ಮಂಗಳವಾರ, ಫೆಬ್ರವರಿ 7, 2023
27 °C
ಸ್ಪೇನ್ ಎದುರಿನ ಪಂದ್ಯದಲ್ಲಿ ಡ್ರಾ

FIFA World Cup | ಜರ್ಮನಿ ಗೌರವ ಕಾಪಾಡಿದ ನಿಕ್ಲಾಸ್; ನಾಕೌಟ್ ಆಸೆ ಜೀವಂತ

ಎಪಿ Updated:

ಅಕ್ಷರ ಗಾತ್ರ : | |

ಅಲ್‌ಖೋರ್, ಕತಾರ್: ನಿಕ್ಲಾಸ್ ಫುಲ್‌ಕ್ರಗ್ ಹೊಡೆದ ಗೋಲು ಜರ್ಮನಿಯ ಗೌರವ ಕಾಪಾಡಿತು. ಜೊತೆಗೆ ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ತಲುಪುವ ಆಸೆಯನ್ನೂ ಜೀವಂತವಾಗಿರಿಸಿತು.

ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಜರ್ಮನಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್ ಎದುರು 1–1ರಿಂದ ಡ್ರಾ ಸಾಧಿಸಲು ನಿಕ್ಲಾಸ್ ಗೋಲು ಕಾರಣವಾಯಿತು.  

ಅಲ್‌ಬೈತ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಸೋತಿದ್ದರೆ ಜರ್ಮನಿ ಫಿಫಾವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಬೇಕಿತ್ತು. ಏಕೆಂದರೆ ಮೊದಲ ಪಂದ್ಯದಲ್ಲಿ ಜಪಾನ್ ಎದುರು ಜರ್ಮನಿ ಸೋತಿತ್ತು. 

ಇದೇ ಗುರುವಾರ ನಡೆಯುವ ಮೂರನೇಪಂದ್ಯದಲ್ಲಿ ಜರ್ಮನಿ ತಂಡವು ಕೋಸ್ಟರಿಕಾ ವಿರುದ್ಧ ಹೆಚ್ಚು ಗೋಲುಗಳ ಅಂತರದಿಂದ ಗೆದ್ದರೆ 16ರ ಘಟ್ಟಕ್ಕೆ ಪ್ರವೇಶಿಸುವ ಅವಕಾಶ ಸಿಗಬಹುದು. ಆದರೆ  ’ಇ‘ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ಜರ್ಮನಿ ಬೇರೆ ಪಂದ್ಯಗಳ ಫಲಿತಾಂಶವನ್ನೂ ಕಾಯಬೇಕಾಗಬಹುದು. ಗೋಲು ಗಳಿಕೆಯ ಅಂತರದ ಲೆಕ್ಕಾಚಾರದಲ್ಲಿಯೂ ಮೇಲುಗೈ ಸಾಧಿಸಬೇಕಾದ ಸಾಧ್ಯತೆ ಇದೆ.

ಜಪಾನ್ ಮತ್ತು ಸ್ಪೇನ್ ತಂಡಗಳ ನಡುವಣ ಪಂದ್ಯವು ಇಲ್ಲಿ ಪ್ರಮುಖವಾಗಲಿದೆ. ಇದರಲ್ಲಿ ಸ್ಪೇನ್ ಗೆದ್ದರೆ ಜರ್ಮನಿಗೆ ಅವಕಾಶ. ಆಗ ತನ್ನ ಕೊನೆಯ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಜರ್ಮನಿ ಗೆಲ್ಲಬೇಕು. ಜೊತೆಗೆ ಗೋಲುಗಳ ಅಂತರವನ್ನೂ ಹೆಚ್ಚಿಸಿಕೊಳ್ಳಬೇಕು. ಆದರೆ ಸ್ಪೇನ್  ಎದುರು ಜಪಾನ್ ಗೆದ್ದರೆ ಜರ್ಮನಿಯ ಹಾದಿ ಬಹುತೇಕ ಕೊನೆಗೊಂಡಂತಾಗುತ್ತದೆ.

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಜರ್ಮನಿಯ ಆಟದಲ್ಲಿ ಛಲವಿತ್ತು ಮತ್ತು ಶಿಸ್ತಿನ ಯೋಜನೆಯಿತ್ತು. ಆದರೂ 62ನೇ ನಿಮಿಷದಲ್ಲಿ ಸ್ಪೇನ್ ತಂಡದ ಅಲ್ವೆರೊ ಮೊರಾಟಾ ಗೋಲು ಹೊಡೆದರು. ತಮ್ಮ ಸಹ ಆಟಗಾರ ಜೋರ್ದಿ ಅಲ್ಬಾ ಅವರಿಂದ ಕ್ರಾಸ್ ಪಡೆದ ಚೆಂಡನ್ನು ಅಲ್ವೆರೊ ಗೋಲ್‌ಪೋಸ್ಟ್‌ಗೆ ಕಳಿಸಿದ ರೀತಿ ಆಕರ್ಷಕವಾಗಿತ್ತು. 

ಇದಾಗಿ 20ನಿಮಿಷಗಳ ನಂತರ ಕಣಕ್ಕಿಳಿದ ಸಬ್‌ಸ್ಟ್ಯೂಟ್ ನಿಕ್ಲಾಸ್ ಗೋಲು ಹೊಡೆಯುವದರೊಂದಿಗೆ ಉಭಯ ತಂಡಗಳು ಸಮಬಲವಾದವು. ನಂತರದ ಹೋರಾಟದಲ್ಲಿ ರೋಚಕತೆ ಇತ್ತು.ಆದರೆ ಉಭಯ ತಂಡಗಳಿಗೆ ಗೋಲು ದಾಖಲಿಸಲಾಗಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು