ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲ್ಗಾ ನದಿಯಲ್ಲಿ ಹೊಸ ಅಲೆಗಳ ಚಿನ್ನಾಟ

ಫಿಫಾ ವಿಶ್ವಕಪ್ ಫುಟ್‌ಬಾಲ್
Last Updated 2 ಜುಲೈ 2018, 5:42 IST
ಅಕ್ಷರ ಗಾತ್ರ

ರಷ್ಯಾದ ಓಲ್ಗಾ ನದಿಯಲ್ಲಿ ಈಗ ಹೊಸ ಅಲೆಗಳು ಸಂಭ್ರಮಿಸುತ್ತಿವೆ. ಗಾಳಿಯಲ್ಲಿ ನವಚೈತನ್ಯದ ಸುಗಂಧ ಪಸರಿಸುತ್ತಿದೆ. ಅದು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅಂಗಣದಿಂದ ಹುಟ್ಟಿದ ಹವಾ.

ಹೌದು; 21ನೇ ವಿಶ್ವಕಪ್ ಟೂರ್ನಿ ಸಂಘಟಿಸಿರುವ ರಷ್ಯಾ ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಇಷ್ಟೊಂದು ಅನಿರೀಕ್ಷಿತ ಫಲಿತಾಂಶಗಳು ಹಿಂದೆಂದೂ ಮೂಡಿ ಬಂದಿರಲಿಲ್ಲ. ಪ್ರಶಸ್ತಿ ಫೆವರೆಟ್ ತಂಡಗಳು, ತಾರಾ ವರ್ಚಸ್ಸಿನ ಆಟಗಾರರು ಇಷ್ಟೊಂದು ಹೀನಾಯ ರೀತಿಯಲ್ಲಿ ಹೊರಹೋಗಿರಲಿಲ್ಲ. ಹೊಸ ಪ್ರತಿಭೆಗಳು ಇಷ್ಟೊಂದು ಸಂಖ್ಯೆಯಲ್ಲಿ ಹುಟ್ಟಿಬಂದಿರಲಿಲ್ಲ. ಹಿಂದಿನ 20 ವಿಶ್ವಕಪ್‌ ಟೂರ್ನಿಗಳಲ್ಲಿ ಆಗದೇ ಇರುವುದೆಲ್ಲ ಇಲ್ಲಿ ಆಗುತ್ತಿದೆ.

ಲೀಗ್ ಹಂತವನ್ನೇ ನೋಡಿ. ಚಾಂಪಿಯನ್ ಜರ್ಮನಿ ದೂಳೀಪಟವಾಗಿ ಹೋಯಿತು. ಪ್ರೀ ಕ್ವಾರ್ಟರ್‌ಫೈನಲ್‌ ಘಟ್ಟದಲ್ಲಿ ಒಂದೇ ದಿನ ಅರ್ಜೆಂಟೀನಾ, ಪೋರ್ಚುಗಲ್, ಮರುದಿನ ಸ್ಪೇನ್, ಡೆನ್ಮಾರ್ಕ್‌ ತಂಡಗಳು ಮನೆ ಸೇರಿದವು. ಹಳೆ ಹುಲಿ ಫ್ರಾನ್ಸ್‌ ಮತ್ತೆ ಮೈಕೊಡವಿಕೊಂಡು ಎದ್ದು ನಿಂತಿತು.

ಫುಟ್‌ಬಾಲ್ ಪ್ರಿಯರ ಕಣ್ಮಣಿಗಳಾದ ಲಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಾರಾಪಟ್ಟ ಒಂದೇ ದಿನದಲ್ಲಿ ನೆಲಕಚ್ಚಿತು. ಆದರೆ ಕಪ್ಪುಕುದುರೆಗಳಾಗಿ ಕಣಕ್ಕಿಳಿದಿದ್ದ ತಂಡಗಳೇ ಈಗ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿವೆ. ಎಲ್ಲಕ್ಕಿಂತ ಅಚ್ಚರಿಯೆಂದರೆ, ಈ ಬಾರಿ ಪ್ರಾಣಿ, ಪಕ್ಷಿಗಳು ನುಡಿದಿದ್ದ ‘ಭವಿಷ್ಯ’ಗಳೂ ಠುಸ್ ಆದವು!



‘ಆತಿಥ್ಯ ವಹಿಸುತ್ತಿರುವ ಕಾರಣಕ್ಕೆ ರಷ್ಯಾ ಅವಕಾಶ ಪಡೆದಿದೆ. ಇಲ್ಲದಿದರೆ ಅದು ಕ್ವಾಲಿಫೈ ಆಗುತ್ತಿರಲಿಲ್ಲ. ಈಗಲೂ ಅಷ್ಟೇ ಲೀಗ್ ಹಂತದಲ್ಲಿಯೇ ಹೊರಹೋಗುತ್ತದೆ ನೋಡುತ್ತಾ ಇರಿ’ ಎಂದಿದ್ದ ವಿಶ್ಲೇಷಕರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅದರಲ್ಲೂ 16ರ ಘಟ್ಟದಲ್ಲಿ ತಂಡದ ನಾಯಕ, ಗೋಲ್‌ಕೀಪರ್ ಈಗರ್ ಅಕಿನ್‌ಫೀವ್ ಅವರ ಅಮೋಘ ಆಟ ಕಳೆಗಟ್ಟಿತು. ಚೆರಿಷೇವ್ ಅಂತಹ ಆಟಗಾರರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ಎದೆಯುಬ್ಬಿಸಿಕೊಂಡು ಓಡಾಡುವಂತೆ ಫುಟ್‌ಬಾಲ್ ಆಟಗಾರರು ಸಾಧನೆ ಮಾಡಿದ್ದಾರೆ.

ಇತ್ತ ಏಷ್ಯಾ ಖಂಡವೂ ಪ್ರಶಸ್ತಿಯ ಕನಸು ಕಾಣುವಂತೆ ಮಾಡಿರುವುದು ಜಪಾನ್ ತಂಡ. ಸೋಮವಾರ ರಾತ್ರಿ ಜಪಾನ್ ತಂಡವು ಬಲಿಷ್ಠ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಜಪಾನ್ ಆಡಿರುವ ರೀತಿಯು ಎಲ್ಲರಿಗೂ ಗೊತ್ತಿರುವಂತಿದೆ. ಈಗ ಮೂಡಿ ಬರುತ್ತಿರುವ ಅಚ್ಚರಿಯ ಫಲಿತಾಂಶಗಳನ್ನು ನೋಡಿದರೆ ಜಪಾನ್ ಗೆದ್ದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ, ಭಾನುವಾರ ಮಧ್ಯರಾತ್ರಿ ಕ್ರೊವೇಷ್ಯಾ ತಂಡವು ಪೆನಾಲ್ಟಿಸ್‌ನಲ್ಲಿ ತನಗಿಂತಲೂ ಅನುಭವಿ ತಂಡ ಡೆನ್ಮಾರ್ಕ್ ತಂಡವನ್ನು ಹಣಿದಿದೆ. ಇದರಿಂದಾಗಿ ಜಪಾನ್ ಕೂಡ ಇಂತಹದೇ ಫಲಿತಾಂಶ ಸಾಧನೆ ಮಾಡುವ ನಿರೀಕ್ಷೆ ಮೂಡಿರುವುದು ಸಹಜ.



ಟೂರ್ನಿಯ ಆರಂಭದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಕಣಕ್ಕೆ ಇಳಿದಿದ್ದ ತಂಡಗಳಲ್ಲಿ ಈಗ ಉಳಿದಿರುವುದು ಬ್ರೆಜಿಲ್, ಬೆಲ್ಜಿಯಂ ಮತ್ತು ಮೆಕ್ಸಿಕೊ ಮಾತ್ರ. ಇಂದು ರಾತ್ರಿ ಬ್ರೆಜಿಲ್ ಮತ್ತು ಮೆಕ್ಸಿಕೊ ಮುಖಾಮುಖಿಯಾಗಲಿವೆ. ಆದ್ದರಿಂದ ಎಂಟರ ಘಟ್ಟಕ್ಕೆ ಇವೆರಡರಲ್ಲಿ ಒಂದು ತಂಡ ಉಳಿಯುತ್ತದೆ. ಒಂದೊಮ್ಮೆ ಬ್ರೆಜಿಲ್ ಗೆಲ್ಲದಿದ್ದರೆ ಅದೊಂದು ದೊಡ್ಡ ಆಘಾತದ ಘಟನೆಯಾಗಿ ಫುಟ್‌ಬಾಲ್ ಪ್ರಿಯರನ್ನು ಕಾಡಲಿದೆ. ನೇಮರ್, ಫಿಲಿಪ್ ಕುಟಿನೊ ಅವರಂತಹ ಉತ್ತಮ ಆಟಗಾರರು ತಂಡದಲ್ಲಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಆದರೆ ಅನಿರೀಕ್ಷಿತವಾದ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಟೂರ್ನಿಯಲ್ಲಿ ಏನು ಬೇಕಾದರೂ ಆಗಬಹುದು. ಒಂದಂತೂ ನಿಜ. ದಶಕಗಳಿಂದ ವಿಶ್ವ ಕಾಲ್ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿಟ್ಟುಕೊಂಡಿರುವ ಅಮೆರಿಕ, ಯುರೋಪ್ ದೇಶಗಳಿಗೆ ರಷ್ಯಾ ಸೆಡ್ಡು ಹೊಡೆದಿದೆ. ಆ ಮೂಲಕ ವಿಶ್ವದ ಬೇರೆ ಕಡೆಯೂ ಫುಟ್‌ಬಾಲ್ ಪುಟಿದೇಳುವ ಹೊಸ ಭರವಸೆ ಮೂಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT