ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಫುಟ್‌ಬಾಲ್‌: ಎಂಟರಘಟ್ಟಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್‌

ವಿಶ್ವಕಪ್‌ ಫುಟ್‌ಬಾಲ್‌: ಡೆನ್ಮಾರ್ಕ್‌, ನೈಜೀರಿಯಾಕ್ಕೆ ನಿರಾಸೆ
Published 7 ಆಗಸ್ಟ್ 2023, 14:15 IST
Last Updated 7 ಆಗಸ್ಟ್ 2023, 14:15 IST
ಅಕ್ಷರ ಗಾತ್ರ

ಸಿಡ್ನಿ/ ಬ್ರಿಸ್ಬೇನ್‌: ಆತಿಥೇಯ ಆಸ್ಟ್ರೇಲಿಯಾ ಮತ್ತು ಯೂರೋಪಿಯನ್‌ ಚಾಂಪಿಯನ್‌ ಇಂಗ್ಲೆಂಡ್‌ ತಂಡಗಳು ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದವು.

ಸಿಡ್ನಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ 76 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಸೋಮವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 2–0 ಗೋಲುಗಳಿಂದ ಡೆನ್ಮಾರ್ಕ್‌ ತಂಡವನ್ನು ಮಣಿಸಿತು. ಬ್ರಿಸ್ಬೇನ್‌ನಲ್ಲಿ ನಡೆದ ಹಣಾಹಣಿಯಲ್ಲಿ ಇಂಗ್ಲೆಂಡ್‌, ಪೆನಾಲ್ಟಿ ಶೂಟೌಟ್‌ನಲ್ಲಿ 4–2 ರಿಂದ ನೈಜೀರಿಯಾ ವಿರುದ್ಧ ಗೆದ್ದಿತು.

1995ರ ಬಳಿಕ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ನಾಕೌಟ್‌ ಪಂದ್ಯವನ್ನಾಡಿದ ಡೆನ್ಮಾರ್ಕ್‌ ತಂಡ, ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ಒಡ್ಡಲು ವಿಫಲವಾಯಿತು. ಕೈಟ್ಲಿನ್‌ ಫೂರ್ಡ್‌ ಅವರು 29ನೇ ನಿಮಿಷದಲ್ಲಿ ಆತಿಥೇಯರಿಗೆ ಮುನ್ನಡೆ ತಂದಿತ್ತರು. ಹೇಯ್ಲಿ ರಾಸೊ 70ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ತಂಡದ ಗೆಲುವು ಖಚಿತಪಡಿಸಿಕೊಂಡರು.

ತಂಡದ ನಾಯಕಿ ಸ್ಯಾಮ್‌ ಕೆರ್‌ ಅವರು ಗಾಯದಿಂದ ಚೇತರಿಸಿಕೊಂಡಿದ್ದು, ಕೊನೆಯ 10 ನಿಮಿಷಗಳು ಇದ್ದಾಗ ಆಡಲಿಳಿದರು. ಇದು ಕ್ವಾರ್ಟರ್‌ ಫೈನಲ್ ಪಂದ್ಯಕ್ಕೆ ಮುನ್ನ ಸಹಜವಾಗಿ ಆಸ್ಟ್ರೇಲಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಇನ್ನೊಂದು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ನೈಜೀರಿಯಾ ತಂಡ, ಇಂಗ್ಲೆಂಡ್‌ಗೆ ಅನಿರೀಕ್ಷಿತ ಪೈಪೋಟಿ ಒಡ್ಡಿತು. 120 ನಿಮಿಷಗಳ ಆಟದ ಬಳಿಕ ಯಾವುದೇ ಗೋಲುಗಳ ದಾಖಲಾಗದ ಕಾರಣ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಗೆದ್ದ ಇಂಗ್ಲೆಂಡ್‌ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿತು.

ಇಂಗ್ಲೆಂಡ್‌ನ ಲಾರೆನ್‌ ಜೇಮ್ಸ್‌ ಅವರು 87ನೇ ನಿಮಿಷದಲ್ಲಿ ರೆಡ್‌ ಕಾರ್ಡ್‌ ಪಡೆದು ಹೊರನಡೆದರು. ಹೆಚ್ಚುವರಿ ಅವಧಿಯ 30 ನಿಮಿಷಗಳಲ್ಲಿ ಇಂಗ್ಲೆಂಡ್‌ 10 ಆಟಗಾರ್ತಿಯರೊಂದಿಗೆ ಆಡಬೇಕಾಯಿತು. ಅದರ ಲಾಭ ತನ್ನದಾಗಿಸಿಕೊಳ್ಳುವಲ್ಲಿ ನೈಜೀರಿಯಾ ವಿಫಲವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT