ಶುಕ್ರವಾರ, ಆಗಸ್ಟ್ 19, 2022
27 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿರುವ ತಂಡಗಳ ಹಣಾಹಣಿ

ಬಲಿಷ್ಠ ಎಟಿಕೆಎಂಬಿಗೆ ಅಜೇಯ ಬಿಎಫ್‌ಸಿ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರಿರುವ ತಂಡಗಳೆರಡರ ಹಣಾಹಣಿಗೆ ಫತೋರ್ಡ ಕ್ರೀಡಾಂಗಣ ಸಜ್ಜಾಗಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಸೆಣಸಲಿದ್ದು ಬಿಎಫ್‌ಸಿ ತನ್ನ ಅಜೇಯ ಓಟ ಮುಂದುವರಿಸಲು ಪ್ರಯತ್ನಿಸಲಿದೆ.

‍‍ಪ್ರಬಲ ಆಕ್ರಮಣಕಾರಿ ಆಟಗಾರರು ಮತ್ತು ಬಲಿಷ್ಠ ರಕ್ಷಣಾ ವಿಭಾಗ ಹೊಂದಿರುವ ಎಟಿಕೆ ಮೋಹನ್ ಬಾಗನ್ ಈ ವರೆಗೆ ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ. ಬಿಎಫ್‌ಸಿ ಕೂಡ ಎಲ್ಲ ವಿಭಾಗಗಳಲ್ಲೂ ಸಮರ್ಥ ಆಟಗಾರರನ್ನು ಹೊಂದಿದೆ. ಎರಡೂ ತಂಡಗಳು ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿವೆ. ಸೋಮವಾರದ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿಯ ಪೈಪೋಟಿ ನಡೆಸುವ ಸಾಧ್ಯತೆ ಇದೆ. 

ಈ ಪಂದ್ಯದಲ್ಲಿ ಎದುರಾಗಲಿರುವ ಸವಾಲಿನ ಬಗ್ಗೆ ಮಾತನಾಡಿದ ಎಟಿಕೆ ಮೋಹನ್ ಬಾಗನ್ ತಂಡದ ಕೋಚ್ ಆ್ಯಂಟೊನಿಯೊ ಹಬಾಸ್ ‘ಐಎಸ್‌ಎಲ್‌ನಲ್ಲಿ ಎಲ್ಲ ಕ್ಲಬ್‌ಗಳೂ ಸಮತೋಲನದ ತಂಡಗಳನ್ನು ಹೊಂದಿವೆ. ಆದ್ದರಿಂದ ಯಾವುದೇ ತಂಡಕ್ಕೆ ಎಲ್ಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆದರೂ ಸೋಲಲು ಯಾರೂ ಬಯಸುವುದಿಲ್ಲ. ಸೋಮವಾರದ ಪಂದ್ಯದಲ್ಲಿ ಮೂರು ಪಾಯಿಂಟ್‌ಗಳನ್ನು ಗಳಿಸುವ ಗುರಿಯೊಂದಿಗೆ ನಮ್ಮ ತಂಡ ಕಣಕ್ಕೆ ಇಳಿಯಲಿದೆ’ ಎಂದು ಹೇಳಿದರು.

ಲೀಗ್‌ನಲ್ಲಿ ಈ ವರೆಗೆ ಅತಿ ಹೆಚ್ಚು ಟ್ಯಾಕಲ್‌ಗಳನ್ನು (233) ಮಾಡಿರುವ ತಂಡ ಎಟಿಕೆ ಮೋಹನ್ ಬಾಗನ್. ಅತಿ ಹೆಚ್ಚು ಕ್ಲಿಯರೆನ್ಸ್‌ಗಳನ್ನು (182) ಮಾಡಿರುವ ತಂಡಗಳ ಪಟ್ಟಿಯಲ್ಲಿ ಎಟಿಕೆಮೋಹನ್ ಬಾಗನ್ ಎರಡನೇ ಸ್ಥಾನದಲ್ಲಿದೆ. 

‘ಬೆಂಗಳೂರು ಬಲಿಷ್ಠ ತಂಡ. ಆ ತಂಡಕ್ಕೆ ಆಕ್ರಮಣ ನಡೆಸಲು ಅವಕಾಶ ನೀಡದೇ ಇದ್ದರೆ ನಮಗೆ ಗೆಲುವು ಸುಲಭವಾಗಲಿದೆ. ಇದಕ್ಕೆ ಬೇಕಾದ ತಂತ್ರಗಳೊಂದಿಗೆ ಕಣಕ್ಕೆ ಇಳಿಯಲಿದ್ದೇವೆ’ ಎಂದು ಹಬಾಸ್ ಹೇಳಿದರು. 

‘ಎಟಿಕೆ ಮೋಹನ್ ಬಾಗನ್ ತಂಡದಲ್ಲಿ ಅತ್ಯುತ್ತಮ ಆಟಗಾರರು ಇದ್ದಾರೆ. ದೈಹಿಕವಾಗಿ ಬಲಿಷ್ಠವಾಗಿರುವ ಆಟಗಾರರು ತಂತ್ರಗಾರಿಕೆಯಲ್ಲೂ ಪಳಗಿದ್ದಾರೆ. ಎಲ್ಲರೂ ಉತ್ತಮ ಲಯದಲ್ಲಿದ್ದಾರೆ. ಅವರೆಲ್ಲರ ಸಾಮರ್ಥ್ಯ ನಮಗೆ ಚೆನ್ನಾಗಿ ತಿಳಿದಿದೆ. ಎಫ್‌ಸಿ ಗೋವಾ ಎದುರಿನ ಪಂದ್ಯದಲ್ಲಿ ಅವರು ಯಾವ ರೀತಿಯ ಸಾಮರ್ಥ್ಯ ತೋರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅಂಥ ತಂಡವನ್ನು ಬಿಎಫ್‌ಸಿ ಅತ್ಯಂತ ಎಚ್ಚರಿಕೆಯಿಂದ ಎದುರಿಸಲಿದೆ’ ಎಂದು ಕೋಚ್ ಕಾರ್ಲಸ್ ಕ್ವದ್ರತ್‌ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು