ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್: ಡ್ರಾ ಪಂದ್ಯದಲ್ಲಿ ಹೈದರಾಬಾದ್‌–ಈಸ್ಟ್‌ ಬೆಂಗಾಲ್‌

ಫುಟ್‌ಬಾಲ್ ಟೂರ್ನಿ: ಇಂದು ಗೋವಾಗೆ ಒಡಿಶಾ ಸವಾಲು
Last Updated 23 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಜಿದ್ದಾಜಿದ್ದಿಯ ಹೋರಾಟ ಕಂಡು ಬಂದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಎಂಟನೇ ಆವೃತ್ತಿಯ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್‌ ಬೆಂಗಾಲ್‌ ತಂಡಗಳು 1–1ರ ಸಮಬಲ ಸಾಧಿಸಿದವು.

ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಹಣಾಹಣಿಯ 20ನೇ ನಿಮಿಷದಲ್ಲಿ ಅಮಿರ್ ಡೆರ್ವಿಶೆವಿಚ್‌ ಗೋಲು ಗಳಿಸಿ ಈಸ್ಟ್ ಬೆಂಗಾಲ್‌ಗೆ ಮುನ್ನಡೆ ಗಳಿಸಿಕೊಟ್ಟರು. ಹೀಗಾಗಿ ತಂಡಲ್ಲಿ ಮೊದಲ ಜಯದ ಆಸೆ ಚಿಗುರಿತ್ತು. ಆದರೆ 35ನೇ ನಿಮಿಷದಲ್ಲಿ ಹೈದರಾಬಾದ್ ತಿರುಗೇಟು ನೀಡಿತು. ಬಾರ್ತೊಲೊಮೆ ಒಗ್ಬೆಚೆ ಗೋಲು ತಂದುಕೊಟ್ಟರು.

7 ಪಂದ್ಯಗಳಲ್ಲಿ ತಲಾ 3 ಜಯ ಮತ್ತು 3 ಡ್ರಾದೊಂದಿಗೆ ಹೈದರಾಬಾದ್ ತಂಡ ಪಾಯಿಂಟ್ ಪಟ್ಟಿಯ 2ನೇ ಸ್ಥಾನಕ್ಕೇರಿತು. ಈಸ್ಟ್ ಬೆಂಗಾಲ್ ತಲಾ 4 ಡ್ರಾ ಮತ್ತು 4 ಸೋಲಿನೊಂದಿಗೆ ಕೊನೆಯ ಸ್ಥಾನದಲ್ಲಿದೆ. 5 ಜಯ ಮತ್ತು 2 ಸೋಲಿನೊಂದಿಗೆ ಮುಂಬೈ ಅಗ್ರ ಸ್ಥಾನದಲ್ಲಿದೆ.

ವಾಸ್ಕೊದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಗೋವಾವನ್ನು ಒಡಿಶಾ ಎಫ್‌ಸಿ ಎದುರಿಸಲಿದೆ. ಹೊಸ ಕೋಚ್ ಡೆರಿಕ್ ಪೆರೇರಾ ಅವರ ಮಾರ್ಗದರ್ಶನದಲ್ಲಿ ಗೋವಾಗೆ ಇದು ಮೊದಲ ಪಂದ್ಯವಾಗಿದ್ದು ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.

ನೀರಸ ಪ್ರದರ್ಶನದ ಕಾರಣ ಕೋಚ್ ಯುವಾನ್ ಫೆರಾಂಡೊ ಅವರನ್ನು ಎಫ್‌ಸಿ ಗೋವಾ ವಜಾ ಮಾಡಿತ್ತು. ಎರಡು ದಿನಗಳ ಹಿಂದೆಯಷ್ಟೇ ಡೆರಿಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕೆಲವು ವರ್ಷಗಳಿಂದ ತಂಡದೊಂದಿಗೆ ತಾಂತ್ರಿಕ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಯಲ್ಲಿದ್ದ ಡೆರಿಕ್ ಕೋಚ್ ಆಗಿ ಯಶಸ್ಸು ಗಳಿಸುವರೇ ಎಂಬ ಕುತೂಹಲವೂ ಫುಟ್‌ಬಾಲ್ ಪ್ರೇಮಿಗಳಲ್ಲಿ ಮೂಡಿದೆ.

ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದ ಗೋವಾ ಆಡಿರುವ ಆರು ಪಂದ್ಯಗಳಿಂದ ಏಳು ಪಾಯಿಂಟ್ ಕಲೆ ಹಾಕಿರುವ ಗೋವಾ ಹಿಂದಿನ ಮೂರು ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಈ ಪೈಕಿ ಎರಡರಲ್ಲಿ ಜಯ ಸಾಧಿಸಿದೆ.

ಎಂಟನೇ ಆವೃತ್ತಿಯಲ್ಲಿ ಅತ್ಯುತ್ತಮ ಆರಂಭ ಕಂಡಿದ್ದ ಒಡಿಶಾ ನಂತರ ಸ್ವಲ್ಪ ಹಿನ್ನಡೆ ಅನುಭವಿಸಿದೆ. ಆದ್ದರಿಂದ ಮತ್ತೆ ಲಯಕ್ಕೆ ಮರಳುವುದು ತಂಡದ ಉದ್ದೇಶ. ಕಳೆದ ಎರಡು ಪಂದ್ಯಗಳಲ್ಲಿ ಸೋತಿರುವ ತಂಡ ಸೋಲಿನ ‘ಹ್ಯಾಟ್ರಿಕ್‌’ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿದೆ. ಆರು ಪಂದ್ಯಗಳಿಂದ 12 ಗೋಲು ಗಳಿಸಿದ್ದರೂ ತಂಡದಲ್ಲಿ ಸ್ಥಿರತೆಯ ಕೊರತೆ ಇದೆ. ಜೇವಿಯರ್ ಹೆರ್ನಾಂಡಜ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ನಾಲ್ಕು ಗೋಲು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT