ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಪುಣೆ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಆತಿಥೇಯರ ಎದುರು ಎಫ್‌ಸಿ ಪುಣೆ ಸಿಟಿ ಪೈಪೋಟಿ
Last Updated 29 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ಅಜೇಯ ಓಟದ ಮೂಲಕ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ತವರಿನಲ್ಲಿ ಮತ್ತೊಮ್ಮೆ ಗೆಲುವಿನ ಸೌಧ ಕಟ್ಟಲು ಸಜ್ಜಾಗಿದೆ.

ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಶುಕ್ರವಾರ ಬಿಎಫ್‌ಸಿಯನ್ನು ಎಫ್‌ಸಿ ಪುಣೆ ಸಿಟಿ ತಂಡ ಎದುರಿಸಲಿದೆ. ಐದನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಬಿಎಫ್‌ಸಿ ಆಡಿದ ಏಳು ಪಂದ್ಯಗಳನ್ನು ಗೆದ್ದು ಒಂದನ್ನು ಡ್ರಾ ಮಾಡಿದೆ. ಒಂಬತ್ತು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ಪುಣೆ ತಂಡ ಆತಿಥೇಯರ ನಾಗಾಲೋಟಕ್ಕೆ ಲಗಾಮು ಹಾಕುವುದೇ ಎಂಬ ಕುತೂಹಲ ಗರಿಗೆದರಿದೆ.

ಮೊದಲ ಏಳು ಪಂದ್ಯಗಳಲ್ಲಿ ಖಾತೆ ತೆರೆಯಲಾಗದ ಪುಣೆ ತಂಡ ಎಂಟನೇ ಪಂದ್ಯದಲ್ಲಿ ಜೆಮ್‌ಶೆಡ್‌ಪುರವನ್ನು ಮಣಿಸಿ ಲಯಕ್ಕೆ ಮರಳಿತ್ತು. ಆದರೆ ಎರಡು ದಿನಗಳ ಹಿಂದೆ ತವರಿನಲ್ಲಿ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ಗೆ (0–2) ಮಣಿದು ನಿರಾಸೆಗೆ ಒಳಗಾಗಿದೆ.

ಈ ಬೇಸರದಲ್ಲೇ ಬೆಂಗಳೂರಿಗೆ ಬಂದಿಳಿದಿರುವ ತಂಡ ಸುನಿಲ್ ಚೆಟ್ರಿ ಬಳಗದಿಂದ ಪ್ರಬಲ ಪೈಪೋಟಿ ಎದುರಿಸಬೇಕಾಗಿದೆ. ಮೂರು ದಿನಗಳ ಹಿಂದೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಡೈನಾಮೋಸ್ ಎದುರು ಬಿಎಫ್‌ಸಿ 1–0ಯಿಂದ ಗೆದ್ದಿತ್ತು. ಬಿಎಫ್‌ಸಿ ಪರ ಸುನಿಲ್ ಚೆಟ್ರಿಗೆ ಅದು 150ನೇ ಪಂದ್ಯ ಆಗಿತ್ತು. 87ನೇ ನಿಮಿಷದಲ್ಲಿ ಉದಾಂತ ಸಿಂಗ್ ಗೋಲು ಗಳಿಸಿ ನಾಯಕನಿಗೆ ಗೆಲುವಿನ ಉಡುಗೊರೆ ನೀಡಿದ್ದರು.

ಬಿಎಫ್‌ಸಿಯ ಪ್ರಮುಖ ಫಾರ್ವರ್ಡ್ ಆಟಗಾರ ಮಿಕು ಗಾಯಗೊಂಡು ಚಿಕಿತ್ಸೆಗಾಗಿ ತಾಯ್ನಾಡಿಗೆ (ಸ್ಪೇನ್‌) ಮರಳಿದ್ದಾರೆ. ಆದರೆ ಚೆಟ್ರಿಗೆ ಬೆಂಬಲವಾಗಿ ಶೆಂಬಯ್‌ ಹಾಕಿಪ್ ಇದ್ದಾರೆ. ಉದಾಂತ ಸಿಂಗ್‌, ದಿಮಾಸ್ ಡೆಲ್ಗಾಡೊ, ಎರಿಕ್ ಪಾರ್ಟಲು, ಹೆರ್ನಾಂಡಜ್‌ ಮುಂತಾದವರನ್ನು ಒಳಗೊಂಡ ಮಿಡ್‌ಫೀಲ್ಡ್‌ ವಿಭಾಗವೂ ಗೋಲು ಗಳಿಸಲು ಅನುಕೂಲಕರ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ನಿಶುಕುಮಾರ್, ರಾಹುಲ್ ಭೆಕೆ, ಆಲ್ಬರ್ಟ್ ಸೆರಾನ್‌, ಗುರುಸಿಮ್ರತ್ ಸಿಂಗ್ ಮುಂತಾದವರು ನಿರ್ಮಿಸುವ ಬಲಿಷ್ಠ ರಕ್ಷಣಾ ಗೋಡೆಯನ್ನು ಉರುಳಿಸುವುದು ಎಂಥ ತಂಡಕ್ಕೂ ಸವಾಲೇ ಸರಿ.

ಇಲ್ಲಿಯವರೆಗೆ ಒಟ್ಟು 19 ಗೋಲುಗಳನ್ನು ಬಿಟ್ಟುಕೊಟ್ಟಿರುವ ಪುಣೆ ಇಲ್ಲೂ ರಕ್ಷಣೆಯಲ್ಲಿ ವೈಫಲ್ಯ ಕಂಡರೆ ಚೆಟ್ರಿ ಬಳಗ ಮೇಲುಗೈ ಸಾಧಿಸುವುದು ಖಿಚತ. ಈ ಬಾರಿ ಕೇವಲ ಐದು ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿರುವ ಗುರುಪ್ರೀತ್‌ ಸಿಂಗ್‌ ಸಂಧು ಅವರನ್ನು ವಂಚಿಸಿ ಬಿಎಫ್‌ಸಿಯ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ನುಗ್ಗಿಸಲು ಪುಣೆ ತಂಡ ಭಾರಿ ಬೆವರು ಸುರಿಸಬೇಕಾದೀತು.

ಮಾರ್ಸೆಲಿನೊ, ಕಾರ್ಲೋಸ್‌ ಮಿಂಚಲು ವಿಫಲ: ಪುಣೆಯ ಪ್ರಮುಖ ಫಾರ್ವರ್ಡ್‌ ಆಟಗಾರರಾದ ಮಾರ್ಸೆಲಿನೊ ಪೆರೇರ ಮತ್ತು ಡೀಗೊ ಕಾರ್ಲೋಸ್‌ ಅವರಿಗೆ ಈ ವರೆಗೆ ನೈಜ ಸಾಮರ್ಥ್ಯ ತೋರಲು ಆಗಲಿಲ್ಲ. ಲೇನ್ ಹ್ಯೂಮ್‌ ಗಾಯದ ಸಮಸ್ಯೆಯಿಂದಾಗಿ ಮಿಂಚುತ್ತಿಲ್ಲ. ಆದ್ದ
ರಿಂದ ತಂಡ ನಿರೀಕ್ಷಿತ ಫಲ ಕಾಣಲಿಲ್ಲ. ಪಂದ್ಯ ಆರಂಭ: ಸಂಜೆ 7.30

*
ಮಿಕು ಇಲ್ಲದೇ ಇರುವುದು ಭಾರಿ ನಷ್ಟ. ಅವರ ಅನುಪಸ್ಥಿತಿಯಲ್ಲೂ ತಂಡ ಉತ್ತಮ ಉತ್ತಮ ಲಯದಲ್ಲಿ ಆಡುತ್ತಿರುವುದು ಸಮಾಧಾನದ ವಿಷಯ.
-ಕಾರ್ಲ್ಸ್‌ ಕ್ವದ್ರತ್‌, ಬಿಎಫ್‌ಸಿ ಕೋಚ್‌

*
ಸಮತೋಲನ ಕಾಪಾಡಿಕೊಳ್ಳಲು ಆಗದೇ ಇರುವುದು ತಂಡದ ಪ್ರಮುಖ ಸಮಸ್ಯೆ. ಈ ಸವಾಲನ್ನು ಮೆಟ್ಟಿ ನಿಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಈಗ ಒದಗಿದೆ.
-ಪ್ರದ್ಯುಮ್ನ ರೆಡ್ಡಿ, ಪುಣೆ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT