ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌ | 3ನೇ ಸ್ಥಾನಕ್ಕಾಗಿ ಎದುರು ಮೊರೊಕ್ಕೊ ಸೆಣಸಾಟ

Last Updated 17 ಡಿಸೆಂಬರ್ 2022, 1:38 IST
ಅಕ್ಷರ ಗಾತ್ರ

ದೋಹಾ: ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿರುವ ಆಫ್ರಿಕಾದ ಮೊದಲ ದೇಶ ಎನಿಸಿಕೊಂಡಿರುವ ಮೊರೊಕ್ಕೊ ಮತ್ತೊಂದು ‘ಗೌರವ’ಕ್ಕಾಗಿಶನಿವಾರ ಹೋರಾಡಲಿದೆ.

ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಸ್ಥಾನದ ಪ್ಲೇ ಆಫ್‌ ಹಣಾಹಣಿಯಲ್ಲಿ ಕ್ರೊವೇಷ್ಯಾ ತಂಡದ ಎದುರು ಮೊರೊಕ್ಕೊ ಸೆಣಸಲಿದೆ. ಇಲ್ಲಿ ಯಾವುದೇ ಫಲಿತಾಂಶ ಹೊರಹೊಮ್ಮಿದರೂ ಮೊರೊಕ್ಕೊ ಆಟಗಾರರಿಗೆ ತಮ್ಮ ದೇಶದಲ್ಲಿ ಭರ್ಜರಿ ಸ್ವಾಗತ ಸಿಗುವುದು ಖಚಿತ. ಹಾಗಾಗಿ ತಂಡ ಅತ್ಯಂತ ನಿರಾಳವಾಗಿ ಇಲ್ಲಿ ಕಣಕ್ಕಿಳಿಯಲಿದೆ.

ಸೆಮಿಫೈನಲ್‌ ಪಂದ್ಯಗಳಲ್ಲಿ ಮೊರೊಕ್ಕೊ ಮತ್ತು ಕ್ರೊವೇಷ್ಯಾ ಕ್ರಮವಾಗಿ ಫ್ರಾನ್ಸ್ ಹಾಗೂ ಅರ್ಜೆಂಟೀನಾ ಎದುರು ಸೋತಿದ್ದವು.

‘ಮಾನಸಿಕವಾಗಿ ಇದೊಂದು ಕಠಿಣ ಸವಾಲು. ಅವಕಾಶ ಸಿಗದ ಆಟಗಾರರನ್ನು ಪಂದ್ಯದಲ್ಲಿ ಆಡಿಸಲಾಗುವುದು. ನಾವು ಮೂರನೇ ಸ್ಥಾನ ಪಡೆಯುವ ವಿಶ್ವಾಸವಿದೆ‘ ಎಂದು ಮೊರೊಕ್ಕೊ ಕೋಚ್‌ ವಾಲಿದ್‌ ರೆಗ್ರಾಗ್‌ ಹೇಳಿದ್ದಾರೆ.

ದಿಗ್ಗಜ ಮಿಡ್‌ಫೀಲ್ಡರ್, ತಂಡದ ನಾಯಕ ಲೂಕಾ ಮಾಡ್ರಿಚ್‌ ಅವರಿಗೆ ‘ಗೌರವ‘ದ ಬೀಳ್ಕೊಡುಗೆ ನೀಡುವ ತವಕದಲ್ಲಿ ಕ್ರೊವೇಷ್ಯಾ ಆಟಗಾರರಿದ್ದಾರೆ. 37 ವರ್ಷದ ಆಟಗಾರನಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಆಗಿದೆ.

ಜಪಾನ್‌ ಮತ್ತು ಬ್ರೆಜಿಲ್‌ ತಂಡಗಳ ವಿರುದ್ಧ ಪೆನಾಲ್ಟಿ ಶೂಟೌಟ್‌ಗಳ ಮೂಲಕ ಗೆದ್ದು ಕ್ರೊವೇಷ್ಯಾ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿತ್ತು. ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

‘ವಾಸ್ತವವಾಗಿ, ನಾವು ಸೆಮಿಫೈನಲ್‌ ತಲುಪುತ್ತೇವೆ ಎಂಬ ವಿಶ್ವಾಸ ಟೂರ್ನಿ ಆರಂಭಕ್ಕೂ ಮೊದಲೇ ಇತ್ತು. ಆ ಬಳಿಕ ಟ್ರೋಫಿ ಕನಸು ಕಾಣಲಾರಂಭಿಸಿದೆವು. ಕಂಚಿನ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ‘ ಎಂದು ಕ್ರೊವೇಷ್ಯಾ ಮಿಡ್‌ಫೀಲ್ಡರ್‌ ಲೊವ್ರೊ ಮಜೆರ್ ಹೇಳಿದ್ದಾರೆ.

ಫೈನಲ್‌ಗೆ ಮಾರ್ಸಿನಿಯಾಕ್ ರೆಫರಿ

ದೋಹಾ (ರಾಯಿಟರ್ಸ್): ಪೋಲೆಂಡ್‌ನ ಸೈಮನ್‌ ಮಾರ್ಸಿನಿಯಾಕ್ ಅವರು ಭಾನುವಾರ ನಡೆಯಲಿರುವ ಟೂರ್ನಿಯ ಫೈನಲ್ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಪೋಲೆಂಡ್‌ ಫುಟ್‌ಬಾಲ್ ಸಂಸ್ಥೆ ಗುರುವಾರ ಈ ವಿಷಯ ತಿಳಿಸಿದೆ.

ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡಗಳ ನಡುವಣ ಈ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಮೊದಲ ಬಾರಿ ಪೋಲೆಂಡ್‌ ದೇಶದ ರೆಫರಿ ಕಾರ್ಯನಿರ್ವಹಿಸುವರು. ರಷ್ಯಾದಲ್ಲಿ ನಡೆದ 2018ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿ ಅವರು ರಫರಿಯಾಗಿದ್ದರು. ಪೋಲೆಂಡ್‌ನವರೇ ಆದ ‍ಪಾವೆಲ್‌ ಸೊಕೊಲ್ನಿಕಿ ಮತ್ತು ಥಾಮಸ್‌ ಲಿಸ್ಟಿವಿಚ್‌ ಅವರು ಮಾರ್ಸಿನಿಯಾಕ್ ಅವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುವರು.

ಕತಾರ್‌ನ ಅಬ್ದುಲ್‌ರಹಮಾನ್‌ ಅಲ್‌ ಜಾಸಿಮ್‌ ಅವರು ಕ್ರೊವೇಷ್ಯಾ–ಮೊರೊಕ್ಕೊ ನಡುವಣ ಮೂರನೇ ಸ್ಥಾನದ ಪ್ಲೇ ಆಫ್‌ನಲ್ಲಿ ರೆಫರಿಯಾಗುವರು. ಅವರದೇ ದೇಶದ ತಾಲೆಬ್ ಅಲ್ ಮ್ಯಾರಿ ಮತ್ತು ಸವೋದ್‌ ಅಹಮದ್‌ ಅಲ್ಮಾಕಲೆಹ್ ಅವರು ಸಹಾಯಕರಾಗಿ ಅಂಗಣಕ್ಕಿಯಲಿದ್ದಾರೆ.

ಪ್ರಮುಖ ಅಂಶಗಳು

* ಗುಂಪು(ಎಫ್‌) ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಉಭಯ ತಂಡಗಳ ನಡುವಣ ಪಂದ್ಯ ಗೋಲುರಹಿತ ಡ್ರಾ ಆಗಿತ್ತು.

* 2018ರ ರನ್ನರ್ಸ್ಅ‍ಪ್ ಕ್ರೊವೇಷ್ಯಾ ಎರಡನೇ ಬಾರಿ ‘ಮೂರನೇ ಸ್ಥಾನದ ಪ‍್ಲೇ ಆಫ್‌‘ ಪಂದ್ಯ ಆಡಲಿದೆ. ಈ ಮೊದಲು 1998ರಲ್ಲಿ ನಡೆದ ಹಣಾಹಣಿಯಲ್ಲಿ ಆ ತಂಡವು 2–1ರಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತ್ತು.

* ವಿಶ್ವಕಪ್ ಸೆಮಿಫೈನಲ್‌ ತಲುಪಿದ್ದ ಮೊದಲ ಆಫ್ರಿಕನ್‌– ಅರಬ್‌ ತಂಡ ಎನಿಸಿಕೊಂಡಿರುವ ಮೊರೊಕ್ಕೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT