ಮಂಗಳವಾರ, ಅಕ್ಟೋಬರ್ 26, 2021
21 °C
ಚೆಟ್ರಿ ಬಳಗ ಸತತ ಎರಡನೇ ಪಂದ್ಯದಲ್ಲೂ ವಿಫಲ

ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಲಂಕಾ ವಿರುದ್ಧ ಭಾರತಕ್ಕೆ ಗೋಲು ರಹಿತ ಡ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಾಲಿ: ಬಾಂಗ್ಲಾದೇಶ ಎದುರಿನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಭಾರತ ತಂಡ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲೂ ಡ್ರಾಗೆ ಮಣಿಯಿತು. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯ ಗೋಲುರಹಿತ ಸಮಬಲದಲ್ಲಿ ಮುಕ್ತಾಯಗೊಂಡಿತು.

ಫಿಫಾ ರ‍್ಯಾಂಕಿಂಗ್‌ನಲ್ಲಿ 205ನೇ ಸ್ಥಾನದಲ್ಲಿರುವ ಶ್ರೀಲಂಕಾ ಎದುರು 107ನೇ ಸ್ಥಾನದಲ್ಲಿರುವ ಭಾರತ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ಆದರೆ ಗೋಲು ಗಳಿಸಲಾಗದೆ ನಿರಾಸೆಗೆ ಒಳಗಾಯಿತು. ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ವಿಫಲವಾದ ಭಾರತ ಲಭಿಸಿದ ಅವಕಾಶಗಳಲ್ಲಿ ಗೋಲು ಗಳಿಸುವುದಕ್ಕೂ ವಿಫಲವಾಯಿತು. ಸತತ ಎರಡನೇ ಪಂದ್ಯದಲ್ಲಿ ತಂಡ ಜಯ ಗಳಿಸಲು ವಿಫಲವಾಯಿತು. ಬಾಂಗ್ಲಾದೇಶ ಎದುರಿನ ಪಂದ್ಯವನ್ನು ಭಾರತ 1–1ರಲ್ಲಿ ಡ್ರಾ ಮಾಡಿಕೊಂಡಿತು.

ಸುನಿಲ್ ಚೆಟ್ರಿ ನಾಯಕತ್ವದ ತಂಡ ಮುಂದಿನ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ತಂಡದ ಫೈನಲ್ ಪ್ರವೇಶದ ಆಸೆ ಕಮರಲಿದೆ.

ಕಳೆದ ಪಂದ್ಯದಲ್ಲಿ ಕಣಕ್ಕೆ ಇಳಿದ ತಂಡದಲ್ಲಿ ಗುರುವಾರ ಭಾರತ ಮೂರು ಬದಲಾವಣೆಗಳನ್ನು ಮಾಡಿತ್ತು. ಡಿಫೆನ್ಸ್‌ ವಿಭಾಗದಲ್ಲಿ ಪ್ರೀತಮ್ ಕೊತಾಲ್‌ ಮತ್ತು ಚಿಂಗ್ಲೆನ್ಸಾನ ಸಿಂಗ್ ಬದಲಿಗೆ ಸೆರಿಟಾನ್ ಫರ್ನಾಂಡಿಸ್ ಮತ್ತು ಮಂದಾರ್ ದೇಸಾಯಿ ಅವರಿಗೆ ಅವಕಾಶ ನೀಡಲಾಗಿತ್ತು. ಫಾರ್ವರ್ಡರ್ ಮನ್ವೀರ್ ಬದಲಿಗೆ ಸುರೇಶ್‌ ಸಿಂಗ್ ಅವರನ್ನು ಕರೆಸಿಕೊಳ್ಳಲಾಗಿತ್ತು.

22ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅತ್ಯಪೂರ್ವ ಅವಕಾಶ ಲಭಿಸಿತ್ತು. ಬಲಭಾಗದಿಂದ ಉದಾಂತ ಸಿಂಗ್ ನೀಡಿದ ಕ್ರಾಸ್‌ನಲ್ಲಿ ಲಿಸ್ಟನ್ ಕೊಲ್ಯಾಕೊ ಹೆಡರ್‌ ಮಾಡಿದ ಚೆಂಡು ಕ್ರಾಸ್ ಬಾರ್‌ಗೆ ಬಡಿದು ಹೊರಚಿಮ್ಮಿತು. ದ್ವಿತೀಯಾರ್ಧದಲ್ಲಿ ಸುರೇಶ್ ಬದಲಿಗೆ ಮೊಹಮ್ಮದ್ ಯಾಸಿರ್ ಅವರನ್ನು ಕಣಕ್ಕೆ ಇಳಿಸಿದರೂ ಫಲ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು