ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಕೌಟ್‌ ಭೀತಿಯಿಂದ ಪಾರಾಗುವುದೇ ಬ್ರೆಜಿಲ್‌

ಇಂದು ಬೆಲ್ಜಿಯಂ ಎದುರು ಕ್ವಾರ್ಟರ್‌ ಫೈನಲ್‌ ಹಣಾಹಣಿ: ನೇಮರ್‌, ರೊಮೆಲು ಲುಕಾಕು ಮೇಲೆ ಎಲ್ಲರ ಕಣ್ಣು
Last Updated 5 ಜುಲೈ 2018, 20:26 IST
ಅಕ್ಷರ ಗಾತ್ರ

ಕಜಾನ್‌, ರಷ್ಯಾ: ಐದು ಬಾರಿ ಟ್ರೋಫಿ ಗೆದ್ದಿರುವ ಬ್ರೆಜಿಲ್‌ ಮತ್ತು ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಬೆಲ್ಜಿಯಂ ತಂಡಗಳು 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ದಕ್ಷಿಣ ಅಮೆರಿಕ ಮತ್ತು ಯೂರೋಪ್‌ನ ಎರಡು ಬಲಿಷ್ಠ ತಂಡಗಳ ನಡುವಣ ಈ ಹಣಾಹಣಿಗೆ ಕಜಾನ್‌ ಅರೆನಾದಲ್ಲಿ ವೇದಿಕೆ ಸಿದ್ಧವಾಗಿದೆ.

ಕಳೆದ 16 ವರ್ಷಗಳಲ್ಲಿ ನಡೆದ ವಿಶ್ವಕಪ್‌ ನಾಕೌಟ್‌ ಪಂದ್ಯಗಳಲ್ಲಿ ಬ್ರೆಜಿಲ್‌ ಒಮ್ಮೆಯೂ ಯೂರೋಪ್‌ನ ತಂಡಗಳ ವಿರುದ್ಧ ಗೆದ್ದಿಲ್ಲ. 2006ರ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ಎದುರು ಸೋತಿದ್ದ ಈ ತಂಡ 2010ರ ಟೂರ್ನಿಯ ಎಂಟರ ಘಟ್ಟದ ಹಣಾಹಣಿಯಲ್ಲಿ ನೆದರ್‌ಲ್ಯಾಂಡ್ಸ್‌ಗೆ ಶರಣಾಗಿತ್ತು. 2010ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ 1–7 ಗೋಲುಗಳಿಂದ ಜರ್ಮನಿ ಎದುರು ಆಘಾತ ಕಂಡಿತ್ತು.‌

ಆದರೆ ಈ ಬಾರಿ ಬೆಲ್ಜಿಯಂ ತಂಡವನ್ನು ಮಣಿಸಿ ಹಿಂದಿನ ನಿರಾಸೆ ಮರೆಯಲು ಥಿಯಾಗೊ ಸಿಲ್ವ ಪಡೆ ಕಾಯುತ್ತಿದೆ. ವಿಶ್ವಕಪ್‌ನ ನಾಕೌಟ್‌ ಹಂತದ ಪಂದ್ಯಗಳಲ್ಲಿ ಬೆಲ್ಜಿಯಂ ತಂಡ ದಕ್ಷಿಣ ಅಮೆರಿಕದ ತಂಡಗಳ ವಿರುದ್ಧ ಒಮ್ಮೆಯೂ ಗೆದ್ದಿಲ್ಲ. 2014ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡ 0–1 ಗೋಲಿನಿಂದ ಅರ್ಜೆಂಟೀನಾ ಎದುರು ಪರಾಭವಗೊಂಡಿತ್ತು.

ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಸಿಲ್ವ ಪಡೆಗೆ ಪಂದ್ಯದ ಆರಂಭಕ್ಕೂ ಮುನ್ನವೇ ಹಿನ್ನಡೆ ಎದುರಾಗಿದೆ. ಪ್ರಮುಖ ಮಿಡ್‌ಫೀಲ್ಡರ್‌ ಕ್ಯಾಸೆಮಿರೊ ಈ ಪಂದ್ಯದಲ್ಲಿ ಆಡುತ್ತಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಎರಡು ಹಳದಿ ಕಾರ್ಡ್‌ ಪಡೆದಿರುವ ಕ್ಯಾಸೆಮಿರೊ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಅವರ ಬದಲಿಗೆ ಫರ್ನಾಂಡಿನ್ಹೊಗೆ ಆಡುವ ಬಳಗದಲ್ಲಿ ಅವಕಾಶ ಸಿಗಬಹುದು.

ನೇಮರ್‌ ಮತ್ತು ಫಿಲಿಪ್‌ ಕುಟಿನ್ಹೊ ಮುಂಚೂಣಿ ವಿಭಾಗದಲ್ಲಿ ಈ ತಂಡದ ಆಧಾರ ಸ್ಥಂಭಗಳಾಗಿದ್ದಾರೆ.

ವಿಶ್ವಾಸದಲ್ಲಿ ಬೆಲ್ಜಿಯಂ: ಈಡನ್‌ ಹಜಾರ್ಡ್‌ ಸಾರಥ್ಯದ ಬೆಲ್ಜಿಯಂ ಕೂಡಾ ಗೆಲುವಿನ ವಿಶ್ವಾಸದಲ್ಲಿದೆ. ಈ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳಲ್ಲೂ ಗೆದ್ದಿದೆ. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಜಪಾನ್‌ ಎದುರಿನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಹಜಾರ್ಡ್‌ ಬಳಗ 0–2ರ ಹಿನ್ನಡೆ ಕಂಡರೂ ನಂತರ ದಿಟ್ಟ ಆಟ ಆಡಿ 3–2ರಿಂದ ಗೆಲುವಿನ ತೋರಣ ಕಟ್ಟಿತ್ತು. ಈ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ನೆಸೆರ್‌ ಚಾಡ್ಲಿ, ಹೆಚ್ಚುವರಿ ಅವಧಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಕೆವಿನ್‌ ಡಿ ಬ್ರ್ಯೂನ್‌, ರೊಮೆಲು ಲುಕಾಕು, ಥಿಯಾಬುಟ್‌ ಕರ್ಟೊಯಿಸ್‌ ಮತ್ತು ಮರೌನ್‌ ಫೆಲಾನಿ ಅವರು ಈ ತಂಡದ ಶಕ್ತಿಯಾಗಿದ್ದಾರೆ. ಲುಕಾಕು ಈ ಬಾರಿಯ ಟೂರ್ನಿಯಲ್ಲಿ ನಾಲ್ಕು ಗೋಲು ದಾಖಲಿಸಿದ್ದಾರೆ.

*
ಬ್ರೆಜಿಲ್‌ ತಂಡ ಬಲಿಷ್ಠವಾಗಿದೆ. ಸಿಲ್ವ ಪಡೆಯನ್ನು ಮಣಿಸಲು ನಾವು ಸೂಕ್ತ ರಣನೀತಿ ಹೆಣೆದು ಆಡುತ್ತೇವೆ.
-ರಾಬರ್ಟೊ ಮಾರ್ಟಿನೆಜ್‌, ಬೆಲ್ಜಿಯಂ ತಂಡದ ಮುಖ್ಯ ಕೋಚ್‌

*
ಹಿಂದಿನ ಪಂದ್ಯಗಳಲ್ಲಿ ನಮ್ಮ ಆಟಗಾರರು ಪರಿಣಾಮಕಾರಿ ಸಾಮರ್ಥ್ಯ ತೋರಿದ್ದಾರೆ. ಬೆಲ್ಜಿಯಂ ಎದುರೂ ಮಿಂಚಲಿದ್ದಾರೆ.
–ಟಿಟೆ, ಬ್ರೆಜಿಲ್‌ ತಂಡದ ಮುಖ್ಯ ಕೋಚ್‌

*

****

ಪ್ರಮುಖ ಅಂಶಗಳು

*ಬ್ರೆಜಿಲ್‌ ತಂಡ ವಿಶ್ವಕಪ್‌ನಲ್ಲಿ ಸತತ ಏಳನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

*ಸಾಂಬಾ ನಾಡಿನ ತಂಡ ಎರಡು ಬಾರಿ ಎಂಟರ ಘಟ್ಟದಲ್ಲಿ ಎಡವಿದೆ. 2006ರಲ್ಲಿ ಫ್ರಾನ್ಸ್‌ ಎದುರೂ, 2010ರಲ್ಲಿ ನೆದರ್‌ಲ್ಯಾಂಡ್ಸ್‌ ವಿರುದ್ಧವೂ ಬ್ರೆಜಿಲ್‌ ಸೋತಿತ್ತು.

*ಬೆಲ್ಹಿಯಂ ಪರ ಆಡಿರುವ ಕಳೆದ 18 ಪಂದ್ಯಗಳಲ್ಲಿ ನಾಯಕ ಈಡನ್‌ ಹಜಾರ್ಡ್‌ 10 ಗೋಲು ದಾಖಲಿಸಿದ್ದಾರೆ.

*ಬ್ರೆಜಿಲ್‌ ತಂಡದ ನೇಮರ್‌ ಕಳೆದ 19 ಪಂದ್ಯಗಳಲ್ಲಿ 11 ಗೋಲುಗಳನ್ನು ಬಾರಿಸಿದ್ದಾರೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT