ಸ್ಟಾಕ್‌ಹೋಮ್: ಇಂಗ್ಲೆಂಡ್ ಸೇರಿದಂತೆ ಕೆಲವು ಪ್ರಮುಖ ಫುಟ್‌ಬಾಲ್ ತಂಡಗಳಿಗೆ ತರಬೇತುದಾರರಾಗಿದ್ದ ಸ್ವೀಡನ್‌ನ ಸ್ವೆನ್ ಗೊರಾನ್ ಎರಿಕ್ಸನ್ (76) ಅವರು ಸೋಮವಾರ ನಿಧನರಾದರು. ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಅವರ ಏಜಂಟ್ ತಿಳಿಸಿದ್ದಾರೆ.
ಇಂಗ್ಲೆಂಡ್ ತಂಡ ಅವರ ಮ್ಯಾನೇಜರ್ ಆಗಿದ್ದಾಗ 2002 ಮತ್ತು 2006ರ ವಿಶ್ವಕಪ್‌ನಲ್ಲಿ ಎಂಟರ ಘಟ್ಟ ತಲುಪಿತ್ತು. 2002ರ ಕ್ವಾರ್ಟರ್‌ಫೈನಲ್‌ನಲ್ಲಿ ಅದು ಬ್ರೆಜಿಲ್‌ಗೆ ಸೋತಿತ್ತು. 2004 ಯೂರೊ ಕಪ್‌ನಲ್ಲೂ ಇಂಗ್ಲೆಂಡ್ ಕ್ವಾರ್ಟರ್‌ಫೈನಲ್ ತಲುಪಿದ್ದು, ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್‌ಗೆ ಮಣಿದಿತ್ತು.
ಇಂಗ್ಲೆಂಡ್‌ಗೆ ತಂಡಕ್ಕೆ ಕೋಚ್ ಆದ ಮೊದಲ ವಿದೇಶಿಗ ಎಂಬ ಗೌರವ ಅವರದಾಗಿತ್ತು.
ಆರೋಗ್ಯ ಸಮಸ್ಯೆಯಿಂದ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು 2023ರ ಫೆಬ್ರವರಿಯಲ್ಲಿ ಪ್ರಕಟಿಸಿದ್ದರು.
ಮೆಕ್ಸಿಕೊ, ಐವರಿ ಕೋಸ್ಟ್ ಮತ್ತು ಫಿಲಿಪಿನ್ಸ್ ತಂಡಗಳನ್ನು ಅವರು ತರಬೇತುದಾರರಾಗಿದ್ದರು. ಆದರೆ ತಮ್ಮ ದೇಶದ ತಂಡಕ್ಕೆ ತರಬೇತಿ ನೀಡುವ ಅವಕಾಶ ಸಿಗಲಿಲ್ಲ.