ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವದ್ರತ್‌ಗೆ ವಿದಾಯ; ಮೂಸಾ ಹೆಗಲಿಗೆ ಬಿಎಫ್‌ಸಿ ಕೋಚ್ ಹೊಣೆ

Last Updated 6 ಜನವರಿ 2021, 16:11 IST
ಅಕ್ಷರ ಗಾತ್ರ

ಬೆಂಗಳೂರು: ಆಟಗಾರರ ನೀರಸ ಪ್ರದರ್ಶನ ಮತ್ತು ಸತತ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮುಖ್ಯ ಕೋಚ್‌, ಸ್ಪೇನ್‌ನ ಕಾರ್ಲಸ್ ಕ್ವದ್ರತ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದೆ. ಸಹಾಯಕ ಕೋಚ್ ನೌಶಾದ್ ಮೂಸಾ ಅವರ ಹೆಗಲಿಗೆ ತಾತ್ಕಾಲಿಕವಾಗಿ ಮುಖ್ಯ ಕೋಚ್ ಹೊಣೆಯನ್ನು ಹೊರಿಸಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ 2017ರಿಂದ ಆಡುತ್ತಿರುವ ಬಿಎಫ್‌ಸಿ ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದರೆ, ನಂತರದ ವರ್ಷ ಚಾಂಪಿಯನ್ ಆಗಿತ್ತು. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಈ ಬಾರಿ ಆರಂಭದಿಂದಲೇ ಕಳಪೆ ಆಟ ಆಡುತ್ತಿದ್ದು ಒಂಬತ್ತು ಪಂದ್ಯಗಳಲ್ಲಿ ತಲಾ ಮೂರು ಜಯ, ಮೂರು ಡ್ರಾ ಮತ್ತು ಮೂರು ಸೋಲು ಕಂಡಿದೆ. 12 ಗೋಲುಗಳನ್ನು ಮಾತ್ರ ಗಳಿಸಿರುವ ತಂಡ 12 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ 1–3ರಿಂದ ಸೋತಿದೆ. ಈ ಪಂದ್ಯದಲ್ಲಿ ಯಾವ ಆಟಗಾರನಿಗೂ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಿರಲಿಲ್ಲ. ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಸುಲಭವಾಗಿ ಗೋಲುಗಳನ್ನು ಬಿಟ್ಟುಕೊಟ್ಟು ಟೀಕೆಗೆ ಗುರಿಯಾಗಿದ್ದರು.

ಬುಧವಾರ ಸಂಜೆ ಟ್ವೀಟ್ ಮಾಡಿರುವ ತಂಡದ ಆಡಳಿತ, ಕ್ವದ್ರತ್ ಮತ್ತು ಬಿಎಫ್‌ಸಿ ಪರಸ್ಪರ ಮಾತುಕತೆಯ ಮೂಲಕ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

‘ಗೆಲುವೇ ತಂಡದ ಮೂಲಮಂತ್ರ. ಅದಕ್ಕೆ ಧಕ್ಕೆಯಾದಾಗ ಪರ್ಯಾಯ ದಾರಿ ಕಂಡುಕೊಳ್ಳಲೇಬೇಕು. ಕ್ವದ್ರತ್ ಮಾರ್ಗದರ್ಶನದಲ್ಲಿ ಈ ಹಿಂದೆ ತಂಡ ಉತ್ತಮ ಸಾಧನೆ ಮಾಡಿದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಆದ್ದರಿಂದ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿ ಬಂದಿದೆ. ತಂಡದ ಬೆಳವಣಿಗೆಯಲ್ಲಿ ಕ್ವದ್ರತ್ ಪಾತ್ರ ದೊಡ್ಡದು. ಅದನ್ನು ಎಂದಿಗೂ ಮರೆಯಲಾಗುವುದಿಲ್ಲ’ ಎಂದು ತಂಡವು ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಆಲ್ಬರ್ಟ್ ರೋಕಾ ಮುಖ್ಯ ಕೋಚ್ ಆಗಿದ್ದಾಗ ಸಹಾಯಕ ಕೋಚ್ ಆಗಿದ್ದ ಕ್ವದ್ರತ್ ಒಟ್ಟು ಐದು ವರ್ಷ ಬಿಎಫ್‌ಸಿ ಜೊತೆ ಕಳೆದಿದ್ದಾರೆ. ಮೂರು ವರ್ಷಗಳಿಂದ ಮುಖ್ಯ ಕೋಚ್ ಆಗಿದ್ದಾರೆ. ಅವರ ಗರಡಿಯಲ್ಲಿ ತಂಡ ಅಪೂರ್ವ ಸಾಧನೆ ಮಾಡಿದೆ. ಐಎಸ್‌ಎಲ್‌ನ ಐದನೇ ಆವೃತ್ತಿಯ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಲೀಗ್ ಚಾಂಪಿಯನ್ ಆಗಿದ್ದು ಟೂರ್ನಿಯ ಪ್ರಶಸ್ತಿ ಗೆದ್ದ ಮೊದಲ ಮತ್ತು ಏಕೈಕ ತಂಡ ಎಂಬ ಹೆಗ್ಗಳಿಕೆ ಅದರದು. ಸತತ ಜಯದ ದಾಖಲೆ (ಆರು ಪಂದ್ಯ) ಮಾಡಿರುವ ತಂಡ ಅಜೇಯ ಓಟದ (11 ಪಂದ್ಯ) ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಸತತ ಕ್ಲೀನ್ ಶೀಟ್‌ (11 ಪಂದ್ಯ) ಹೊಂದಿರುವ ತಂಡವೂ ಆಗಿದೆ ಬಿಎಫ್‌ಸಿ.

ಈ ವರ್ಷ ಮೊದಲ ಪಂದ್ಯದಲ್ಲಿ ಎಫ್‌ಸಿ ಗೋವಾ ಜೊತೆ ಪಾಯಿಂಟ್ ಹಂಚಿಕೊಂಡಿದ್ದ (2–2ರಲ್ಲಿ ಡ್ರಾ) ತಂಡ ಎರಡನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಜೊತೆ ಗೋಲುರಹಿತ ಡ್ರಾ ಮಾಡಿಕೊಂಡಿತ್ತು. ಮೂರನೇ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿತ್ತು. ನಾರ್ತ್ ಈಸ್ಟ್ ಯುನೈಟೆಡ್ ಜೊತೆ 2–2ರ ಡ್ರಾ ಮಾಡಿಕೊಂಡಿತ್ತು. ಕೇರಳ ಬ್ಲಾಸ್ಟರ್ಸ್ ಎದುರು ನೈಜ ಸಾಮರ್ಥ್ಯ ಮೆರೆದು 4–2ರಲ್ಲಿ ಗೆದ್ದಿತ್ತು. ನಂತರ ಒಡಿಶಾ ಎಫ್‌ಸಿ ಎದುರು 2–1ರ ಜಯದ ಹಾದಿಯಲ್ಲಿ ಮುನ್ನುಗ್ಗುವ ಲಕ್ಷಣ ತೋರಿತ್ತು. ಆದರೆ ಎಟಿಕೆ ಮೋಹನ್ ಬಾಗನ್ ಮತ್ತು ಜೆಮ್ಶೆಡ್‌ಪುರ್ ಎಫ್‌ಸಿ ವಿರುದ್ಧದ ಪಂದ್ಯಗಳಲ್ಲಿ ಗೋಲು ಗಳಿಸದೆ ಸೋತಿತ್ತು. ಹೊಸ ವರ್ಷದ ಮೊದಲ ಪಂದ್ಯದಲ್ಲಿ ಮುಂಬೈಗೆ ಮಣಿದಿತ್ತು.

ತಂಡದ ಸ್ಟಾರ್ ಆಟಗಾರ, ನಾಯಕ ಸುನಿಲ್ ಚೆಟ್ರಿ ಅವರಿಗೆ ಈ ಬಾರಿ ಇನ್ನೂ ಲಯ ಕಂಡುಕೊಳ್ಳಲು ಆಗಲಿಲ್ಲ. ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಗೋಲುಗಳನ್ನು ಗಳಿಸಲು ಮಾತ್ರ ಅವರಿಗೆ ಸಾಧ್ಯವಾಗಿದೆ. ಎರಡು ಬಾರಿ ಚಿನ್ನದ ಕೈಗವಸು ಪ್ರಶಸ್ತಿ ಗಳಿಸಿರುವ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಈಗಾಗಲೇ 12 ಗೋಲುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಖಾತೆಯಲ್ಲಿರುವ ಕ್ಲೀನ್ ಶೀಟ್‌ಗಳ ಸಂಖ್ಯೆ ಎರಡು ಮಾತ್ರ. ಅನುಭವಿ ಆಟಗಾರರು ನೈಜ ಸಾಮರ್ಥ್ಯ ತೋರಲು ವಿಫಲರಾಗಿದ್ದರೆ, ಹೊಸ ಆಟಗಾರರಿಗೆ ಮಿಂಚುವ ಅವಕಾಶ ಸಿಗಲೇ ಇಲ್ಲ.

‘ಅತ್ಯುತ್ತಮ ತಂಡಗಳಲ್ಲಿ ಒಂದಾದ ಬಿಎಫ್‌ಸಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ತಂಡವು ನನ್ನನ್ನು ತಮ್ಮವರಲ್ಲಿ ಒಬ್ಬನಾಗಿ ಕಂಡಿತ್ತು. ಇಲ್ಲಿ ಕಳೆದ ಪ್ರತಿಕ್ಷಣವೂ ಮಧುರವಾಗಿತ್ತು. ತವರು ಅಂಗಣವಾದ ಕಂಠೀರವದಲ್ಲಿ ಪಂದ್ಯಗಳು ನಡೆದಾಗ ಅನುಭವಿಸಿದ ಅನುಭೂತಿ ಅದ್ಭುತವಾಗಿತ್ತು. ಬಿಎಫ್‌ಸಿಗೆ ಶುಭವಾಗಲಿ’ ಎಂದು ಕ್ವದ್ರತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT