ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದೊಂದಿಗೆ ತರಬೇತಿ: ಧೀರಜ್ ಸಿಂಗ್ ಸಂತಸ

Last Updated 18 ಮೇ 2021, 12:56 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಫುಟ್‌ಬಾಲ್ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದ್ದರಿಂದ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಯಿತು ಎಂದು ಯುವ ಗೋಲ್‌ಕೀಪರ್ ಧೀರಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಎಫ್‌ಸಿ ಗೋವಾ ಪರ ಆಡಿದ್ದ 20 ವರ್ಷದ ಧೀರಜ್ ಚಾಂಪಿಯನ್ಸ್ ಲೀಗ್‌ನಲ್ಲೂ ಗೋವಾ ತಂಡದಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು. ‘ಇ’ ಗುಂ‍‍ಪಿನಲ್ಲಿ ತಂಡ ಮೂರನೇ ಸ್ಥಾನ ಗಳಿಸಲು ಅವರ ‘ಕೈಚಳಕ’ ಕಾರಣವಾಗಿತ್ತು. ಚಾಂಪಿಯನ್ಸ್ ಲೀಗ್‌ನ ವಾರದ ತಂಡದಲ್ಲಿ ಎರಡು ಬಾರಿ ಅವರು ಕಾಣಿಸಿಕೊಂಡಿದ್ದರು.

‘ಐಎಸ್‌ಎಲ್ ಮುಗಿದ ತಕ್ಷಣ ರಾಷ್ಟ್ರೀಯ ತಂಡದೊಂದಿಗೆ ತರಬೇತಿಗೆ ಆಹ್ವಾನ ಬಂತು. ಇದರಿಂದಾಗಿ ಅನುಭವಿ ಆಟಗಾರರ ಜೊತೆ ಯುಎಇಗೆ ಪ್ರಯಾಣಿಸಲು ಅವಕಾಶ ಲಭಿಸಿತು. ಗುರುಪ್ರೀತ್ ಸಿಂಗ್‌, ಅಮರಿಂದರ್ ಸಿಂಗ್ ಮುಂತಾದವರ ಜೊತೆ ಅಭ್ಯಾಸ ಮಾಡಲು ಸಾಧ್ಯವಾದದ್ದು ನನ್ನ ಅದೃಷ್ಟವೆಂದೇ ಹೇಳಬೇಕು’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ‘ಎಐಎಫ್‌ಎಫ್ ಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘ರಾಷ್ಟ್ರೀಯ ತಂಡದೊಂದಿಗೆ ಅಂಗಣಕ್ಕೆ ಇಳಿದಾಗ ನನ್ನ ಆತ್ಮಸ್ಥೈರ್ಯ ಹೆಚ್ಚಾಯಿತು. ಕೋಚ್‌ ಮಾತು ಕೇಳಿ ಇನ್ನಷ್ಟು ಪುಳಕಿತನಾದೆ. ಅವರ ತರಬೇತಿ ವಿಧಾನವು ಹೆಗಲ ಮೇಲೆ ಇದ್ದ ಭಾರವನ್ನೆಲ್ಲ ಇಳಿಸಿತು. ಪಂದ್ಯಕ್ಕಾಗಿ ಕಣಕ್ಕೆ ಇಳಿದಾಗ ಬೇರೇನೂ ಯೋಚನೆ ಮಾಡಬಾರದು, ಸಹಜವಾದ ಆಟ ಆಡಲು ಮುಂದಾಗಬೇಕು ಎಂದು ಅವರು ಸೂಚಿಸಿದ್ದರು. ಆ ಮಾತುಗಳು ನನ್ನ ಗೋಲ್‌ಕೀಪಿಂಗ್‌ ಮೇಲೆ ಪೂರಕ ಪರಿಣಾಮ ಬೀರಿದವು’ ಎಂದು ಧೀರಜ್ ತಿಳಿಸಿದರು.

ಚಾಂಪಿಯನ್ಸ್ ಲೀಗ್‌ನ ಗುಂಪು ಹಂತಕ್ಕೆ ನೇರ ಪ್ರವೇಶ ಪಡೆದ ಭಾರತದ ಮೊದಲ ತಂಡ ಎಂಬ ಹೆಗ್ಗಳಿಕೆಯೊಂದಿಗೆ ಆಡಲು ಇಳಿದ ಎಫ್‌ಸಿ ಗೋವಾ ತಂಡ ಏಷ್ಯಾದ ಪ್ರಮುಖ ಕ್ಲಬ್‌ಗಳ ಎದುರು ಅಸಾಮಾನ್ಯ ಸಾಮರ್ಥ್ಯ ತೋರಿತ್ತು. ಯುಎಇಯ ಅಲ್ ವಾಹ್ದಾ ಎಫ್‌ಸಿ, ಕತಾರ್‌ನ ಅಲ್ ರಯಾನ್ ಎಸ್‌ಸಿ ಮತ್ತು ಕಳೆದ ಬಾರಿಯ ಚಾಂಪಿಯನ್ಸ್‌ ಲೀಗ್ ರನ್ನರ್ ಅಪ್ ಇರಾನ್‌ನ ಪರ್ಸೆಪೊಲಿಸ್ ಎಫ್‌ಸಿಯನ್ನು ಸಮರ್ಥವಾಗಿ ಎದುರಿಸಿತ್ತು.

ಧೀರಜ್ ಸಿಂಗ್ ಐದು ಪಂದ್ಯಗಳಲ್ಲಿ 19 ಬಾರಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಈ ಪೈಕಿ ಎರಡು ಕ್ಲೀನ್ ಶೀಟ್‌ಗಳು ಕೂಡ ಅವರ ಖಾತೆಗೆ ಸೇರಿವೆ. ಫ್ರಾನ್ಸ್‌ಗೆವಿಶ್ವಕಪ್ ಗಳಿಸಿಕೊಟ್ಟಿರುವ ಲಾರೆಂಟ್ ಬ್ಲಾಂಕ್‌ (ಅಲ್ ರಯಾನ್‌) ಒಳಗೊಂಡಂತೆ ಎದುರಾಳಿ ತಂಡಗಳ ಕೋಚ್‌ಗಳು ಧೀರಜ್ ಅವರನ್ನು ಪ್ರಶಂಸಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT