ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೊವೇಷ್ಯಾ ಈಗ ಕಪ್ಪುಕುದುರೆ ಅಲ್ಲ

ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ತಂಡ; ಇಂಗ್ಲೆಂಡ್‌ ಕನಸು ಭಗ್ನ
Last Updated 12 ಜುಲೈ 2018, 19:06 IST
ಅಕ್ಷರ ಗಾತ್ರ

ಮಾಸ್ಕೊ: ಬರೋಬ್ಬರಿ ಒಂದು ತಿಂಗಳ ಹಿಂದಿನ ಮಾತು. ಈ ಬಾರಿಯ ಫಿಫಾ ವಿಶ್ವಕಪ್ ಗೆಲ್ಲುವ ತಂಡಗಳ ಬಗ್ಗೆ ಮಾತನಾಡಿದ್ದ ಬಹುತೇಕರು ಅಪ್ಪಿತಪ್ಪಿಯೂ ಕ್ರೊವೇಷ್ಯಾ ತಂಡದ ಹೆಸರು ಹೇಳಿರಲಿಲ್ಲ.

ಅರ್ಜೆಂಟೀನಾ, ಬ್ರೆಜಿಲ್, ಜರ್ಮನಿ, ಸ್ಪೇನ್‌ನಂತಹ ಹಳೆಯ ಹುಲಿಗಳ ಹೆಸರು ಹೇಳಿದ್ದವರೇ ಹೆಚ್ಚು. ಆದರೆ, ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ಲೂಕಾ ಮಾಡ್ರಿಚ್ ನಾಯಕತ್ವದ ಕ್ರೊವೇಷ್ಯಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ. ತಾನು ‘ಕಪ್ಪುಕುದುರೆ’ ಅಲ್ಲ, ‘ವಿಜಯದ ಅಶ್ವ’ ಎಂದು ಸಾರಿ ಹೇಳುತ್ತಿದೆ. ಇದೇ ಭಾನುವಾರ ನಡೆಯುವ ಫೈನಲ್‌ನಲ್ಲಿ ಫ್ರಾನ್ಸ್‌ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ.

ಬುಧವಾರ ಮಧ್ಯರಾತ್ರಿ ನಡೆದಿದ್ದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕ್ರೊವೇಷ್ಯಾ ತಂಡವು 2–1 ಗೋಲುಗಳಿಂದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿತು. ತಂಡದ ಇವಾನ್‌ ಪೆರಿಸಿಚ್ (68ನೇ ನಿಮಿಷ) ಮತ್ತು ಮೆರಿಯೊ ಮ್ಯಾಂಜುಕಿಚ್ (109ನೇ ನಿಮಿಷ) ವಿಜಯದ ರೂವಾರಿಗಳಾದರು. ಇಂಗ್ಲೆಂಡ್‌ ತಂಡದ ಕೀರನ್‌ ಟ್ರಿಪ್ಪಿಯರ್ (5ನೇ ನಿಮಿಷ) ಅವರು ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ನಂತರದ ಅವಧಿಯಲ್ಲಿ ಛಲದ ಆಟವಾಡಿದ ಲೂಕಾ ಪಡೆಯ ಮುಂದೆ ಇಂಗ್ಲೆಂಡ್‌ ರಕ್ಷಣಾ ಗೋಡೆ ಕುಸಿಯಿತು. ಆದರೂ ಪೂರ್ಣ ಅವಧಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದ್ದವು.

ಹೆಚ್ಚುವರಿ ಅವಧಿಯಲ್ಲಿ ಮೆರಿಯೊ ಮಾಡಿದ ಕಾಲ್ಚಳಕಕ್ಕೆ ಇಂಗ್ಲೆಂಡ್ ಗೋಲ್‌ ಕೀಪರ್ ಗೆರಾಲ್ಡ್‌ ಪಿಕ್‌ಪೋರ್ಡ್ ಏಮಾರಿದರು. ಕ್ರೊವೇಷ್ಯಾ ಬಳಗದಲ್ಲಿ ಸಂಭ್ರಮ ಪುಟಿದೆದ್ದರೆ. ಇಂಗ್ಲೆಂಡ್‌ ಅಭಿಮಾನಿಗಳು ನಿರಾಶೆಯ ಕಣ್ಣೀರಲ್ಲಿ ಮುಳುಗಿದರು.

ಕ್ರೊವೇಷ್ಯಾಗೆ ಮೊದಲ ಫೈನಲ್‌: 1998ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಅಂಗಳಕ್ಕೆ ಕಾಲಿಟ್ಟಿದ್ದ ತಂಡವು ಮೂರನೇ ಸ್ಥಾನ ಪಡೆದಿತ್ತು. ಅದರ ನಂತರ ಅಂತಹ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿರಲಿಲ್ಲ. ಆದರೆ ಈ ಬಾರಿ ರಷ್ಯಾದ ಅಂಗಳದಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿದೆ. ಗುಂಪು ಮತ್ತು ನಾಕೌಟ್ ಹಂತಗಳಲ್ಲಿ ಅರ್ಜೆಂಟೀನಾ, ಡೆನ್ಮಾರ್ಕ್, ಆತಿಥೇಯ ರಷ್ಯಾ ತಂಡಗಳನ್ನು ಮಣಿಸಿತ್ತು. ಪಂದ್ಯದಿಂದ ಪಂದ್ಯಕ್ಕೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ತಂಡವು ಈಗ ಪ್ರಶಸ್ತಿಗೆ ಒಂದು ಹೆಜ್ಜೆ ದೂರದಲ್ಲಿದೆ.

ಇಪ್ಪತ್ತು ವರ್ಷಗಳ ಹಿಂದೆ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್‌ ತಂಡದಲ್ಲಿ ಈಗ ಪ್ರತಿಭಾವಂತ ಯುವಪಡೆ ಇದೆ. ಅದನ್ನು ಎದುರಿಸುವತ್ತ ಲೂಕಾ ಬಳಗವು ಚಿತ್ತ ನೆಟ್ಟಿದೆ. ಫುಟ್‌ಬಾಲ್ ಜಗತ್ತಿನ ಹೊಸ ಶಕ್ತಿಯಾಗಿ ಉದಯಿಸುವ ಕನಸು ಕಾಣುತ್ತಿದೆ.

ಸಂಸತ್ತಿನಲ್ಲಿ ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಜೆರ್ಸಿ

ಕ್ರೊವೇಷ್ಯಾ ತಂಡ ಸೆಮಿಫೈನಲ್‌ ತಲುಪಿರುವುದರಿಂದ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಕ್ರೊವೇಷ್ಯಾದ ಸಂಸತ್ತಿನಲ್ಲೂ ಇದು ಪ್ರತಿಫಲನಗೊಂಡಿತ್ತು. ಸಂಸದರು ಗುರುವಾರ ರಾಷ್ಟ್ರದ ಫುಟ್‌ಬಾಲ್ ತಂಡದ ಜೆರ್ಸಿಯನ್ನು ಹೋಲುವ ಪೋಷಾಕು ತೊಟ್ಟು ಬಂದಿದ್ದರು. ‘ಮಾಸ್ಕೊದಲ್ಲಿ ಬುಧವಾರ ಅದ್ಭುತ ನಡೆಯಿತು. ನಮ್ಮ ತಂಡದ ಜಯದಿಂದಾಗಿ ವಿಶ್ವ ಮಟ್ಟದಲ್ಲಿ ದೇಶದ ಖ್ಯಾತಿ ಹೆಚ್ಚಿದೆ. ವಿಶಾಲ ಹೃದಯದ ಜನರಿರುವ ಸಣ್ಣ ರಾಷ್ಟ್ರಕ್ಕೆ ಸಿಕ್ಕಿದ ದೊಡ್ಡ ಯಶಸ್ಸು ಇದಾಗಿದೆ’ ಎಂದು ಪ್ರಧಾನಿ ಆ್ಯಂಡ್ರೆಜ್ ಪ್ಲೆಂಕೊವಿಚ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT