಕ ಶ್ರೇಯರ್‌ ಅಯ್ಯರ್‌ಗೆ (8) ಖಲೀಲ್‌ ಅಹ್ಮದ್‌ ಪೆವಿಲಿಯನ್‌ ದಾರಿ ತೋರಿಸಿದರು.

ಕಾಲಿನ್‌ ಮನ್ರೊ (14), ಅಕ್ಷರ್‌ ಪಟೇಲ್‌ (0) ಮತ್ತು ಶೆರ್ಫಾನ್‌ ರುದರ್‌ ಫೋರ್ಡ್‌ (9) ಬೇಗನೆ ನಿರ್ಗಮಿಸಿದ್ದರಿಂದ ಡೆಲ್ಲಿ ತಂಡ ಆತಂಕ ಎದುರಿಸಿತ್ತು.

ಶ್ರೇಯಸ್‌ ಬಳಗ ಕೊನೆಯ ನಾಲ್ಕು ಓವರ್‌ಗಳಲ್ಲಿ 42ರನ್‌ ಗಳಿಸಬೇಕಿತ್ತು. ಹೀಗಾಗಿ ಗೆಲುವು ಕಠಿಣ ಎಂದೇ ಭಾವಿಸ ಲಾಗಿತ್ತು. ಆದರೆ ಪಂತ್‌, ಪರಾಕ್ರಮ ಮೆರೆದು ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಬಾಸಿಲ್‌ ಥಂ‍ಪಿ ಹಾಕಿದ 18ನೇ ಓವರ್‌ನ ಆರಂಭದ ನಾಲ್ಕು ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸಿದರು. ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ಗಳಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ಈ ಓವರ್‌ನಲ್ಲಿ ಡೆಲ್ಲಿ ಖಾತೆಗೆ 22 ರನ್‌ಗಳು ಜಮೆಯಾದವು.

ತಂಡದ ಗೆಲುವಿಗೆ ಐದು ರನ್ ಬೇಕಿ ದ್ದಾಗ ಪಂತ್‌, ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ನೀಡಿದರು. ಹೀಗಾಗಿ ತಂಡದ ಮೇಲೆ ಆತಂಕದ ಕಾರ್ಮೋಡ ಕವಿ ದಿತ್ತು. ಆದರೆ ಪಾಲ್‌ ಮಿಂಚಿನ ಆಟ ಆಡಿ ಎಲ್ಲರ ಮನ ಗೆದ್ದರು.

ಇದಕ್ಕೂ ಮುನ್ನ ಸನ್‌ರೈಸರ್ಸ್‌ ತಂಡದ ಮಾರ್ಟಿನ್ ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ನಾಲ್ಕು ಸಿಕ್ಸರ್ ಸಿಡಿಸಿದ ಅವರು ಒಂದು ಬೌಂಡರಿಯನ್ನೂ ಗಳಿಸಿದರು. ಕೇವಲ 19 ಎಸೆತಗಳಲ್ಲಿ 36 ರನ್‌ ಗಳಿಸಿದ್ದಾಗ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.

ಮನೀಷ್ ಪಾಂಡೆ ಮತ್ತು ನಾಯಕ ಕೇನ್ ವಿಲಿಯಮ್ಸನ್‌ ಭರವಸೆ ಮೂಡಿಸಿ ದರು. ಆದರೆ ಇವರಿಬ್ಬರ 34 ರನ್‌ಗಳ ಜೊತೆಯಾಟವನ್ನು ಕೀಮೊ ಪಾಲ್ ಮುರಿದರು.

111 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ವಿಜಯ ಶಂಕರ್ ಮತ್ತು ಮೊಹಮದ್ ನಬಿ ಆಸರೆಯಾದರು. 12 ಎಸೆತಗಳಲ್ಲಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ವಿಜಯ 25 ರನ್‌ ಗಳಿಸಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT