ಭಾನುವಾರ, ಜನವರಿ 24, 2021
17 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ

ಮೊದಲ ಜಯದ ನಿರೀಕ್ಷೆಯಲ್ಲಿ ಬೆಂಗಾಲ್–ಒಡಿಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಮೊದಲ ಜಯದ ನಿರೀಕ್ಷೆಯಲ್ಲಿರುವ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಒಡಿಶಾ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ನೈಜೀರಿಯಾ ಆಟಗಾರ ಬ್ರೈಟ್‌ ಎನೊಬಕರೆ ಅವರನ್ನು ಸೇರಿಸಿಕೊಂಡಿರುವ ಬೆಂಗಾಲ್‌ ತಂಡವು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.

ತಲಾ ಏಳು ಪಂದ್ಯಗಳನ್ನು ಆಡಿರುವ ಉಭಯ ತಂಡಗಳು ನೀರಸ ಸಾಮರ್ಥ್ಯ ತೋರಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ರಾಬಿ ಫಾವ್ಲರ್ ತರಬೇತಿಯಲ್ಲಿರುವ ಈಸ್ಟ್ ಬೆಂಗಾಲ್ ಮೇಲ್ನೋಟಕ್ಕೆ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆದರೂ ಆಕ್ರಮಣ ವಿಭಾಗದಲ್ಲಿನ ದೌರ್ಬಲ್ಯದಿಂದ ಆ ತಂಡ ಹೊರಬರಬೇಕಿದೆ.

ಯುವ ಪ್ರತಿಭೆ ಎನೊಬಕರೆ ಮೇಲೆ ಈಸ್ಟ್ ಬೆಂಗಾಲ್‌ ಭರವಸೆ ಇಟ್ಟುಕೊಂಡಿದೆ.

ಚೆನ್ನೈಯಿನ್ ಎಫ್‌ಸಿ ವಿರುದ್ಧ ಕಳೆದ ಪಂದ್ಯದಲ್ಲಿ ಬೆಂಗಾಲ್ ತಂಡದ ಮ್ಯಾಟ್ಟಿ ಸ್ಟೇನ್‌ಮನ್‌ ಎರಡು ಗೋಲು ದಾಖಲಿಸಿ ಮಿಂಚಿದ್ದರು. ಯುವ ಆಟಗಾರ ಜಾಕ್ಸ್ ಮಗೊಮಾ ಹಾಗೂ ಆ್ಯಂಟನಿ ಪಿಲ್ಕಿಂಗ್ಟನ್‌ ಅವರೂ ಚೆನ್ನಾಗಿ ಆಡುತ್ತಿದ್ದಾರೆ.

ಈಸ್ಟ್ ಬೆಂಗಾಲ್ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರೆ, ಒಡಿಶಾ 11ನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ ಒಡಿಶಾ ದಾಖಲಿಸಿರುವುದು ಕೇವಲ ಐದು ಗೋಲುಗಳನ್ನು. ಬೆಂಗಾಲ್‌ ಕೂಡ ಇಷ್ಟೇ ಗೋಲುಗಳನ್ನು ದಾಖಲಿಸಿದೆ.

ಪಂದ್ಯಗಳ ದ್ವಿತೀಯಾರ್ಧದ ಅವಧಿಯಲ್ಲಿ ಬೆಂಗಾಲ್‌ 10 ಗೋಲುಗಳನ್ನು ಎದುರಾಳಿಗಳಿಗೆ ನೀಡಿದೆ. ಒಡಿಶಾ ನೀಡಿದ ಗೋಲುಗಳ ಸಂಖ್ಯೆ 11.

ಕಳೆದ ಪಂದ್ಯದಲ್ಲಿ ಒಡಿಶಾ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿಯೊಂದಿಗೆ 2–2ರ ಡ್ರಾ ಸಾಧಿಸಿತ್ತು. ಉಭಯ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಬಹುದು.

ಮಡಗಾಂವ್‌ನಲ್ಲಿ ಸಂಜೆ 7.30ರಿಂದ ನಡೆಯುವ ಇನ್ನೊಂದು ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌– ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ಸೆಣಸಲಿವೆ.

ಪಂದ್ಯ ಆರಂಭ: ಸಂಜೆ 5 ಗಂಟೆ
ಸ್ಥಳ: ತಿಲಕ್‌ ಕ್ರೀಡಾಂಗಣ, ವಾಸ್ಕೊ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು