ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಬೆಂಗಳೂರಿಗೆ ಮಣಿದ ಚೆನ್ನೈಯಿನ್‌

ಎರಡು ಗೋಲು ಗಳಿಸಿದ ಉದಾಂತ ಸಿಂಗ್
Last Updated 26 ಜನವರಿ 2022, 16:47 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌, ಗೋವಾ: ಆಲ್‌ರೌಂಡ್ ಆಟದ ಮೂಲಕ ಚೆನ್ನೈಯಿನ್ ಎಫ್‌ಸಿ ತಂಡವನ್ನು ನಿಯಂತ್ರಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 3–0ಯಿಂದ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

ಗುರುಪ್ರೀತ್ ಸಿಂಗ್ ಸಂಧು ಬದಲಿಗೆ ಲಾರಾ ಶರ್ಮಾ ಅವರಿಗೆ ಗೋಲ್‌ಕೀಪಿಂಗ್ ಜವಾಬ್ದಾರಿ ವಹಿಸಿ ಕಣಕ್ಕೆ ಇಳಿದ ಬೆಂಗಳೂರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ನಾಲ್ಕನೇ ನಿಮಿಷದಲ್ಲಿ ಬ್ರೂನೊ ಸಿಲ್ವಾ ಮತ್ತು ಇಮಾನ್ ಬಸಾಫ ಜಂಟಿಯಾಗಿ ಪ್ರಬಲ ದಾಳಿ ನಡೆಸಿದರು. ಆದರೆ ಚೆನ್ನೈಯಿನ್ ತಂಡದ ದೇಬ್‌ಜಿತ್ ಮಜುಂದಾರ್ ಅವರು ಮೋಹಕ ‘ಸೇವ್’ ಮೂಲಕ ಮಿಂಚಿದರು.

12ನೇ ನಿಮಿಷದಲ್ಲಿ ಚೆನ್ನೈ ಆಟಗಾರ ಎಸಗಿದ ಪ್ರಮಾದವು ಬೆಂಗಳೂರು ತಂಡದ ಮುನ್ನಡೆಗೆ ಕಾರಣವಾಯಿತು. ಸುನಿಲ್ ಚೆಟ್ರಿ ಅವರನ್ನು ಕೆಳಗೆ ಬೀಳಿಸಿದ ಕಾರಣ ಚೆನ್ನೈಯಿನ್‌ಗೆ ಪೆನಾಲ್ಟಿ ವಿಧಿಸಲಾಯಿತು. ಇಮಾನ್ ಬಫಾಸ ಮಿಂಚಿನ ಶಾಟ್ ಮೂಲಕ ಗೋಲು ಗಳಿಸಿದರು.

ಸಮಬಲ ಸಾಧಿಸಲು ಪ್ರಯತ್ನಿಸಿದ ಚೆನ್ನೈಯಿನ್‌ಗೆ 23ನೇ ನಿಮಿಷದಲ್ಲಿ ಫ್ರೀಕಿಕ್ ಲಭಿಸಿತು. ಆದರೆ ಫಲ ಸಿಗಲಿಲ್ಲ. 42ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಮಾಡಿದ ಮ್ಯಾಜಿಕ್‌ನಲ್ಲಿ ಉದಾಂತ ಸಿಂಗ್ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಮಿಡ್‌ಫೀಲ್ಡರ್ ನೀಡಿದ ಚೆಂಡನ್ನು ಡ್ರಿಬಲ್ ಮಾಡುತ್ತ ಸಾಗಿದ ಚೆಟ್ರಿ ಗೋಲು ಆವರಣದಲ್ಲಿ ನಾಲ್ವರು ಡಿಫೆಂಡರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಸಾಗಿದರು. ಗೋಲು ಗಳಿಸಲು ಮುಂದಾಗುವಷ್ಟರಲ್ಲಿ ಡಿಫೆಂಡರ್‌ಗಳು ಮತ್ತೆ ಅವರನ್ನು ಸುತ್ತುವರಿದರು. ಅಷ್ಟರಲ್ಲಿ ಎಡಭಾಗದಲ್ಲಿದ್ದ ಉದಾಂತ ಕಡೆಗೆ ಚೆಟ್ರಿ ಚೆಂಡನ್ನು ತಳ್ಳಿದರು. ಉದಾಂತ ಸುಲಭ ಗೋಲು ಗಳಿಸಿದರು. 52ನೇ ನಿಮಿಷದಲ್ಲಿ ಉದಾಂತ ಮತ್ತೊಂದು ಗೋಲಿನೊಂದಿಗೆ ತಂಡದ ಮುನ್ನಡೆ ಹೆಚ್ಚಿಸಿದರು.

ಒಡಿಶಾಗೆ ಬಾರ್ತೊಲೊಮೆ ಆತಂಕ

ಹಿಂದಿನ ಪಂದ್ಯದಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್ ಎದುರು ಹ್ಯಾಟ್ರಿಕ್ ಗೋಲು ಗಳಿಸಿರುವ ಬಾರ್ತೊಲೊಮೆ ಒಗ್ಬೆಚೆ ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ಧಾರೆ. ಇದು, ಒಡಿಶಾ ಎಫ್‌ಸಿ ತಂಡದ ಆತಂಕಕ್ಕೆ ಕಾರಣವಾಗಿದೆ. ತಿಲಕ್‌ ಮೈದಾನದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಒಡಿಶಾ ಎಫ್‌ಸಿ, ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ.

ಈ ಬಾರಿ ಅತಿಹೆಚ್ಚು ಗೋಲು ಗಳಿಸಿರುವ ನೈಜೀರಿಯಾದ ಒಗ್ಬೆಚೆ (11 ಪಂದ್ಯಗಳಲ್ಲಿ 12 ಗೋಲು) ಹಿಂದಿನ ಪಂದ್ಯದಲ್ಲಿ ಚೆಂಡನ್ನು ಮೂರು ಬಾರಿ ಗುರಿ ಮುಟ್ಟಿಸಿದ್ದರು. ಅನಿಕೇತ್ ಜಾಧವ್ ಒಂದು ಗೋಲು ಗಳಿಸಿದ್ದರು. ಪಂದ್ಯದಲ್ಲಿ ತಂಡ ಒಂದು ಗೋಲು ಕೂಡ ಬಿಟ್ಟುಕೊಡದೆ ಜಯ ಗಳಿಸಿತ್ತು.

ಒಡಿಶಾ ಕೂಡ ಈ ಬಾರಿ ಉತ್ತಮ ಸಾಮರ್ಥ್ಯ ತೋರುತ್ತಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಒಂದು ಗೋಲು ಕೂಡ ಬಿಟ್ಟುಕೊಟ್ಟಿಲ್ಲ. ಎಟಿಕೆಎಂಬಿ ಎದುರಿನ ಹಿಂದಿನ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿದ್ದು ಅದಕ್ಕೂ ಮೊದಲು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 2–0ಯಿಂದ ಜಯ ಗಳಿಸಿತ್ತು.

ಇಂದಿನ ಪಂದ್ಯ

ಹೈದರಾಬಾದ್ ಎಫ್‌ಸಿ–ಒಡಿಶಾ ಎಫ್‌ಸಿ

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT