ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ನಾರ್ತ್ಈಸ್ಟ್‌ ಸವಾಲು

ಐಎಸ್‌ಎಲ್‌: ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ‘ಫುಟ್‌ಬಾಲ್‌ ಹಬ್ಬ’
Last Updated 7 ಅಕ್ಟೋಬರ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಬಿಡುವಿನ ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ‘ಫುಟ್‌ಬಾಲ್‌ ಹಬ್ಬ’ ಮರಳಿದ್ದು, ಬೆಂಗಳೂರಿನ ಫುಟ್‌ಬಾಲ್‌ ಪ್ರೇಮಿಗಳ ಕುತೂಹಲ ಗರಿಗೆದರಿದೆ.

ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್‌) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಶನಿವಾರ, ನಾರ್ತ್ ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ಕೋವಿಡ್‌ ಕಾರಣ ಕಳೆದ ಎರಡು ಋತುಗಳಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಲ್‌ ಪಂದ್ಯಗಳು ನಡೆದಿರಲಿಲ್ಲ. ಇದೀಗ ತವರು ನೆಲದಲ್ಲಿ ಆಡಲು ಅವಕಾಶ ಲಭಿಸಿರುವುದು ಬಿಎಫ್‌ಸಿ ಆಟಗಾರರ ಉತ್ಸಾಹ ಇಮ್ಮಡಿಗೊಳಿಸಿದೆ. ಮೊದಲ ಪಂದ್ಯದಲ್ಲಿ ಗೆದ್ದು, ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಸಕಾರಾತ್ಮಕವಾಗಿ ಆರಂಭಿಸುವ ವಿಶ್ವಾಸದಲ್ಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಆಡುವ ಅವಕಾಶ ಲಭಿಸಿರುವುದಕ್ಕೆ ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ ಮತ್ತು ಕೋಚ್‌ ಸೈಮನ್ ಗ್ರೇಸನ್‌ ಅವರು ಸಂತಸ ವ್ಯಕ್ತಪಡಿಸಿದ್ಧಾರೆ.

‘ಕಿಕ್ಕಿರಿದು ತುಂಬುವ ಪ್ರೇಕ್ಷಕರ ಬೆಂಬಲದೊಂದಿಗೆ ಇಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇವೆ. ಕೋವಿಡ್‌ಗೆ ಮುಂಚೆ ಇಲ್ಲಿ ಪಂದ್ಯ ನಡೆಯುತ್ತಿದ್ದಾಗ ಅನುಭವಿಸಿದ್ದ ಪ್ರತಿಯೊಂದು ಸುಂದರ ಕ್ಷಣಗಳೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ’ ಎಂದು ಚೆಟ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಎರಡು ಋತುಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಬಿಎಫ್‌ಸಿ, ಈ ಬಾರಿ ಹೊಸ ಆಟಗಾರರನ್ನು ಸೇರಿಸಿಕೊಂಡು ಶಕ್ತಿಯನ್ನು ವೃದ್ದಿಸಿಕೊಂಡಿದೆ. ರಾಯ್‌ ಕೃಷ್ಣ, ಪ್ರಬೀರ್‌ ದಾಸ್‌ ಮತ್ತು ಜಾವಿ ಹೆರ್ನಾಂಡೆಸ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಸಂದೇಶ್‌ ಜಿಂಗಾನ್, ಅಲೆಕ್ಸಾಂಡರ್‌ ಜವನೊವಿಚ್ ಮತ್ತು ಹೀರಾ ಮೊಂಡಲ್‌ ಅವರು ರಕ್ಷಣಾ ವಿಭಾಗಕ್ಕೆ ಬಲ ತುಂಬಲಿದ್ದಾರೆ.

‘ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದು ಚೆಟ್ರಿ ನಗು ಬೀರಿದರು. ‘ಯಾರಿಗೆಲ್ಲಾ ಆಡುವ ಅವಕಾಶ ಲಭಿಸುತ್ತದೆ ಎಂಬುದು ಖಚಿತವಿಲ್ಲ. ತಂಡದಲ್ಲಿ ಅಷ್ಟೊಂದು ಪೈಪೋಟಿಯಿದೆ’ ಎಂದು ಹೇಳಿದರು.

ನಾರ್ತ್ಈಸ್ಟ್‌ ಯುನೈಟೆಡ್‌ ಎಫ್‌ಸಿ ಕಳೆದ ಋತುವಿಗೆ ಹೋಲಿಸಿದರೆ, ತಂಡದಲ್ಲಿ ಬಾರಿ ಬದಲಾವಣೆಗಳನ್ನು ಮಾಡಿಕೊಂಡಿದೆ. ‘ಇದು ಕಠಿಣ ಪಂದ್ಯ ಎಂಬುದರ ಅರಿವಿದೆ. ಬಿಎಫ್‌ಸಿ ತಂಡ ಸಮತೋಲನದಿಂದ ಕೂಡಿದೆ. ಆದರೆ ನಾವು ತಕ್ಕ ಸಿದ್ಧತೆಯೊಂದಿಗೆ ಬಂದಿದ್ದೇವೆ’ ಎಂದು ತಂಡದ ಕೋಚ್‌ ಮಾರ್ಕೊ ಬಲ್ಬುಲ್‌ ತಿಳಿಸಿದರು.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT