ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕ್ಲಬ್‌ ಫುಟ್‌ಬಾಲ್‌ನಲ್ಲಿ ರೊನಾಲ್ಡೊ ಗೋಲುಗಳ ‘ತ್ರಿಶತಕ’

Last Updated 16 ಮೇ 2021, 10:59 IST
ಅಕ್ಷರ ಗಾತ್ರ

ಈ ತಿಂಗಳ 13 ರಂದು (ಗುರುವಾರ) ನಡೆದ ಇಟಾಲಿಯನ್ ‘ಸೀರಿ ಎ’ ಟೂರ್ನಿಯ ಪಂದ್ಯ. ಯುವೆಂಟಸ್‌ ಮತ್ತು ಸಾಸುವಾಲೊ ಮುಖಾಮುಖಿ. 28ನೇ ನಿಮಿಷದಲ್ಲಿ ಅಡ್ರಿಯನ್ ರಾಬಿಯಾಟ್ ಗಳಿಸಿದ ಗೋಲಿನ ಬಲದಿಂದ 1–0 ಮುನ್ನಡೆಯಲ್ಲಿದ್ದ ಯುವೆಂಟಸ್‌ಗೆ 45ನೇ ನಿಮಿಷ ಕ್ರಿಸ್ಟಿಯಾನೊ ರೊನಾಲ್ಡೊ ಸುಲಭ ಗೋಲು ತುಂದುಕೊಟ್ಟು ಮುನ್ನಡೆ ಹೆಚ್ಚಿಸಿದರು. ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ನೋಡನೋಡುತ್ತಿದ್ದಂತೆಯೇ ಕಾಲ್ಚಳಕದ ಮೂಲಕ ಚೆಂಡನ್ನು ನಿಯಂತ್ರಿಸಿದ ರೊನಾಲ್ಡೊ ಅತಿ ಸುಲಭವಾಗಿ ಅದನ್ನು ಗುರಿ ಮುಟ್ಟಿಸಿದರು.

ಈ ಗೋಲು ಯುವೆಂಟಸ್‌ ತಂಡದ 3–1ರ ಗೆಲುವಿಗೆ ನೆರವಾಯಿತು. ಇದರೊಂದಿಗೆ ಅಂಗಣದಲ್ಲಿ ವಿಶಿಷ್ಟ ದಾಖಲೆಯೂ ಸೃಷ್ಟಿಯಾಯಿತು. ಅದು ಯುವೆಂಟಸ್‌ಗಾಗಿ ರೊನಾಲ್ಡೊ ಗಳಿಸಿದ 100ನೇ ಗೋಲಾಗಿತ್ತು. ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ ಮತ್ತು ಸ್ಪ್ಯಾನಿಷ್ ಕ್ಲಬ್ ರಿಯಲ್ ಮ್ಯಾಡ್ರಿಡ್‌ಗಾಗಿ ಈಗಾಗಲೇ 100 ಗೋಲು ಗಳಿಸಿರುವ ರೊನಾಲ್ಡೊ ಯುವೆಂಟಸ್‌ ಪರವೂ ‘ಶತಕ’ ಸಾಧಿಸಿ ಕ್ಲಬ್ ಫುಟ್‌ಬಾಲ್‌ನಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ರಾಷ್ಟ್ರೀಯ ತಂಡ ಪೋರ್ಚುಗಲ್ ಪರವಾಗಿಯೂ ಅವರು ಗೋಲು ಗಳಿಕೆಯಲ್ಲಿ ಮೂರಂಕಿ ದಾಟಿದ್ದಾರೆ.

ಪೋರ್ಚುಗಲ್ ಪರ 173 ಪಂದ್ಯಗಳಲ್ಲಿ ಅವರು 103 ಗೋಲು ಗಳಿಸಿದ್ದಾರೆ. ಕ್ಲಬ್‌ ಒಂದರ ಪರ ಅತಿ ಹೆಚ್ಚು ಪಂದ್ಯ ಆಡಿರುವುದು ಮತ್ತು ಹೆಚ್ಚು ಗೋಲು ಗಳಿಸಿರುವುದು ರಿಯಲ್ ಮ್ಯಾಡ್ರಿಡ್ ಪರ. ಆ ತಂಡದಲ್ಲಿ ಅವರು 438 ಪಂದ್ಯಗಳನ್ನು ಆಡಿದ್ದು ಗೋಲುಗಳ ಸಂಖ್ಯೆ 450ಕ್ಕೆ ಏರಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ 292 ಪಂದ್ಯಗಳಲ್ಲಿ 118 ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ. ಯುವೆಂಟಸ್ ಪರ 132 ಪಂದ್ಯ ಆಡಿದ್ದು 102 ಗೋಲು ಅವರ ಖಾತೆಯಲ್ಲಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸ್ವೀಡನ್‌ನ ಫ್ರೆಂಡ್ಸ್ ಅರೆನಾ ಕ್ರೀಡಾಂಗಣದಲ್ಲಿ ನಡೆದ ಯುಯೆಫಾ ನೇಷನ್ಸ್ (ಯುರೋಪ್‌ ರಾಷ್ಟ್ರಗಳ) ಲೀಗ್‌ನ ಸ್ವೀಡನ್ ಎದುರಿನ ಪಂದ್ಯದಲ್ಲಿ ಅವರು ರಾಷ್ಟ್ರೀಯ ತಂಡದ ಪರ 100ನೇ ಗೋಲು ಗಳಿಸಿದ್ದರು. ಈ ಮೂಲಕ ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಎರಡನೇ ಆಟಗಾರ ಎನಿಸಿದ್ದರು. ಇರಾನ್‌ನ ಮಾಜಿ ಆಟಗಾರ ಅಲಿ ದಯಿ 109 ಗೋಲುಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೊ 165ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಅಲಿ ದಯಿ 149 ಪಂದ್ಯಗಳಲ್ಲಿ 109 ಗೋಲು ದಾಖಲಿಸಿದ್ದರು.

ಚಾಂಪಿಯನ್ಸ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯೂ ರೊನಾಲ್ಡೊ ಹೆಸರಿನಲ್ಲಿದೆ. ಆ ಟೂರ್ನಿಯಲ್ಲಿ 134 ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಅವರು ಲಯೊನೆಲ್ ಮೆಸ್ಸಿಗಿಂತ 16 ಗೋಲುಗಳಿಂದ ಮುಂದಿದ್ದಾರೆ. 17 ವರ್ಷಗಳಿಂದ ಸತತವಾಗಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಗಳಿಸಿರುವುದು ಕೂಡ ರೊನಾಲ್ಡೊ ಸಾಧನೆಗಳ ಪಟ್ಟಿಯಲ್ಲಿ ಮಹತ್ವದ್ದು.

ಲೀಗ್‌ಗಳಲ್ಲಿ ರೊನಾಲ್ಡೊ ಹೆಸರಿನಲ್ಲಿ ಎರಡು ಶತಕಗಳು ಇವೆ. ಲಾಲಿಗಾ (311) ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ (134) ಮೂರಂಕಿ ದಾಟಿದ್ದರೆ ಪ್ರೀಮಿಯರ್ ಲೀಗ್ (84), ಸೀರಿ ’ಎ‘(81), ಕೋಪಾ ಡೆಲ್ ರೇ (22) ಮತ್ತು ಎಫ್‌ಎ ಕಪ್‌ನಲ್ಲಿ‌ (13) ಎರಡಂಕಿ ದಾಟಿದ್ದಾರೆ.

ಹೆಚ್ಚು ಗೋಲು: ಅನುಮಾನ, ಆಕ್ಷೇಪ

ಈ ವರ್ಷದ ಜನವರಿಯಲ್ಲಿ ನೆಪೋಲಿ ತಂಡದ ವಿರುದ್ಧ ನಡೆದ ಇಟಾಲಿಯನ್ ಸೂಪರ್ ಕಪ್ ಟೂರ್ನಿಯ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಗೋಲು ಯುವೆಂಟಸ್‌ಗೆ ಜಯ ಗಳಿಸಿಕೊಟ್ಟಿತ್ತು. ಆ ಪಂದ್ಯದಲ್ಲಿ ಅವರು ಗಳಿಸಿದ್ದು ವೃತ್ತಿಜೀವನದ 760ನೇ ಗೋಲಾಗಿತ್ತು. ಆ ಮೂಲಕ ಫುಟ್‌ಬಾಲ್‌ ಇತಿಹಾಸದಲ್ಲಿ ಗರಿಷ್ಠ ಗೋಲು ಗಳಿಸಿದ ಆಟಗಾರ ಎಂಬ ಶ್ರೇಯಸ್ಸು ಅವರ ಮುಡಿಗೇರಿತ್ತು. ಆದರೆ ಈ ‘ದಾಖಲೆ’ಯ ಮಾಹಿತಿ ಹೊರಬಿದ್ದು ಕೆಲವೇ ನಿಮಿಷಗಳಲ್ಲಿ ಆಕ್ಷೇಪ, ತಕರಾರು ಮತ್ತು ಚರ್ಚೆ ಆರಂಭವಾಗಿತ್ತು. ಫುಟ್‌ಬಾಲ್‌ನಲ್ಲಿ ಒಂದು ಸಾವಿರ ಗೋಲು ಗಳಿಸಿದ ಆಟಗಾರರೂ ಇದ್ದಾರೆ ಎಂಬ ವಾದ ಕೇಳಿಬಂದಿತ್ತು.

ಅತಿ ಹೆಚ್ಚು ಗೋಲು ಗಳಿಸಿದವರು ಎಂಬ ಖ್ಯಾತಿ ಅವರಿಗೆ ಸಲ್ಲುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಬ್ರೆಜಿಲ್‌ ಆಟಗಾರರಾದ ಪೆಲೆ ಮತ್ತು ರೊಮಾರಿಯೊ ಒಂದು ಸಾವಿರಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ ಎಂಬುದು ಹೀಗೆ ಹೇಳುವವರ ವಾದ.

ಸೌಹಾರ್ದ ಪಂದ್ಯಗಳೂ ಸೇರಿದಂತೆ ಕ್ಲಬ್‌ಗಾಗಿ ಪೆಲೆ 1091 ಗೋಲುಗಳನ್ನು ಗಳಿಸಿದ್ದಾರೆ ಎಂದುಸ್ಯಾಂಟೋಸ್ ಎಫ್‌ಸಿ ವಾದಿಸಿತ್ತು. ಬ್ರೆಜಿಲ್‌ಗಾಗಿ ಗಳಿಸಿದ 92 ಗೋಲು ಸೇರಿದಂತೆ 750ಕ್ಕೂ ಹೆಚ್ಚು ಗೋಲುಗಳನ್ನು ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ಪೆಲೆ ಗಳಿಸಿದ್ದಾರೆ ಎಂಬ ಲೆಕ್ಕ ಮುಂದಿಟ್ಟದ್ದೂ ಉಂಟು. ರೊಮಾರಿಯೊ ಇದಕ್ಕೂ ಹೆಚ್ಚು ಗೋಲು ಗಳಿಸಿದ್ದಾರೆ ಎಂಬ ತರ್ಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT