ಬುಧವಾರ, ಆಗಸ್ಟ್ 17, 2022
23 °C
ಪ್ರೇರಣೆ

ಬಾಲಪ್ರತಿಭೆ ಬಾಪೆಯ ದಿವ್ಯ ಪ್ರಭೆ

ವಿಶಾಖ ಎನ್‌. Updated:

ಅಕ್ಷರ ಗಾತ್ರ : | |

Deccan Herald

ವಯಸ್ಸು ಹತ್ತೊಂಬತ್ತು ದಾಟಿದ ತರುಣನ ಆಟದ ಬೆಲೆ 1,600 ಕೋಟಿ ರೂಪಾಯಿಗೂ ಹೆಚ್ಚೆಂದರೆ ‘ಅಬ್ಬಾ’ ಎನ್ನದೇ ಇರಲು ಸಾಧ್ಯವಿಲ್ಲ. ಫ್ರಾನ್ಸ್‌ನ ಫುಟ್‌ಬಾಲ್ ಚಿನಕುರುಳಿ ಕೈಲಿಯನ್ ಬಾಪೆ ವಿಷಯದಲ್ಲಿ ಈ ಮಾತನ್ನು ನಂಬಲೇಬೇಕು. ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಫ್ರಾನ್ಸ್ ‘ದೊರೆ’ಯಾಗಿ ಬೀಗಿದ ಸುದ್ದಿ ಹಸಿಯಾಗಿರುವಾಗಲೇ, ಬೆನ್ನುನೋವನ್ನು ನುಂಗಿಕೊಂಡೇ ತಾನು ಫೈನಲ್‌ನಲ್ಲಿ ಆಡಿದ್ದಾಗಿ ಈ ಹುಡುಗ ಮೊನ್ನೆ ಹೇಳಿದ್ದಾನೆ. ‘ಇಷ್ಟು ಚಿಕ್ಕ ವಯಸ್ಸಿಗೆ ಬೆನ್ನುನೋವೇ’ ಎಂದು ಆಟದ ಮರ್ಮ ಗೊತ್ತಿರುವ ಯಾರೂ ಕೇಳಲಾರರು. 

ಎಎಸ್ ಬ್ಯಾಂಡಿ ಎಂಬ ಕ್ಲಬ್‌ನಲ್ಲಿ ಕಲಿತ ಹುಡುಗ ಬಾಪೆ. ಅಪ್ಪ ವಿಲ್ ಫ್ರೆಡ್ ಗುರುವೂ ಹೌದು. ಕೆಮರೂನ್ ಮಣ್ಣಿನ ಅವರು ಮಗನ ನರನಾಡಿಗಳಿಗೂ ಫುಟ್‌ಬಾಲ್ ಗಂಧ ಸವರಿದರು.

‘ಬಹುತೇಕ ಮಕ್ಕಳಿಗೆ ಇಲ್ಲದ ದೂರದೃಷ್ಟಿ, ತಂತ್ರ ಬಾಪೆ ಆಟದಲ್ಲಿತ್ತು. ಅವನ ತಲೆಯ ಹಿಂಬದಿಯಲ್ಲೂ ಒಂದು ಕಣ್ಣಿದೆ. ಚೆಂಡು ಯಾವ ದಿಕ್ಕಿನತ್ತ ಸಾಗಬಲ್ಲದು ಎನ್ನುವುದನ್ನು ಊಹಿಸುವುದರಲ್ಲಿ ಅವನು ನಿಷ್ಣಾತ. ಅವನನ್ನು ಯಾವತ್ತೂ ನಾವು ವಾರಗೆಯ ಹುಡುಗರೊಟ್ಟಿಗೆ ಆಡಲು ಬಿಡಲಿಲ್ಲ. ಸದಾ ತನಗಿಂತ ವಯಸ್ಸಿನಲ್ಲಿ ದೊಡ್ಡವರ ಜತೆಗೇ ಆಡುತ್ತಿದ್ದ. ದಿನ ದಿನವೂ ಬೆಳೆಯುತ್ತಿದ್ದ’- ಎಎಸ್ ಬ್ಯಾಂಡಿ ಕ್ಲಬ್‌ನ ಅಧ್ಯಕ್ಷ ಅಟ್ಮಾನ್ ಐರೋಷ್ ಆಡಿದ ಮಾತಿದು.

ಕೈಲಿಯನ್ ಬಾಪೆ ಆರು ವರ್ಷದ ಹುಡುಗನಿದ್ದಾಗ ಅವನಿಗೆ ಚೆಂಡು ಕೊಟ್ಟ ಇನ್ನೊಬ್ಬ ಗುರು ಆಂಟೋನಿಯೊ ರಿಕಾರ್ಡಿ. ಅವರ ನುಡಿಯೂ ಆಸಕ್ತಿಕರವಾಗಿದೆ: ‘ಆರನೇ ವಯಸ್ಸಿನಲ್ಲೇ ಅವನ ಡ್ರಿಬ್ಲಿಂಗ್ ಅದ್ಭುತವಾಗಿತ್ತು. ವೇಗದಲ್ಲಿ ತನ್ನ ಜತೆಗಿದ್ದವರನ್ನೆಲ್ಲ ಅವನು ಹಿಂದಿಕ್ಕುತ್ತಿದ್ದ. ಹದಿನೈದು ವರ್ಷಗಳ ನನ್ನ ವೃತ್ತಿಬದುಕಿನಲ್ಲಿ ಅಷ್ಟೊಂದು ಜಾಣ, ತಂತ್ರನಿಪುಣ ಆಟಗಾರನನ್ನು ನಾನು ನೋಡಿಯೇ ಇಲ್ಲ. ಅವನನ್ನು ನಾನು ಯಾವತ್ತೂ ಶ್ರೇಷ್ಠ ಎಂದೇ ಕರೆಯುವುದು’.

2015ರ ಡಿಸೆಂಬರ್‌ನಲ್ಲಿ ಬಾಪೆ ಮೊನಾಕೊ ತಂಡಕ್ಕೆ ಪದಾರ್ಪಣೆ ಮಾಡಿದ್ದು. ಆಗ 16 ವರ್ಷ 347 ದಿನದ ಹುಡುಗ. ಮೊನಾಕೋದ ಅತಿ ಕಿರಿಯ ಆಟಗಾರ ಎಂಬ ಗೌರವ ಅದಾಗಲೇ ಅವನದ್ದಾಯಿತು. ಥಿಯರಿ ಹೆನ್ರಿ ಮಾತ್ರ 21ನೇ ವಯಸ್ಸಿನಲ್ಲಿ ಅದಕ್ಕೂ ಮೊದಲು ಆ ತಂಡದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರನಾಗಿದ್ದ. 17 ವರ್ಷ 62 ದಿನದ ಪ್ರಾಯದವನಿದ್ದಾಗ ಮೊನಾಕೊ ಇತಿಹಾಸದಲ್ಲೇ ಮೊದಲ ಗೋಲು ಗಳಿಸಿದ ಕಿರಿಯ ಎಂಬ ಇನ್ನೊಂದು ಗರಿ ಅಲಂಕರಿಸಿತು. 2016ರ ಡಿಸೆಂಬರ್ 14 ಮರೆಯಲಾಗದ ದಿನ.

ಬಾಪೆ ಮೊದಲ ಹ್ಯಾಟ್ರಿಕ್ ಗೋಲು ಗಳಿಸಿದ್ದು ಅಂದೇ. ಕೂಪ್ ಡಿ ಲಾ ಲೀಗ್‌ನಲ್ಲಿ 1997ರಲ್ಲಿ ಸೋನಿ ಆಂಡರ್‌ಸನ್ ಹ್ಯಾಟ್ರಿಕ್ ಗೋಲು ಗಳಿಸಿದ್ದ. ಆ ಸಾಧನೆಯನ್ನು ಸರಿಗಟ್ಟಿದ ಗೌರವ ಅಂದು ಬಾಪೆಯದ್ದಾಯಿತು.

ಇದೇ ವರ್ಷ ಜೂನ್ 21ರಂದು ವಿಶ್ವಕಪ್‌ನಲ್ಲಿ ಪೆರುವಿನ ವಿರುದ್ಧ ಮೊದಲು ಗೋಲು ಗಳಿಸಿದ. ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಫ್ರಾನ್ಸ್‌ನ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಅವನದ್ದಾಯಿತು.

19ನೇ ವಯಸ್ಸಿನ ಬೇರೆ ಯಾರೂ ಇಂಥದೊಂದು ಸಾಧನೆಯನ್ನು ದೇಶದ ಪರವಾಗಿ ಮಾಡಿರಲಿಲ್ಲ. ಅರ್ಜೆಂಟಿನಾ ಎದುರಿನ ಪಂದ್ಯದಲ್ಲಿ ಎರಡು ಗೋಲು ಗಳಿಸಿದಾಗ 1958ರಲ್ಲಿ ಪೆಲೆ ಮಾಡಿದ್ದ ಸಾಧನೆಯನ್ನು ನೆನಪಿಸಿದ. ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ತರುಣ ಎಂಬ ಸಾಧನೆ ಅದು.

‘ಅರ್ಸೆನೆ ವೆಂಜರ್’ ಎನ್ನುವುದು ಬಾಪೆಗೆ ಫುಟ್‌ಬಾಲ್ ಅಭಿಮಾನಿಗಳು ಇಟ್ಟಿರುವ ಫ್ರೆಂಚ್‌ ಭಾಷೆಯ ಅಡ್ಡಹೆಸರು. ಇದರರ್ಥ: ‘ಫುಟ್‌ಬಾಲ್‌ನ ದೈತ್ಯ ಪ್ರತಿಭೆ’. ಮಾಧ್ಯಮಗಳು ಈ ಹುಡುಗನನ್ನು ಪೆಲೆ ಜತೆ ತುಲನೆ ಮಾಡುತ್ತಿದ್ದರೆ, ಅವನು ಸಂಕೋಚದಿಂದ ಕಂಪಿಸುತ್ತಾನೆ. ‘ಅವರೆಲ್ಲಿ, ನಾನೆಲ್ಲಿ’ ಎಂದು ನಮ್ರವಾಗಿ ಹೇಳುತ್ತಾನೆ. ಪ್ರತಿ ಗಂಟೆಗೆ 38 ಕಿ.ಮೀ. ವೇಗದಲ್ಲಿ ನುಗ್ಗಬಲ್ಲ ಈ ಹುಡುಗ ರೊನಾಲ್ಡೊ ವೇಗವನ್ನೂ ಮೀರಿಸಿದ ಹುರಿಯಾಳು.

ಬೆನ್ನುನೋವನ್ನೂ ಲೆಕ್ಕಿಸದ ಅವನ ಆಟಪ್ರೀತಿಗೆ ಅನೇಕರು ಶರಣೆನ್ನುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು