ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈಯಿನ್ ಎಫ್‌ಸಿಗೆ ಪ್ಲೇ ಆಫ್ ಮೇಲೆ ಕಣ್ಣು

ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ: ಜಯದ ಓಟ ಮುಂದುವರಿಸುವ ಹಂಬಲ
Last Updated 14 ಮೇ 2019, 19:54 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಜಯದ ನಾಗಾಲೋಟ ಮುಂದುವರಿಸುವ ಹಂಬಲದೊಂದಿಗೆ ಕಣಕ್ಕೆ ಇಳಿಯಲಿರುವ ಚೆನ್ನೈಯಿನ್ ಎಫ್‌ಸಿ ತಂಡ ಎಎಫ್‌ಸಿ ಕಪ್‌ ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯ ಮೇಲೆ ಕಣ್ಣಿಟ್ಟಿದೆ.

ಬಾಂಗಾಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ, ಸ್ಥಳೀಯ ಅಬಹಾನಿ ಢಾಕಾ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಚೆನ್ನೈಯಿನ್ ತಂಡ ತವರಿನಾಚೆ ಆಡಲಿರುವ ಮೊದಲ ಪಂದ್ಯ ಇದು. ’ಇ’ ಗುಂಪಿನ ಈ ಪಂದ್ಯದಲ್ಲಿ ಗೆದ್ದರೆ ಚೆನ್ನೈಯಿನ್ ಪಾಯಿಂಟ್ ಪಟ್ಟಿಯ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಇದು ತಂಡದ ಅಂತರ ವಲಯ ಪ್ಲೇ ಆಫ್ ಹಂತದ ಹಾದಿಯನ್ನು ಸುಲಭವಾಗಿಸಲಿದೆ.

ಹಿಂದಿನ ಮೂರು ಪಂದ್ಯಗಳ ಪೈಕಿ ಎರಡನ್ನು ಗೆದ್ದಿರುವ ಚೆನ್ನೈಯಿನ್‌ ಒಂದರಲ್ಲಿ ಡ್ರಾ ಸಾಧಿಸಿದೆ. ತಂಡದ ಬಗಲಲ್ಲಿ ಒಟ್ಟು ಏಳು ಪಾಯಿಂಟ್‌ಗಳಿವೆ. ನಾಲ್ಕು ಪಾಯಿಂಟ್ ಗಳಿಸಿರುವ ಅಬಹಾನಿ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿದೆ.

ಗುಂಪಿನಲ್ಲಿರುವ ಎಲ್ಲ ತಂಡಗಳ ತಲಾ ಮೂರು ಪಂದ್ಯಗಳನ್ನು ಆಡಿದ್ದು ಮೂರು ಪಾಯಿಂಟ್‌ ಗಳಿಸಿರುವ ಮಿನರ್ವಾ ಪಂಜಾಬ್ ಮೂರನೇ ಸ್ಥಾನದಲ್ಲಿದ್ದು ನೇಪಾಳದ ಮನಾಂಗ್‌ ಮರ್ಷ್ಯಾಂಗಡಿ ಕೊನೆಯಲ್ಲಿದೆ. ಅಗ್ರ ಎರಡು ಸ್ಥಾನಗಳನ್ನು ಗಳಿಸುವ ತಂಡಗಳು ಪ್ಲೇ ಆಫ್‌ ಹಂತಕ್ಕೆ ತಲುಪಲಿವೆ.

ಅಹಮದಾಬಾದ್‌ನಲ್ಲಿ ಏಪ್ರಿಲ್ 30ರಂದು ನಡೆದಿದ್ದ ಮೊದಲ ಲೆಗ್‌ನ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಅಬಹಾನಿಯನ್ನು ಏಕೈಕ ಗೋಲಿನಿಂದ ಮಣಿಸಿತ್ತು. ಹೀಗಾಗಿ ಇಲ್ಲಿಯೂ ಗೆದ್ದ ಎರಡಂಕಿಯ ಪಾಯಿಂಟ್ ಗಳಿಸಲು ತಂಡ ಪ್ರಯತ್ನಿಸಲಿದೆ.

ಡ್ರಾದೊಂದಿಗೆ ಆರಂಭ: ಜಾನ್ ಗ್ರೆಗರಿ ಗರಡಿಯಲ್ಲಿ ಪಳಗಿರುವ ಚೆನ್ನೈಯಿನ್ ಎಎಫ್‌ಸಿ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಿನರ್ವಾ ವಿರುದ್ಧ ಡ್ರಾ ಸಾಧಿಸಿತ್ತು. ನಂತರ ಮನಾಂಗ್‌ ಮತ್ತು ಅಬಹಾನಿಯನ್ನು ಮಣಿಸಿತ್ತು.

‘ಗೆಲುವಿನ ಓಟ ಮುಂದುವರಿಸಲು ಇಲ್ಲಿಗೆ ಬಂದಿದ್ದೇವೆ. ಗುಂಪು ಹಂತದಲ್ಲಿ ಅಜೇಯವಾಗಿ ಉಳಿಯುವುದು ತಂಡದ ಉದ್ದೇಶ. ಇದು ಅತ್ಯಂತ ಮಹತ್ವದ ಪಂದ್ಯ ಎಂಬುದು ಆಟಗಾರರಿಗೆ ಗೊತ್ತಿದೆ. ಆದ್ದರಿಂದ ಅವರು ಜವಾಬ್ದಾರಿಯಿಂದ ಆಡುವ ವಿಶ್ವಾಸವಿದೆ’ ಎಂದು ಜಾನ್ ಗ್ರೆಗರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT