ಕೋಲ್ಕತ್ತ: ಅಂತರರಾಷ್ಟ್ರೀಯ ಆಟಗಾರ ಅನ್ವರ್ ಅಲಿ ಅವರ ಮೇಲೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ನಾಲ್ಕು ತಿಂಗಳ ನಿಷೇಧ ಹೇರಿದೆ. ಮೋಹನ್ ಬಾಗನ್ ಕ್ಲಬ್ ಜೊತೆ ಮಾಡಿಕೊಂಡಿದ್ದ ನಾಲ್ಕು ವರ್ಷಗಳ ಗುತ್ತಿಗೆ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಪ್ರಕರಣದಲ್ಲಿ ಅವರನ್ನು ‘ದೋಷಿ’ ಎಂದು ಫೆಡರೇಷನ್ ಹೇಳಿದೆ.
ಈ ಪ್ರಕರಣದಲ್ಲಿ ಕೋಲ್ಕತ್ತದ ಕ್ಲಬ್ ಮೋಹನ್ ಬಾಗನ್ ₹12.90 ಕೋಟಿ ಮೊತ್ತದ ಪರಿಹಾರ ಪಡೆಯಲು ಅರ್ಹವಾಗಿದೆ ಎಂದೂ ಫೆಡರೆಷನ್ ತಿಳಿಸಿದೆ.
ರಕ್ಷಣೆ ಆಟಗಾರ ಅನ್ವರ್ ಅವರು ಡೆಲ್ಲಿ ಎಫ್‌ಸಿ ಮತ್ತು ಈಸ್ಟ್ ಬೆಂಗಾಲ್ ಜೊತೆ ದೊಡ್ಡ ಮೊತ್ತದ ಒಪ್ಪಂದ ಮಾಡಿಕೊಂಡಿದ್ದರು. ಈ ಎರಡೂ ಕ್ಲಬ್‌ಗಳಿಗೆ ಮುಂದಿನ ಎರಡು ಸಾಲಿನಲ್ಲಿ (2024–25 ಮತ್ತು 2025–26ರ ಬೇಸಿಗೆಯಲ್ಲಿ) ಆಟಗಾರರ ವರ್ಗಾವಣೆ ವೇಳೆ ನೋಂದಣಿ ಮಾಡಿಕೊಳ್ಳುವುದಕ್ಕೆ ಫೆಡರೇಷನ್‌ನ ಪ್ಲೇಯರ್ಸ್ ಸ್ಟೇಟಸ್ ಕಮಿಟಿ (ಪಿಎಸ್‌ಸಿ) ನಿಷೇಧ ಹೇರಿದೆ.
ಅನ್ವರ್ ಅಲಿ, ಈಸ್ಟ್ ಬೆಂಗಾಲ್ ಮತ್ತು ಡೆಲ್ಲಿ ಎಫ್‌ಸಿ ಸೇರಿಕೊಂಡು ಬಾಗನ್‌ಗೆ ಆದ ನಷ್ಟಕ್ಕೆ ಪರಿಹಾರ ಮೊತ್ತ ನೀಡಲು ಬಾಧ್ಯಸ್ಥರು ಎಂದು ಪಿಎಸ್‌ಸಿ ತಿಳಿಸಿದೆ.
23 ವರ್ಷದ ಸೆಂಟರ್ ಬ್ಯಾಕ್ ಆಟಗಾರ ಅಲಿ ಅವರು ಬಾಗನ್ ಜೊತೆಗಿನ ಒಪ್ಪಂದವನ್ನು ಏಕಪಕ್ಷೀಯವಾಗಿ ಕೊನೆಗೊಳಿಸಿ ಈಸ್ಟ್ ಬೆಂಗಾಲ್‌ಗೆ ವರ್ಗಾವಣೆ ಆಗಿದ್ದರು. ಇದು ವಿವಾದಕ್ಕೆ ಕಾರಣವಾಯಿತು. ಅನ್ವರ್ ಕ್ರಮವನ್ನು ಪ್ರಶ್ನಿಸಿ ಮೋಹನ್ ಬಾಗನ್ ಪಿಎಸ್‌ಸಿಗೆ ದೂರು ಸಲ್ಲಿಸಿತ್ತು.
ಅನ್ವರ್ ಮೆಲಿನ ಅಮಾನತು ಕ್ಲಬ್ ಪಂದ್ಯಗಳಿಗೆ ಅನ್ವಯವಾಗಲಿದೆ. ಅವರು ಭಾರತ ತಂಡಕ್ಕೆ ಆಡಲು ಅರ್ಹರಾಗಿರುತ್ತಾರೆ.
ಒಂದೊಮ್ಮೆ ಮೋಹನ್ ಬಾಗನ್ ಕ್ಲಬ್‌ಗೆ 45 ದಿನಗಳ ಒಳಗೆ ಪರಿಹಾರ ಪಾವತಿಸದೇ ಹೋದಲ್ಲಿ, ಈಸ್ಟ್ ಬೆಂಗಾಲ್ ಮತ್ತು ಡೆಲ್ಲಿ ಎಫ್‌ಸಿ ಕ್ಲಬ್‌ಗಳು ಹೊಸ ಆಟಗಾರರ ನೋಂದಣಿ ಮಾಡಿಕೊಳ್ಳುವುದಕ್ಕೆ ಮೂರು ವರ್ಷ ನಿಷೇಧ ಹೇರಲಾಗುವುದು ಎಂದೂ ಫೆಡರೇಷನ್ ಎಚ್ಚರಿಕೆ ನೀಡಿದೆ.