ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್‌ ಚೆಟ್ರಿ.. ಬತ್ತದ ಛಲ; ಸಾಧನೆಯ ಬಲ

Last Updated 15 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಸುನಿಲ್‌ ಚೆಟ್ರಿ ಬಳಿಕ ಯಾರು? ತಂಡವುಅವರನ್ನೇ ಎಷ್ಟು ದಿನ ಅವಲಂಬಿಸಲಿದೆ? ಎಂಬ ಮಾತುಗಳು ಇತ್ತೀಚೆಗೆ ಭಾರತದ ಫುಟ್‌ಬಾಲ್‌ ಅಂಗಳದಲ್ಲಿ ಕೇಳಿಬರುತ್ತಿರುವುದು ಸುಳ್ಳಲ್ಲ. ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬಆಟಗಾರ ಬರಬಹುದು. ಆದರೆ 37ರ ಹರೆಯದಲ್ಲೂ ಉತ್ಸಾಹದ ಚಿಲುಮೆಯಾಗಿರುವ ಈ ಸೊಗಸುಗಾರ ತಂಡಕ್ಕೆ ನೀಡಿದ, ನೀಡುತ್ತಿರುವ ಕೊಡುಗೆ ಅಷ್ಟು ಬೇಗ ಮರೆಯುವಂತದ್ದಲ್ಲ.

ಸದ್ಯ ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಫುಟ್‌ಬಾಲ್‌ ದಿಗ್ಗಜ, ಬ್ರೆಜಿಲ್‌ನ ಪೆಲೆ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ ಭಾರತ ತಂಡದ ನಾಯಕ. ಆತಿಥೇಯ ಮಾಲ್ಡೀವ್ಸ್ ಎದುರಿನ ಪಂದ್ಯದಲ್ಲಿ ಎರಡು ಗೋಲು ದಾಖಲಿಸುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಪೆಲೆ ಅವರು 77 ಗೋಲು ದಾಖಲಿಸಿದ್ದರೆ, ಈಗ ಚೆಟ್ರಿ ಗಳಿಸಿದ ಗೋಲುಗಳ ಸಂಖ್ಯೆ 79.

2005ರಲ್ಲಿ ಕ್ವೆಟ್ಟಾದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು ಸುನಿಲ್‌. 16 ವರ್ಷಗಳ ವೃತ್ತಿಜೀವನದಲ್ಲಿ, ಭಾರತದ ಫುಟ್‌ಬಾಲ್‌ನಲ್ಲಿ ಸಾಧ್ಯವಿರುವ ಎಲ್ಲ ದಾಖಲೆಗಳನ್ನು ಅವರು ಮೀರುತ್ತ ಸಾಗಿದ್ದಾರೆ. 2011ರಲ್ಲಿ ಬೈಚುಂಗ್ ಭುಟಿಯಾ ನಿವೃತ್ತರಾದ ಬಳಿಕ ದೇಶದ ಫುಟ್‌ಬಾಲ್‌ನ ಪ್ರಮುಖ ಆಟಗಾರನಾಗಿ ಬೆಳೆದಿದ್ದಾರೆ.

ಸುನಿಲ್‌ ಭಾರತ ತಂಡದ ‍ಪರ ಆಡಿರುವ ಪಂದ್ಯಗಳ ಸಂಖ್ಯೆ 124. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಜಾಂಬಿಯಾದ ಗಾಡ್‌ಫ್ರೆ ಚಿತಾಲು ಜೊತೆ ಚೆಟ್ರಿ ಆರನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿವರು ಪೋರ್ಚುಗಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ. 182 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 115 ಬಾರಿ ಕಾಲ್ಚಳಕ ತೋರಿದ್ದಾರೆ.

ಈಗ ಅಂತರರಾಷ್ಟ್ರೀಯ ಫುಟ್‌ಬಾಲ್ ಆಡುತ್ತಿರುವವರ ಪೈಕಿ ಗೋಲು ಗಳಿಕೆಯಲ್ಲಿ ಸುನಿಲ್‌ ಮೂರನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಮುಂದಿರುವವರು. ರೊನಾಲ್ಡೊ ಮತ್ತು ಅರ್ಜೆಂಟೀನಾ ದಿಗ್ಗಜ ಲಯೊನೆಲ್ ಮೆಸ್ಸಿ (80) ಮಾತ್ರ.

‘ಫುಟ್‌ಬಾಲ್ ಬಲ್ಲ ಎಲ್ಲರಿಗೂ ಗೊತ್ತು; ದಿಗ್ಗಜ ಪೆಲೆ ಅವರ ಜೊತೆಗೆ ನನ್ನ ಸಾಧನೆ ಹೋಲಿಕೆ ಮಾಡುವುದು ಸಮಂಜಸ ಅಲ್ಲವೆಂದು. ಅವರು ಆಡುತ್ತಿದ್ದ ಸಂದರ್ಭದಲ್ಲಿ ಆಟ ಭಿನ್ನವಾಗಿತ್ತು; ಕಠಿಣವೂ ಆಗಿತ್ತು. ಅವರು ಯಾವತ್ತಿಗೂ ಮಹಾನ್ ಆಟಗಾರ’ ಎಂದು ಇತ್ತೀಚೆಗೆ ಸುದ್ದಿಸಂಸ್ಥೆಯೊಂದಕ್ಕೆ ಚೆಟ್ರಿ ಹೇಳಿದ್ದರು. ಅದು ಅವರ ಸರಳತೆ.

ಹೆಚ್ಚು ಪ್ರೋತ್ಸಾಹ ಇರದ ಫುಟ್‌ಬಾಲ್‌ನಲ್ಲಿ, ಸಿಗುವ ಸೀಮಿತ ಸೌಲಭ್ಯಗಳನ್ನೇ ಬಳಸಿಕೊಂಡುಇಂತಹ ಮಹತ್ವದ ಸಾಧನೆ ಮಾಡಿದ್ದಾರೆ ಚೆಟ್ರಿ.

‘ದೇಶಕ್ಕಾಗಿ ಆಡಿ ಗೋಲು ಗಳಿಸುವುದಕ್ಕಿಂತ ಬೇರೆ ಖುಷಿ ಮತ್ತೇನಿದೆ. ಇನ್ನೂ ಕೆಲವೇ ದಿನಗಳಲ್ಲಿ ನಾನು ವಿದಾಯ ಹೇಳಬಹುದು. ಆದರೆ ಈ ಕೆಲವೇ ದಿನಗಳು ಒಂದು ವರ್ಷಕ್ಕಿಂತ ಕಡಿಮೆ ಇರಲಾರವು’ ಎಂದು ದೇಶಕ್ಕಾಗಿ ಆಡುಬಯಸುವ ತಮ್ಮ ಹಂಬಲ ಬತ್ತಿಲ್ಲ ಎಂಬುದನ್ನು ಸುನಿಲ್‌ ಸೂಚ್ಯವಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT