ಶುಕ್ರವಾರ, ಏಪ್ರಿಲ್ 23, 2021
31 °C
ಪ್ಲೇ ಆಫ್‌ಗಾಗಿ ಗೋವಾಗೆ ಜಯ ಅನಿವಾರ್ಯ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಒತ್ತಡದಲ್ಲಿ ಬೆಂಗಳೂರು ಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಆರಂಭದ ಕೆಲವು ‍ಪಂದ್ಯಗಳಲ್ಲಿ ನೀರಸ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಈಗ ಸಂಕಷ್ಟದಲ್ಲಿದ್ದು ಭಾನುವಾರದ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಹೆಚ್ಚಿನ ತಂಡಗಳಿಗೆ ಉಳಿದಿರುವುದು ಎರಡು ಪಂದ್ಯಗಳು ಮಾತ್ರ. ಬಿಎಫ್‌ಸಿ ಕೂಡ ಕೊನೆಯ ಎರಡು ಪಂದ್ಯಗಳಿಗೆ ಸಜ್ಜಾಗಿದೆ.

ಈ ಎರಡೂ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಆದರೆ ಪ್ಲೇ ಆಫ್ ಹಂತದ ಹಾದಿ ಸುಗಮವಾಗಬೇಕಾದರೆ ತಂಡ ಗೆದ್ದರೆ ಮಾತ್ರ ಸಾಲದು. ಇತರ ತಂಡಗಳು ಪಾಯಿಂಟ್‌ಗಳನ್ನು ಕಳೆದುಕೊಳ್ಳಬೇಕು. ಆದರೆ ತಂಡ ಒತ್ತಡದಲ್ಲಿ ಇಲ್ಲ ಎಂದು ಹಂಗಾಮಿ ಕೋಚ್ ನೌಶಾದ್ ಮೂಸಾ ಹೇಳಿದರು.

‘ಪ್ಲೇ ಆಫ್ ಹಂತದ ಬಗ್ಗೆ ಒತ್ತಡವಿಲ್ಲ. ಜಯ ಗಳಿಸಿದರೆ ತಂಡ ಪ್ಲೇ ಆಫ್ ಹಂತದ ಸನಿಹ ತಲುಪಲಿದೆ. ಆದರೂ ಕೇವಲ ಜಯವನ್ನಷ್ಟೇ ಗಳಿಸುವ ಹಪಾಹಪಿ ನಮಗಿಲ್ಲ. ಅಂಥ ಯೋಚನೆಯೊಂದಿಗೆ ಕಣಕ್ಕೆ ಇಳಿದರೆ ಕೆಲವೊಮ್ಮೆ ಯೋಜನೆಗಳು ಬುಡಮೇಲಾಗುವ ಸಾಧ್ಯತೆ ಇದೆ. ಆದ್ದರಿಂದ ತಾಳ್ಮೆಯಿಂದ ಆಡಿ ಉತ್ತಮ ಫುಟ್‌ಬಾಲ್‌ ಪ್ರದರ್ಶಿಸಲು ಪ್ರಯತ್ನಿಸಲಿದ್ದೇವೆ’ ಎಂದು ಮೂಸಾ ಹೇಳಿದರು.

ಗೋವಾ ಲೀಗ್‌ನಲ್ಲಿ ಈ ವರೆಗೆ ಅತ್ಯುತ್ತಮ ದಾಳಿ ನಡೆಸಿ ಗಮನ ಸೆಳೆದಿದೆ. ತಂಡ ಗಳಿಸಿರುವ 26 ಗೋಲುಗಳಲ್ಲಿ 16 ಗೋಲುಗಳು ದ್ವಿತೀಯಾರ್ಧದಲ್ಲಿ ದಾಖಲಾಗಿವೆ. ಕೊನೆಯ 15 ನಿಮಿಷಗಳಲ್ಲಿ ಗೋವಾ 10 ಗೋಲು ಗಳಿಸಿದೆ. ಸತತ ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ತಂಡ ಕಳೆದ ಪಂದ್ಯದಲ್ಲಿ ಒಡಿಶಾ ವಿರುದ್ಧ ಜಯ ಗಳಿಸುವ ಮೂಲಕ ಲಯ ಕಂಡುಕೊಂಡಿದೆ. ಅದೇ ರೀತಿ ಭಾನುವಾರವೂ ಆಡಲು ಗಮನಹರಿಸಲಿದೆ.

‌ಗೋವಾ ಸದ್ಯ ನಾರ್ತ್‌ ಈಸ್ಟ್ ಮತ್ತು ಹೈದರಾಬಾದ್ ಎಫ್‌ಸಿ ಜೊತೆ ಪಾಯಿಂಟ್‌ಗಳನ್ನು ಹಂಚಿಕೊಂಡು ನಾಲ್ಕನೇ ಸ್ಥಾನದಲ್ಲಿದೆ. ಭಾನುವಾರ ಜಯ ಗಳಿಸದೇ ಇದ್ದರೆ ತಂಡದ ಪ್ಲೇ ಆಫ್ ಆಸೆ ಕಮರಿ ಹೋಗಲಿದೆ. ಏಳು ಪಂದ್ಯಗಳಲ್ಲಿ ತಂಡ ಕ್ಲೀನ್‌ಶೀಟ್ ಸಾಧನೆ ಮಾಡುವಲ್ಲಿ ಗೋವಾ ವಿಫಲವಾಗಿದೆ. ಈ ದೌರ್ಬಲ್ಯದ ಲಾಭ ಪಡೆದುಕೊಳ್ಳುವ ಗುರಿಯೊಂದಿಗೆ ಬಿಎಫ್‌ಸಿ ಕಣಕ್ಕೆ ಇಳಿಯಲಿದೆ.

ಗೌರವಕ್ಕಾಗಿ ಕೇರಳ–ಚೆನ್ನೈಯಿನ್ ಸೆಣಸು‌‌

ಬ್ಯಾಂಬೊಲಿಮ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ. ಎರಡೂ ತಂಡಗಳು ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಆದ್ದರಿಂದ ಗೌರವ ಉಳಿಸಿಕೊಳ್ಳುವುದಕ್ಕಾಗಿ ಆಡಲಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಕೇರಳ ತಂಡ ಕೋಚ್ ಕುಬಿ ವಿಕುನಾ ಅವರೊಂದಿಗಿನ ಸಂಬಂಧ ಮುರಿದುಕೊಂಡಿದೆ. ಇಶ್ಫಾಕ್ ಅಹಮ್ಮದ್ ಹಂಗಾಮಿ ಕೋಚ್ ಆಗಿದ್ದಾರೆ. ಕೇರಳ ಕಳೆದ ಆರು ಪಂದ್ಯಗಳಲ್ಲಿ ಜಯ ಕಂಡಿಲ್ಲ. ಕೆಲವು ಪಂದ್ಯಗಳಲ್ಲಿ ರಕ್ಷಣಾ ವಿಭಾಗದ ದೌರ್ಬಲ್ಯವೇ ಸೋಲಿಗೆ ಕಾರಣವಾಗಿದೆ. ಜಯ ಗಳಿಸದ ಆ  ಆರು ಪಂದ್ಯಗಳಲ್ಲಿ 12 ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಚೆನ್ನೈಯಿನ್‌ಗೆ ಪ್ಲೇಆಫ್ ಹಂತಕ್ಕೇರುವ ಉತ್ತಮ ಅವಕಾಶವಿತ್ತು. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ಹಿಂದಿನ ಎಂಟು ಪಂದ್ಯಗಳಲ್ಲಿ ತಂಡ ಜಯ ಕಂಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು