ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಈಗ ನನ್ನದೇ ಊರು

Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಯ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಜನವರಿ ಮೊದಲ ವಾರದಲ್ಲೇ ಏಳು ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳುವ ಕೋಟಾವನ್ನು ಮುಗಿಸಿತ್ತು. ಆದರೆ ಕೊನೆಯ ವಾರದಲ್ಲಿ ಮ್ಯಾನ್ವುವೆಲ್ ಒನ್ವು ಅವರನ್ನು ಗುತ್ತಿಗೆ ಆಧಾರದಲ್ಲಿ ಒಡಿಶಾ ಎಫ್‌ಸಿಗೆ ನೀಡಿದ ಕ್ಲಬ್ ಸ್ಪೇನ್‌ನ ಫ್ರಾನ್ಸಿಸ್ಕೊ ಜೋಸ್ ಪೆರ್ಡೆಮೊ ಬೋರ್ಜಸ್ (ನೀಲಿ) ಅವರನ್ನು ಕರೆಸಿಕೊಂಡಿದೆ. ಜನವರಿ 30ರಂದು ಹೈದರಾಬಾದ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಕೊನೆಯ 26 ನಿಮಿಷ ಆಡುವ ಅವಕಾಶವನ್ನೂ ನೀಲಿಗೆ ನೀಡಿತು. ಭಾರತದಲ್ಲಿ ಲೀಗ್ ಒಂದರಲ್ಲಿ ಇದೇ ಮೊದಲು ಆಡುತ್ತಿರುವ ಅವರೊಂದಿಗೆ ‘ಪ್ರಜಾವಾಣಿ’ ಚುಟುಕು ಸಂದರ್ಶನ ನಡೆಸಿತು.

ಐಎಸ್‌ಎಲ್ ಆರನೇ ಆವೃತ್ತಿಯ ಕೊನೆಯ ಘಟ್ಟದಲ್ಲಿ ಬಿಎಫ್‌ಸಿ ಆಹ್ವಾನಿಸಿದ ತಕ್ಷಣ ಬರಲು ಕಾರಣ?

ಬಿಎಫ್‌ಸಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಈ ಕ್ಲಬ್‌ನಲ್ಲಿ ಆಡುವುದು ದೊಡ್ಡ ಗೌರವ. ಆದರೆ ಕ್ಲಬ್‌ನ ಆಹ್ವಾನ ಸ್ವೀಕರಿಸಲು ಮುಖ್ಯ ಕಾರಣ ಕೋಚ್ ಕಾರ್ಲಸ್ ಕ್ವದ್ರತ್. ಅವರ ಮಾರ್ಗದರ್ಶನದಲ್ಲಿ ಆಡಿದರೆ ವೃತ್ತಿಜೀವನಕ್ಕೆ ಭದ್ರತೆ ಸಿಕ್ಕಿದಂತೆ. ಆದ್ದರಿಂದ ಕರೆದ ತಕ್ಷಣ ಓಡಿ ಬಂದೆ.

ಐಎಸ್‌ಎಲ್‌ ಟೂರ್ನಿ ಬಗ್ಗೆ ನಿಮಗೆಷ್ಟು ಗೊತ್ತು? ಈ ಲೀಗ್‌ ಕುರಿತು ಮಾಹಿತಿ ಇದೆಯಾ?

ಐಎಸ್‌ಎಲ್ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನನ್ನೊಂದಿಗೆ ಈ ಹಿಂದೆ ಆಡಿದ್ದ ಅನೇಕ ಮಂದಿ ಈಗ ಐಎಸ್‌ಎಲ್‌ನಲ್ಲಿ ಆಡುತ್ತಿದ್ದಾರೆ. ಅವರೊಂದಿಗೆ ಮಾತನಾಡಿದಾಗಲೆಲ್ಲ ಟೂರ್ನಿಯ ಕುರಿತು ವಿವರಿಸುತ್ತಾರೆ.

ಬಿಎಫ್‌ಸಿ ಜೊತೆ ಮೊದಲ ಅನುಭವ ಹೇಗಿತ್ತು? ಕ್ಲಬ್ ವಾತಾವರಣ ಹೇಗಿದೆ?

ಕ್ಲಬ್‌ನವರು ಸ್ವಾಗತಿಸಿದ ರೀತಿ ನನ್ನನ್ನು ಒಂದು ಕ್ಷಣ ಭಾವುಕನನ್ನಾಗಿಸಿತು. ಮೊದಲ ದಿನದಿಂದಲೇ ಎಲ್ಲರಿಂದ ಉತ್ತಮ ಸಹಕಾರ ಸಿಗುತ್ತಿದೆ. ತಂಡಕ್ಕಾಗಿ ಗೋಲು ಗಳಿಸಲು ನನ್ನ ಮನ ಹಾತೊರೆಯುತ್ತಿದೆ. ಕ್ಲಬ್‌ನ ಎಲ್ಲ ಸದಸ್ಯರ ಒಳಿತಿಗಾಗಿ ಪ್ರಯತ್ನಿಸಲು ಸಿದ್ಧನಿದ್ದೇನೆ.

ಸುನಿಲ್ ಚೆಟ್ರಿ, ಎರಿಕ್ ಪಾರ್ಟಲು, ದಿಮಾಸ್ ಡೆಲ್ಗಾಡೊ, ರಾಫೆಲ್ ಆಗಸ್ಟೊ ಮುಂತಾದವರ ಜೊತೆ ಆಡುವುದರ ಬಗ್ಗೆ ಏನು ಹೇಳುವಿರಿ?

ಜಗತ್ತಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಸುನಿಲ್ ಚೆಟ್ರಿ ಅವರೊಂದಿಗೆ ಆಡಲು ಅವಕಾಶ ಲಭಿಸಿರುವುದು ಸುದೈವ. ತಂಡದ ಪ್ರತಿಯೊಬ್ಬರ ಬಗ್ಗೆಯೂ ವಿಶೇಷವಾಗಿ ಸ್ಪೇನ್‌ನ ಆಟಗಾರರ ಬಗ್ಗೆ ನನಗೆ ಅಪಾರ ಪ್ರೀತಿ–ಮಮತೆ ಇದೆ. ಈ ‘ಕುಟುಂಬ’ದಲ್ಲಿ ಖುಷಿಯಾಗಿ ಕಳೆಯಲು ಬಯಸುತ್ತೇನೆ.

ಬೆಂಗಳೂರು ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ...?

ಇಲ್ಲಿಗೆ ಬಂದು ಕೆಲವೇ ದಿನಗಳಾಗಿವೆ. ಆದರೆ ಅಷ್ಟರಲ್ಲೇ ನನ್ನ ಇಡೀ ಜೀವನವನ್ನು ಇಲ್ಲೇ ಕಳೆದಿದ್ದೆನೋ ಎಂದೆನಿಸುತ್ತಿದೆ. ಪತ್ನಿ ಮತ್ತು ಮಗಳ ಬರುವಿಕೆಗಾಗಿ ಕಾಯುತ್ತಿದ್ದೇನೆ. ಅವರು ಬಂದರೆ ಇನ್ನಷ್ಟು ಸಂತಸದಾಯಕವಾಗಿರುತ್ತದೆ. ಬೆಂಗಳೂರು ಈಗ ನನ್ನ ಊರೇ ಆಗಿದೆ ಎಂದೆನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT