ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಶಿಬಿರ ಆಯೋಜಿಸಲಿರುವ ಎಐಎಫ್ಎಫ್

Last Updated 16 ಜುಲೈ 2020, 15:35 IST
ಅಕ್ಷರ ಗಾತ್ರ

ನವದೆಹಲಿ: ಕತಾರ್ ವಿರುದ್ಧ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದ ಸಿದ್ಧತೆಯ ಅಂಗವಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಸೆಪ್ಟೆಂಬರ್‌ನಲ್ಲಿ ಭಾರತ ಫುಟ್‌ಬಾಲ್ ತಂಡದ ಅಭ್ಯಾಸ ಶಿಬಿರ ಆಯೋಜಿಸಲಿದೆ.

ಭುವನೇಶ್ವರದಲ್ಲಿ ಶಿಬಿರ ನಡೆಯಲಿದ್ದು ಒಡಿಶಾ ಸರ್ಕಾರ ಶೀಘ್ರದಲ್ಲೇ ಇದಕ್ಕೆ ಅನುಮತಿ ನೀಡುವ ಭರವಸೆ ಇದೆ ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಗುರುವಾರ ತಿಳಿಸಿದರು. ನಿರೀಕ್ಷೆಯಂತೆ ಶಿಬಿರ ನಡೆದರೆ ಏಷ್ಯನ್ ಚಾಂಪಿಯನ್ ಕತಾರ್ ಎದುರಿನ ಪಂದ್ಯಕ್ಕೂ ಮೊದಲು ಭಾರತ ತಂಡಕ್ಕೆ ಒಂದು ತಿಂಗಳ ತರಬೇತಿ ಸಿಗಲಿದೆ. ಪಂದ್ಯ ಅಕ್ಟೋಬರ್ ಎಂಟರಂದು ನಡೆಯಲಿದೆ.

‘ಒಡಿಶಾ ಸರ್ಕಾರ ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಎರಡೂ ಕಡೆಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಕೊರೊನಾ ಹಾವಳಿಯಿಂದಾಗಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದರೆ ಅಭ್ಯಾಸ ಮಾಡದೇ ಇರುವುದಕ್ಕೆ ಆಗುವುದಿಲ್ಲ. ಆದ್ದರಿಂದ ಎಲ್ಲ ಸಾಧ್ಯತೆಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ‘ ಎಂದು ಎಐಎಫ್ಎಫ್ ಟಿವಿ ಜೊತೆ ನಡೆಸಿದ ಸಂವಾದದಲ್ಲಿ ದಾಸ್ ಹೇಳಿದರು.

2022ರ ವಿಶ್ವಕಪ್ ಟೂರ್ನಿಯಿಂದ ಭಾರತ ತಂಡ ಈಗಾಗಲೇ ಹೊರಬಿದ್ದಿದೆ. ಆದರೆ 2023ರ ಎಎಫ್‌ಸಿ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಗಳಿಸಲು ಇನ್ನೂ ಅವಕಾಶವಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಪಂದ್ಯ ಎರಡೂ ಟೂರ್ನಿಗಳಿಗೆ ಅನ್ವಯ ಆಗುವುದರಿಂದ ಭಾರತ ತಂಡಕ್ಕೆ ಅದು ಮಹತ್ವದ್ದೆನಿಸಿದೆ.

ಕತಾರ್ ಎದುರಿನ ಪಂದ್ಯದ ನಂತರ ಭಾರತ ತಂಡ ನವೆಂಬರ್ 12ರಂದು ಬಾಂಗ್ಲಾದೇಶವನ್ನು ಅದರದೇ ನೆಲದಲ್ಲಿ ಎದುರಿಸಲಿದೆ. ನವೆಂಬರ್ 17ರಂದು ಕೋಲ್ಕತ್ತದಲ್ಲಿ ಅಫ್ಗಾನಿಸ್ತಾನ ವಿರುದ್ಧ ಸೆಣಸಲಿದೆ.

’ವಯೋಮಾನ ವಿಭಾಗದವರ ತರಬೇತಿ ಶಿಬಿರಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಆದರೆ 16 ಮತ್ತು 17 ವರ್ಷದೊಳಗಿನ ಮಹಿಳೆಯರ ತಂಡಗಳ ಶಿಬಿರವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು. ನವೆಂಬರ್ 25ರಂದು ಆರಂಭವಾಗಲಿರುವ ಎಎಫ್‌ಸಿ 16 ವರ್ಷದೊಳಗಿನವರ ಬಾಲಕರ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಶಿಬಿರ ಆಯೋಜಿಸುವ ಯೋಜನೆಯೂ ಇದೆ‘ ಎಂದು ದಾಸ್ ತಿಳಿಸಿದರು.

‘ವೈರಾಣು ದಾಳಿಯಿಂದಾಗಿ ಎಲ್ಲ ಯೋಜನೆಗಳು ಬುಡಮೇಲಾಗಿವೆ. ಸಾಮಾನ್ಯವಾಗಿ ಕಿರಿಯರ ತಂಡಗಳ ಆಟಗಾರರನ್ನು ಹೆಚ್ಚಿನ ಅನುಭವಕ್ಕಾಗಿ ಬೇರೆ ಬೇರೆ ಕಡೆಗೆ ಕಳುಹಿಸಲಾಗುತ್ತದೆ. ಇಂಥ ಪ್ರವಾಸಗಳ ಬಗ್ಗೆ ಈಗಲೂ ಚಿಂತನೆ ನಡೆಸಲಾಗುತ್ತಿದೆ. ಆದರೆ ಆಟಗಾರರು ಮತ್ತು ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಸದ್ಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ‘ ಎಂದು ಅವರು ವಿವರಿಸಿದರು.

’ಬಹರೇನ್‌ಗೆ ತೆರಳಲಿರುವ 16 ವರ್ಷದೊಳಗಿನ ತಂಡಕ್ಕಾಗಿ ಕೆಲವು ಸ್ಪರ್ಧಾತ್ಮಕ ಪಂದ್ಯಗಳನ್ನು ಆಯೋಜಿಸಲು ಪ್ರಯತ್ನ ನಡೆಯುತ್ತಿದೆ. 17 ವರ್ಷದೊಳಗಿನ ಮಹಿಳಾ ತಂಡಕ್ಕೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಬಹುದು ಎಂದೆನಿಸುತ್ತದೆ. ಆದರೆ ಯಾವುದನ್ನೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ‘ ಎಂದು ಅವರು ನುಡಿದರು.

’ಕೊರೊನಾದಿಂದಾಗಿ ಇನ್ನೂ ಒಂದು ವರ್ಷ ಅಥವಾ ಆರು ತಿಂಗಳು ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಕಡಿಮೆ. ಆದರೆ ಮುಂದಿನ ಎರಡು–ಮೂರು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿ ಎಲ್ಲವೂ ಸಹಜವಾಗಲಿದೆ ಎಂಬ ಭರವಸೆ ಇದೆ‘ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT