ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಗೆ ಮೊದಲ ಸೋಲು

ಐಎಸ್‌ಎಲ್‌ ಫುಟ್‌ಬಾಲ್‌: ತವರಿನ ಅಂಗಳದಲ್ಲಿ ಮುಂಬೈಗೆ ತಲೆಬಾಗಿದ ಸುನಿಲ್‌ ಚೆಟ್ರಿ ಬಳಗ
Last Updated 15 ಡಿಸೆಂಬರ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಾಟಕೀಯ ತಿರುವು‌ಗಳೊಂದಿಗೆ ಸಾಗಿದ ಪಂದ್ಯದಲ್ಲಿ ಕೊನೆಗೂ ಮುಂಬೈ ಸಿಟಿ ಎಫ್‌ಸಿ ತಂಡ ಗೆದ್ದೇ ಬಿಟ್ಟಿತು.

ಇದರೊಂದಿಗೆ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಅಜೇಯ ಓಟಕ್ಕೆ ಕಡಿವಾಣ ಬಿತ್ತು. ಈ ಸಲದ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಆತಿಥೇಯರ ಆಸೆಯೂ ಕಮರಿತು.

ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಪಾಲೊ ಮಚಾಡೊ ಸಾರಥ್ಯದ ಮುಂಬೈ ತಂಡ 3–2 ಗೋಲುಗಳಿಂದ ಜಯಿಸಿ ಪಟ್ಟಿಯಲ್ಲಿ ಎಂಟರಿಂದ ಆರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇದ್ದಾಗ ಚೆಂಡನ್ನು ಗುರಿ ಸೇರಿಸಿದ ಮಿಡ್‌ಫೀಲ್ಡರ್‌ ರೌಲಿನ್‌ ಬೋರ್ಗೆಸ್‌, ಮುಂಬೈ ತಂಡದ ಗೆಲುವಿನ ರೂವಾರಿಯಾದರು. ಕಾರ್ನರ್‌ನಿಂದ ನಾಯಕ ಮಚಾಡೊ ಒದ್ದ ಚೆಂಡನ್ನು ಬೋರ್ಗೆಸ್‌ ಗುರಿ ಮುಟ್ಟಿಸುತ್ತಿದ್ದಂತೆ ಮೈದಾನದಲ್ಲಿ ನೀರವ ಮೌನ ಆವರಿಸಿತು.

ಈ ಬಾರಿ ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿದ್ದ ಬಿಎಫ್‌ಸಿ ಈ ಪಂದ್ಯದಲ್ಲಿ ಮಂಕಾದಂತೆ ಕಂಡಿತು. ಈ ಪಂದ್ಯಕ್ಕೂ ಮುನ್ನ ಎದುರಾಳಿಗಳಿಗೆ ಕೇವಲ ಎರಡು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟಿದ್ದ ಬೆಂಗಳೂರಿನ ತಂಡ ತವರಿನ ಅಂಗಳದಲ್ಲೇ ಹಲವು ತಪ್ಪುಗಳನ್ನು ಮಾಡಿ
ಕೈಸುಟ್ಟುಕೊಂಡಿತು.

ಸುನಿಲ್‌ ಚೆಟ್ರಿ ಅವರು ಬಿಎಫ್‌ಸಿಯ ಬೆನ್ನೆಲುಬು ಎಂಬುದನ್ನು ಚೆನ್ನಾಗಿಯೇ ಅರಿತಿದ್ದ ಮುಂಬೈ ಆಟಗಾರರು ಪಂದ್ಯದುದ್ದಕ್ಕೂ ಚೆಟ್ರಿ ಬಳಿ ಚೆಂಡು ಸುಳಿಯದಂತೆ ಎಚ್ಚರವಹಿಸಿದರು. ಇದು ಪ್ರವಾಸಿ ತಂಡಕ್ಕೆ ವರವಾಯಿತು.

ಆರಂಭದಲ್ಲಿ ಮಿಂಚಿದ ಬಿಎಫ್‌ಸಿ ನಂತರ ಹಿಡಿತ ಸಡಿಲಿಸಿದಂತೆ ಕಂಡಿತು. ಆತಿಥೇಯರು 12ನೇ ನಿಮಿಷದಲ್ಲೇ ಮುಂಬೈ ತಂಡಕ್ಕೆ ಗೋಲು ಬಿಟ್ಟುಕೊಟ್ಟರು.

ಮೊಹಮ್ಮದ್‌ ಲಾರ್ಬಿ ಅವರು ಕಾರ್ನರ್‌ನಿಂದ ಒದ್ದ ಚೆಂಡನ್ನು ಬಿಎಫ್‌ಸಿ ಗೋಲುಪೆಟ್ಟಿಗೆಯ ಬಲ ಕಂಬದ ಸನಿಹ ನಿಂತಿದ್ದ ಸುಭಾಶಿಶ್‌ ಬೋಸ್‌ ತಲೆತಾಗಿಸಿ ಗುರಿ ಮುಟ್ಟಿಸಿದಾಗ ಬಿಎಫ್‌ಸಿ ಅಭಿಮಾನಿಗಳೇ ಹೆಚ್ಚಿದ್ದ ಕ್ರೀಡಾಂಗಣದಲ್ಲಿ ಅರೆಕ್ಷಣ ಮೌನ ಮನೆಮಾಡಿತು.

ನಂತರವೂ ಪ್ರವಾಸಿ ತಂಡ ಬಿಎಫ್‌ಸಿ ರಕ್ಷಣಾ ಕೋಟೆ ಮೇಲೆ ದಾಳಿ ನಡೆಸುತ್ತಲೇ ಸಾಗಿತು. ಆತಿಥೇಯ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರು ಗೋಡೆಯಂತೆ ನಿಂತು ಎದುರಾಳಿಗಳ ಬಹುತೇಕ ಪ್ರಯತ್ನ
ಗಳನ್ನು ವಿಫಲಗೊಳಿಸಿದರು.

ದ್ವಿತೀಯಾರ್ಧದ ಆರಂಭದಲ್ಲಿ (58ನೇ ನಿ.) ಮುಂಬೈ ತಂಡದ ಡಿಫೆಂಡರ್‌ ಮ್ಯಾಟೊ ಗ್ರಾಜಿಕ್‌ ಬಿಎಫ್‌ಸಿ ತಂಡದ ಖಾತೆಗೆ ಮೊದಲ ಗೋಲು ಸೇರ್ಪಡೆ ಮಾಡಿದರು! ಕಾರ್ನರ್‌ನಿಂದ ಸಹ ಆಟಗಾರ ಒದ್ದ ಚೆಂಡು ಮ್ಯಾಟೊ ಅವರ ಭುಜಕ್ಕೆ ತಾಗಿ ಅವರ ತಂಡದ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕಿತು. ಹೀಗಾಗಿ ಪಂದ್ಯ 1–1ಯಿಂದ ಸಮಬಲವಾಯಿತು.

ನಂತರ ಆಟ ಮತ್ತಷ್ಟು ಕಾವೇರಿತು. ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಡೀಗೊ ಕಾರ್ಲೊಸ್‌ 77ನೇ ನಿಮಿಷದಲ್ಲಿ ಗೋಲು ಹೊಡೆದು ಮುಂಬೈ ಪಾಳಯದಲ್ಲಿ ಮತ್ತೆ ಜಯದ ಆಸೆ ಚಿಗುರೊಡೆಯುವಂತೆ ಮಾಡಿದ್ದರು.

ಪಂದ್ಯ ಮುಗಿಯಲು ಒಂದೇ ನಿಮಿಷ ಬಾಕಿ ಇತ್ತು. ಈ ಹಂತದಲ್ಲಿ ಬಿಎಫ್‌ಸಿಗೆ ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಈ ಅವಕಾಶವನ್ನು ನಾಯಕ ಚೆಟ್ರಿ ಗೋಲಾಗಿ ಪರಿವರ್ತಿಸಿದಾಗ ಪಂದ್ಯಕ್ಕೆ ತಿರುವು ಲಭಿಸಿತೆಂದೇ ಭಾವಿಸಲಾಗಿತ್ತು. ಈ ಸಂಭ್ರಮ ಬಿಎಫ್‌ಸಿ ಪಾಳಯದಲ್ಲಿ ಹೆಚ್ಚು ಹೊತ್ತು ಉಳಿಯಲು ಬೋರ್ಗೆಸ್‌ ಬಿಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT