ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿನೊಂದಿಗೆ ವಿದಾಯ ಹೇಳಿದ ಗೋಮೆಜ್‌

Last Updated 29 ಜೂನ್ 2020, 8:52 IST
ಅಕ್ಷರ ಗಾತ್ರ

ಸ್ಟುಟ್‌ಗಾರ್ಟ್‌: ಜರ್ಮನಿ ತಂಡದ ಹಿರಿಯ ಆಟಗಾರ ಮಾರಿಯೊ ಗೋಮೆಜ್‌ಫುಟ್‌ಬಾಲ್‌ ಆಟಕ್ಕೆ ವಿದಾಯ ಹೇಳಿದ್ದಾರೆ. ಸ್ಟುಟ್‌ಗಾರ್ಟ್‌ ಕ್ಲಬ್‌ ಪರ ಅವರು ಕೊನೆಯ ಪಂದ್ಯದಲ್ಲಿ ಗೋಲು ದಾಖಲಿಸಿ ಮಿಂಚಿದರು.

35 ವರ್ಷದ ಗೋಮೆಜ್‌, ವಿದಾಯ ಹೇಳುವ ಮುನ್ನ ರಿಯಲ್‌ ಮ್ಯಾಡ್ರಿಡ್‌ ಹಾಗೂ ಬಾರ್ಸಿಲೋನಾ ಕ್ಲಬ್‌ಗಳೊಂದಿಗೆ ಮಾತುಕತೆ ನಡಸಿರುವುದಾಗಿ ಹೇಳಿ ಎಲ್ಲರನ್ನೂ ತಮಾಷೆಯಲ್ಲಿ ಕೆಡವಿದರು.

ಬಂಡೆಸ್‌ಲಿಗಾ ಟೂರ್ನಿಯಲ್ಲಿ ಭಾನುವಾರ ಸ್ಟುಟ್‌ಗಾರ್ಟ್‌ ತಂಡವು ತವರಿನಲ್ಲಿ ಡಾಮ್‌ಸ್ಟಾರ್ಟ್‌‌ ತಂಡಕ್ಕೆ 1–3 ಗೋಲುಗಳ ಅಂತರದಿಂದ ಸೋತಿತು. ಆದರೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್ಮಿನಿಯಾ ಬೈಲೆಫೆಲ್ಡ್ ತಂಡಕ್ಕಿಂತ 10 ಕಡಿಮೆ ಪಾಯಿಂಟ್ಸ್‌ ಹಿಂದೆಬಿದ್ದು, ರನ್ನರ್‌ ಅಪ್‌ ಆಗಿ ಹೊರಹೊಮ್ಮಿತು.

‘ಹೋದ ವರ್ಷ ತಂಡದೊಂದಿಗೆ ಗೊಂದಲ ಸೃಷ್ಟಿಸಿಕೊಂಡಿದ್ದೆ. ಸ್ಟುಟ್‌ಗಾರ್ಟ್‌ ಪರ ಇದು ನನ್ನ ಕೊನೆಯ ಒಪ್ಪಂದವಾಗಿತ್ತು’ ಎಂದು 2019ರಲ್ಲಿ ಕ್ಲಬ್ ತಮ್ಮನ್ನು ಹೊರಹಾಕಿದ್ದನ್ನು ಉಲ್ಲೇಖಿಸಿ ಗೋಮೆಜ್‌ ಹೇಳಿದರು.

ಕ್ರೀಡಾ ಬದುಕಿನ ಉತ್ತುಂಗದಲ್ಲಿದ್ದಾಗ ಗೋಮೆಜ್‌, ಜರ್ಮನಿ ತಂಡದ ಪ್ರಮುಖ ಫಾರ್ವರ್ಡ್‌ ಆಟಗಾರರಲ್ಲಿ ಒಬ್ಬರಾಗಿದ್ದರು. 2007ರಲ್ಲಿ ಸ್ಟುಟ್‌ಗಾರ್ಟ್‌ ಪರ ಮೊದಲ ಬಾರಿ ಅವರು ಕಣಕ್ಕಿಳಿದಾಗ ಬಂಡೆಸ್‌ಲಿಗಾ ಟೂರ್ನಿಯಲ್ಲಿ ತಂಡ ಚಾಂಪಿಯನ್‌ ಆಗಿತ್ತು. 2009ರಲ್ಲಿ ಬೇಯರ್ನ್‌ ಮ್ಯೂನಿಚ್‌ ತಂಡ ಸೇರಿಕೊಂಡ ಬಳಿಕ ಆ ತಂಡವೂ ಎರಡು ಬಾರಿ ಪ್ರಶಸ್ತಿ ಗಳಿಸಿತ್ತು.

2017ರಲ್ಲಿ ಸ್ಟುಟ್‌ಗಾರ್ಟ್‌ ತಂಡ ಸೇರುವ ಮುನ್ನ ವೋಫ್ಸ್‌ಬರ್ಗ್‌ ಪರ ಆಡಿದ್ದ ಗೋಮೆಜ್‌, 52 ಪಂದ್ಯಗಳಿಂದ 19 ಗೋಲುಗಳನ್ನು ದಾಖಲಿಸಿದ್ದರು.

ಒಟ್ಟಾರೆ 328 ಬಂಡೆಸ್‌ಲಿಗಾ ಪಂದ್ಯಗಳಲ್ಲಿ ಅವರು 170 ಗೋಲುಗಳನ್ನು ಗಳಿಸಿದ್ದಾರೆ. ಚಾಂಪಿಯನ್ಸ್‌ ಲೀಗ್‌ ಪಂದ್ಯಗಳಲ್ಲಿ 26 ಗೋಲು ಹೊಡೆದಿದ್ದರು.

ಗೋಮೆಜ್‌ ಅವರು ಗಾಯಾಳಾದ ಹಿನ್ನೆಲೆಯಲ್ಲಿ 2014ರ ವಿಶ್ವಕಪ್‌ ಗೆದ್ದ ಜರ್ಮನಿ ತಂಡದಲ್ಲಿ ಆಡಿರಲಿಲ್ಲ. ರಾಷ್ಟ್ರೀಯ ತಂಡದ ಪರ 78 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 31 ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT