ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಗೆಲುವಿಗೆ ಅಡ್ಡಿಯಾದ ಪ್ರೀತಮ್

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಇಂದು ಬೆಂಗಾಲ್‌–ನಾರ್ತ್ ಈಸ್ಟ್ ಹಣಾಹಣಿ
Last Updated 22 ಫೆಬ್ರುವರಿ 2021, 17:05 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಕೊನೆಯ ವರೆಗೂ ಜಯದ ಹಾದಿಯಲ್ಲಿದ್ದ ಹೈದರಾಬಾದ್ ಎಫ್‌ಸಿ ತಂಡಕ್ಕೆ ಪ್ರೀತಮ್ ಪೆಟ್ಟು ನೀಡಿದರು. ತಿಲಕ್ ಮೈದಾನದಲ್ಲಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಹೈದರಾಬಾದ್ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಿನ ಪಂದ್ಯ 2–2ರಲ್ಲಿ ಡ್ರಾ ಆಯಿತು.

ಎಂಟನೇ ನಿಮಿಷದಲ್ಲಿ ಅರಿದಾನೆ ಸಂಟಾನಾ ಗಳಿಸಿದ ಗೋಲಿನ ಮೂಲಕ ಹೈದರಾಬಾದ್ ಮುನ್ನಡೆ ಗಳಿಸಿತ್ತು. 57ನೇ ನಿಮಿಷದಲ್ಲಿ ಮನ್ವಿರ್ ಗೋಲು ಗಳಿಸಿ ಎಟಿಕೆಎಂಬಿಗೆ ಸಮಬಲ ತಂದುಕೊಟ್ಟರು. 75ನೇ ನಿಮಿಷದಲ್ಲಿ ಅಲ್ಬರ್ಗ್ ಕಾಲ್ಚಳಕದ ಬಲದಿಂದ ಹೈದರಾಬಾದ್ ಮತ್ತೆ ಮುನ್ನಡೆ ಸಾಧಿಸಿತು. ಆದರೆ ಇಂಜುರಿ ಅವಧಿಯಲ್ಲಿ ಪ್ರೀತಮ್ ಗೋಲು ಗಳಿಸಿ ಎಟಿಕೆ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಐದನೇ ನಿಮಿಷದಲ್ಲೇ ಚಿಂಗ್ಲೆನ್ಸಾನ ಸಿಂಗ್‌ಗೆ ರೆಡ್ ಕಾರ್ಡ್ ತೋರಿಸಿದ ಕಾರಣ ಹೈದರಾಬಾದ್ ಎಫ್‌ಸಿಗೆ 10 ಆಟಗಾರರ ಬಲ ಮಾತ್ರ ಇತ್ತು.

ನಾರ್ತ್‌ ಈಸ್ಟ್–ಈಸ್ಟ್ ಬೆಂಗಾಲ್ ಹಾಣಹಣಿ

ಫತೋರ್ಡದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಸೆಣಸಲಿವೆ. ಈಸ್ಟ್ ಬೆಂಗಾಲ್ ತಂಡದ ಪ್ಲೇ ಆಫ್ ಕನಸು ಈಗಾಗಲೇ ಕಮರಿದ್ದು ನಾರ್ತ್ ಈಸ್ಟ್ ಈ ಪಂದ್ಯದಲ್ಲಿ ಗೆದ್ದರೆ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.

ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಈಸ್ಟ್ ಬೆಂಗಾಲ್ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ನಂತರ ಚೇತರಿಸಿಕೊಂಡು ಭರವಸೆ ಮೂಡಿಸಿತ್ತು. ಆದರೆ ಈಚಿನ ಪಂದ್ಯಗಳಲ್ಲಿ ಮತ್ತೆ ನಿರಾಸೆ ಅನುಭವಿಸಿದೆ. ಹಿಂದಿನ ಒಂದು ತಿಂಗಳ ಅವಧಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಈ ತಂಡ ಗಳಿಸಿದ್ದು ಐದು ಗೋಲು ಮಾತ್ರ. ಇದು ತಂಡದ ಫಾರ್ವರ್ಡ್ ವಿಭಾಗದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ವೈಫಲ್ಯ ಮೀರಿ ನಿಂತಿದ್ದರೆ ತಂಡಕ್ಕೆ ಪ್ಲೇ ಆಫ್‌ ಹಂತಕ್ಕೇರುವ ಅವಕಾಶವಿತ್ತು.

ನಾರ್ತ್ ಈಸ್ಟ್ ಈಚೆಗೆ ಉತ್ತಮ ಸಾಮರ್ಥ್ಯ ತೋರುತ್ತ ಮುನ್ನಡೆದಿದೆ. ಖಲೀದ್ ಜಮೀಲ್ ಅವರು ಹಂಗಾಮಿ ಕೋಚ್ ಆದ ನಂತರ ತಂಡಕ್ಕೆ ಹೊಸ ಹುರುಪು ಬಂದಿದೆ. ಕಳೆದ ಎಂಟು ಪಂದ್ಯಗಳಲ್ಲಿ ಅಜೇಯವಾಗಿದೆ. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದೇ ಈ ಯಶಸ್ಸಿಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT