ಭಾನುವಾರ, ನವೆಂಬರ್ 29, 2020
21 °C
ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ಗೆ ಕೇರಳ ಬ್ಲಾಸ್ಟರ್ಸ್ ಎದುರಾಳಿ

ಐಎಸ್‌ಎಲ್‌ ಫುಟ್‌ಬಾಲ್: ಬೆಂಗಳೂರಿಗೆ ಗೋವಾ ಮೊದಲ ಎದುರಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಡಗಾಂವ್: ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಹಣಾಹಣಿಯೊಂದಿಗೆ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿ ಆರಂಭಗೊಳ್ಳಲಿದೆ. ಈ ಪಂದ್ಯ ನವೆಂಬರ್ 20ರಂದು ಬಾಂಬೋಲಿನ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೋವಿಡ್–19ರಿಂದಾಗಿ ಎಲ್ಲ ಪಂದ್ಯಗಳೂ ಗೋವಾದ ಮೂರು ಕ್ರೀಡಾಂಗಣಗಳಲ್ಲಿ ನಡೆಯಲಿದ್ದು ಪ್ರೇಕ್ಷಕರಿಗೆ ಅವಕಾಶವಿಲ್ಲ. ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಮೊದಲ ಪಂದ್ಯ ನವೆಂಬರ್ 22ರಂದು ಫಟೋಡಾದಲ್ಲಿ ನಡೆಯಲಿದೆ. ಬಿಎಫ್‌ಸಿಗೆ ಆತಿಥೇಯ ಏಫ್‌ಸಿ ಗೋವಾ ಮೊದಲ ಎದುರಾಳಿ.

11 ತಂಡಗಳು ಒಳಗೊಂಡಿರುವ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಐಎಸ್‌ಎಲ್ ಆಯೋಜಕರು ಶುಕ್ರವಾರ ಬಿಡುಗಡೆ ಮಾಡಿದ್ದು 2011ರ ಜನವರಿ 11ರ ವರೆಗೆ ಈ ಹಂತದ ಪಂದ್ಯಗಳು ನಡೆಯಲಿವೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ. 

ಕಳೆದ ಬಾರಿಯ ಫೈನಲ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿ ಎಟಿಕೆ ಪ್ರಶಸ್ತಿ ಗೆದ್ದುಕೊಂಡಿತ್ತು. ಎಫ್‌ಸಿ ಗೋವಾ ಲೀಗ್ ಹಂತದ ಚಾಂಪಿಯನ್ ಆಗಿತ್ತು. ಈ ಮೂಲಕ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ ಟೂರ್ನಿಯ ಗುಂಪು ಹಂತಕ್ಕೆ ನೇರ ಪ್ರವೇಶ ಪಡೆದ ಭಾರತದ ಮೊದಲ ತಂಡ ಎಂದೆನಿಸಿಕೊಂಡಿತ್ತು. ಇತ್ತೀಚೆಗೆ ಎಟಿಕೆ ತಂಡ ಮೋಹನ್ ಬಾಗನ್ ಜೊತೆ ಸೇರಿ ಒಂದೇ ಕ್ಲಬ್ ಆಗಿ ಕಣಕ್ಕೆ ಇಳಿಯಲು ತೀರ್ಮಾನಿಸಿದೆ. ‌

ಕೋಲ್ಕತ್ತ ನಗರದ ಎರಡು ತಂಡಗಳಾದ ಎಟಿಕೆ ಮೋಹನ್ ಬಾಗನ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ನಡುವಿನ ಮೊದಲ ಪಂದ್ಯ ವಾಸ್ಕೋದ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನವೆಂಬರ್ 27ರಂದು ನಡೆಯಲಿದೆ.

ಆಟಗಾರರು, ತಂಡದ ಸಿಬ್ಬಂದಿ ಮತ್ತು ಟೂರ್ನಿಯ ಅಧಿಕಾರಿಗಳು ಬಯೊ ಸೆಕ್ಯೂರ್ ವ್ಯವಸ್ಥೆಯ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲಿದ್ದು ಆರೋಗ್ಯ ಸೇತು ಮತ್ತು ಐಎಸ್‌ಎಲ್ ಆರೋಗ್ಯ ಆ್ಯಪ್‌ಗಳನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡಿರಬೇಕು. ಯಾರಿಗಾದರೂ ಸೋಂಕು ಇರುವುದು ದೃಢವಾದರೆ ಅವರನ್ನು ತಕ್ಷಣ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಏಳು ದಿನಗಳಲ್ಲಿ ಮೂರು ಬಾರಿ ನೆಗೆಟಿವ್ ವರದಿ ಬಂದ ನಂತರವಷ್ಟೇ ಅವರನ್ನು ಇತರರ ಜೊತೆ ಸೇರಿಸಲಾಗುತ್ತದೆ. ಗೋವಾಗೆ ಬಂದಿಳಿಯುವ ಮೊದಲು ಪ್ರತಿಯೊಬ್ಬರೂ ಮೂರು ಬಾರಿ ನೆಗೆಟಿವ್ ವರದಿ ಹೊಂದಿರಬೇಕು. ಗೋವಾಗೆ ಬಂದ ನಂತರ ಭಾರತದ ಆಟಗಾರರಿಗೆ 10 ದಿನ ಮತ್ತು ವಿದೇಶಿ ಆಟಗಾರರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ. 

ನಾರ್ತ್ ಈಸ್ಟ್ ಯುನೈಟೆಡ್ ತಂಡದ ಏಳು ಮಂದಿ ಆಟಗಾರರು ಮತ್ತು ಸಹಾಯಕ ಕೋಚ್ ಖಲೀದ್ ಜಮೀಲ್ ಅವರಿಗೆ ಕೋವಿಡ್ ಇರುವುದು ಈ ತಿಂಗಳ ಆರಂಭದಲ್ಲಿ ದೃಢಪಟ್ಟಿತ್ತು.

ಮೊದಲ ಹಂತದಲ್ಲಿ ಬಿಎಫ್‌ಸಿ ಪಂದ್ಯಗಳು

ದಿನಾಂಕ;ಎದುರಾಳಿ;ಸ್ಥಳ

ನ.22;ಎಫ್‌ಸಿ ಗೋವಾ;ಫಟೋಡಾ

ನ.28;ಹೈದರಾಬಾದ್ ಎಫ್‌ಸಿ;ಫಟೋಡಾ

ಡಿ.4;ಚೆನ್ನೈಯಿನ್ ಎಫ್‌ಸಿ;ಜಿಎಂಸಿ

ಡಿ.8;ನಾರ್ತ್ ಈಸ್ಟ್‌;ಫಟೋಡಾ

ಡಿ.13;ಕೇರಳ ಬ್ಲಾಸ್ಟರ್ಸ್;ಫಟೋಡಾ

ಡಿ.17;ಒಡಿಶಾ ಎಫ್‌ಸಿ;ಜಿಎಂಸಿ

ಡಿ.21;ಎಟಿಕೆ ಮೋಹನ್ ಬಾಗನ್;ಫಟೋಡಾ

ಡಿ.28;ಜೆಮ್ಶೆಡ್‌ಪುರ್ ಎಫ್‌ಸಿ;ಫಟೋಡಾ

ಜ.5‍;ಮುಂಬೈ ಸಿಟಿ ಎಫ್‌ಸಿ;ಫಟೋಡಾ

ಜ.9;ಎಫ್‌ಸಿ ಈಸ್ಟ್ ಬೆಂಗಾಲ್;ಫಟೋಡಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು