ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿ: ಲಿವರ್‌ಪೂಲ್‌ಗೆ ‘ರಿಯಲ್’ ಸವಾಲು

ಫೈನಲ್‌ನಲ್ಲಿ ಇಂಗ್ಲೆಂಡ್ ತಂಡಗಳ ಮುಖಾಮುಖಿ
Last Updated 5 ಮೇ 2022, 14:05 IST
ಅಕ್ಷರ ಗಾತ್ರ

ಪ್ಯಾರಿಸ್: ಸೆಮಿಫೈನಲ್‌ನ ಎರಡು ಲೆಗ್‌ಗಳಲ್ಲಿ ಸುಲಭ ಜಯ ಸಾಧಿಸಿರುವ ಲಿವರ್‌ಪೂಲ್ ತಂಡಕ್ಕೆ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ನೈಜ ಸವಾಲು ಎದುರಾಗಿದೆ. ಇದೇ ತಿಂಗಳ 28ರಂದು ನಡೆಯಲಿರುವ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ಎದುರು ಲಿವರ್ ಪೂಲ್ ಸೆಣಸಲಿದೆ.

ವಿಲ್ಲಾರಿಯಲ್ ಎದುರಿನ ಎರಡು ಲೆಗ್‌ಗಳ ಸೆಮಿಫೈನಲ್ ಪಂದ್ಯಗಳಲ್ಲಿ ಲಿವರ್‌ಪೂಲ್ 2–0 ಮತ್ತು 3–2ರಲ್ಲಿ ಜಯ ಗಳಿಸಿತ್ತು. ಮ್ಯಾಂಚೆಸ್ಟರ್ ಸಿಟಿ ಎದುರಿನ ಎರಡನೇ ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯದಲ್ಲಿ 3–4ರಿಂದ ಸೋತಿದ್ದ ರಿಯಲ್ ಮ್ಯಾಡ್ರಿಡ್ ಬುಧವಾರ ರಾತ್ರಿ ನಡೆದ ಎರಡನೇ ಲೆಗ್‌ ಮುಖಾಮುಖಿಯಲ್ಲಿ 3–1ರಲ್ಲಿ ಗೆದ್ದು ಒಟ್ಟಾರೆ 6–5 ಗೋಲುಗಳ ಬಲದಿಂದ ಫೈನಲ್ ಪ್ರವೇಶಿಸಿತು.

ಈ ಮೂಲಕ ಚಾಂಪಿಯನ್ಸ್ ಲೀಗ್‌ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಇಂಗ್ಲೆಂಡ್‌ ತಂಡಗಳು ಫೈನಲ್ ಪ್ರವೇಶಿಸಿದಂತಾಗಿದೆ.

ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್‌ ಪಂದ್ಯದ ಮೊದಲಾರ್ಧದಲ್ಲಿ ರಿಯಲ್ ಮ್ಯಾಡ್ರಿಡ್ 1–0 ಹಿನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಅಮೋಘ ಆಕ್ರಮಣಕಾರಿ ಆಟವಾಡಿದ ತಂಡ ಹೆಚ್ಚುವರಿ ಅವಧಿಯಲ್ಲಿ ಗೋಲುಗಳನ್ನು ಗಳಿಸಿ ಜಯದ ನಗೆ ಸೂಸಿತು.

ಮೊದಲ ಲೆಗ್‌ನಲ್ಲಿ ಒಂದು ಗೋಲು ಅಂತರದ ಜಯ ಗಳಿಸಿದ್ದ ಮ್ಯಾಂಚೆಸ್ಟರ್ ಸಿಟಿ 73ನೇ ನಿಮಿಷದಲ್ಲಿ ರಿಯಾಜ್ ಮಹರೆಜ್ ಗಳಿಸಿದ ಗೋಲಿನೊಂದಿಗೆ ಫೈನಲ್‌ ಪ್ರವೇಶದ ಹಾದಿಯಲ್ಲಿತ್ತು. ಆದರೆ 90 ಮತ್ತು 91ನೇ ನಿಮಿಷದಲ್ಲಿ ರಾಡ್ರಿಗೊ ಚೆಂಡನ್ನು ಗುರಿ ಮುಟ್ಟಿಸಿ ಪಂದ್ಯದ ಗತಿಯನ್ನು ಬದಲಿಸಿದರು. ನಿಗದಿತ ಅವಧಿ ಮುಕ್ತಾಯಗೊಂಡಾಗ ಎರಡೂ ತಂಡಗಳು ಒಟ್ಟಾರೆ ಗೋಲು ಗಳಿಕೆಯಲ್ಲಿ ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ ಅವಧಿಗೆ ಮೊರೆಹೋಗಲಾಯಿತು.

30 ನಿಮಿಷಗಳ ಆಟದ ಐದನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಬಿಟ್ಟುಕೊಟ್ಟು ಮ್ಯಾಂಚೆಸ್ಟರ್ ಸಿಟಿ ಕೈ ಸುಟ್ಟುಕೊಂಡಿತು. ಅವಕಾಶವನ್ನು ಸದುಪಯೋಗ ಮಾಡಿಕೊಂಡ ಕರೀಂ ಬೆನ್ಜೆಮಾ ಚೆಂಡನ್ನು ಗುರಿ ಮುಟ್ಟಿಸಿ ಜಯವನ್ನೂ ಗೋಲು ಗಳಿಕೆಯಲ್ಲಿ ಮುನ್ನಡೆಯನ್ನೂ ಗಳಿಸಿಕೊಟ್ಟರು.

ಪ್ರೀ ಕ್ವಾರ್ಟರ್ ಫೈನಲ್ ಪ‍ಂದ್ಯದಲ್ಲಿ 0–2ರ ಹಿನ್ನಡೆಯಿಂದ ಚೇತರಿಸಿಕೊಂಡು ಒಟ್ಟಾರೆ ಗೋಲು ಗಳಿಕೆಯಲ್ಲಿ 3–2ರ ಸಾಧನೆಯೊಂದಿಗೆ ಪ್ಯಾರಿಸ್ ಸೇಂಟ್ ಜರ್ಮನ್ ತಂಡವನ್ನು ಹೊರಗಟ್ಟಿ ರಿಯಲ್ ಮ್ಯಾಡ್ರಿಡ್ಅಂತಿಮ ಎಂಟರ ಘಟ್ಟ ಪ್ರವೇಶಿಸಿತ್ತು. ಎಂಟರ ಘಟ್ಟದ ಪಂದ್ಯದಲ್ಲೂ ಹೋರಾಡಿ ಚೆಲ್ಸಿ ವಿರುದ್ಧ ಜಯ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT