ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜರ್ಮನಿ ಫುಟ್‌ಬಾಲ್ ತಾರೆ ಬ್ರೀಮ್ ನಿಧನ

1990ರ ವಿಶ್ವಕಪ್‌ ಫೈನಲ್‌ನ ಏಕೈಕ ಗೋಲಿನ ರೂವಾರಿ
Published 20 ಫೆಬ್ರುವರಿ 2024, 14:17 IST
Last Updated 20 ಫೆಬ್ರುವರಿ 2024, 14:17 IST
ಅಕ್ಷರ ಗಾತ್ರ

ಬರ್ಲಿನ್: ಇಟಲಿಯಲ್ಲಿ ನಡೆದ 1990ರ ವಿಶ್ವಕಪ್‌ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ಪರ ‘ಪೆನಾಲ್ಟಿ’ ಮೂಲಕ ನಿರ್ಣಾಯಕ ಗೋಲು ಗಳಿಸಿದ್ದ ಆ್ಯಂಡ್ರಿಯಾಸ್ ಬ್ರೀಮ್ (63) ಮಂಗಳವಾರ ನಿಧನರಾದರು ಎಂದು ಬಯರ್ನ್ ಮ್ಯೂನಿಕ್ ಕ್ಲಬ್ ತಿಳಿಸಿದೆ.

ಲೆಫ್ಟ್‌ ಬ್ಯಾಕ್ ಆಗಿ ಆಡುತ್ತಿದ್ದ ಬ್ರೀಮ್ ಎರಡು ವರ್ಷ (196–88) ಬಯರ್ನ್ ಕ್ಲಬ್‌ಗೆ ಆಡಿದ್ದರು. 1987ರಲ್ಲಿ ಈ ಕ್ಲಬ್ ಬುಂಡೆಸ್‌ಲೀಗಾ (ಜರ್ಮನಿಯ ಕ್ಲಬ್ ಚಾಂಪಿಯನ್‌ಷಿಪ್‌) ಗೆದ್ದುಕೊಂಡಿತ್ತು.

ಬಯರ್ನ್ ಜೊತೆಗೆ ಅವರು ಯುರೋಪ್‌ನ ಕೈಸರ್ಸ್‌ಲಾಟರ್ನ್, ಇಂಟರ್‌ ಮಿಲಾನ್‌, ಸಾರ್‌ಬ್ರುಕೆನ್ ಮತ್ತು ರಿಯಲ್ ಜಾರ್ಗೊಝಾ ಕ್ಲಬ್‌ಗಳಿಗೆ ಆಡಿದ್ದಾರೆ.

ಬ್ರೀಮ್ ಅವರು ಪಶ್ಚಿಮ ಜರ್ಮನಿ (ಮತ್ತು ನಂತರ ಜರ್ಮನಿ) ಪರ 86 ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ರೋಮ್‌ನಲ್ಲಿ ನಡೆದ 1990ರ ವಿಶ್ವಕಪ್‌ ಫೈನಲ್‌ನ 85ನೇ ನಿಮಿಷ ‘ಪೆನಾಲ್ಟಿ’ಯಲ್ಲಿ ಗಳಿಸಿದ ಗೋಲು ಅವರಿಗೆ ಜಗದ್ವಿಖ್ಯಾತಿ ತಂದುಕೊಟ್ಟಿತ್ತು. ಈ ಗೋಲು ನಿರ್ಣಾಯಕವಾಗಿ ಪಶ್ಚಿಮ ಜರ್ಮನಿ 1–0 ಯಿಂದ ಡೀಗೊ ಮರಡೊನಾ ನೇತೃತ್ವದ ಆರ್ಜೆಂಟೀನಾ ತಂಡವನ್ನು ಸೋಲಿಸಿತ್ತು. ಇದರೊಂದಿಗೆ 1986ರ ಮೆಕ್ಸಿಕೊ ವಿಶ್ವಕಪ್‌ ಫೈನಲ್‌ನಲ್ಲಿ ಅನುಭವಿಸಿದ 3–2 ಸೋಲಿಗೆ ಜರ್ಮನಿ ಮುಯ್ಯಿ ತೀರಿಸಿಕೊಂಡಿತ್ತು. ಪೆನಾಲ್ಟಿ ಯತ್ನವನ್ನು ನಾಯಕ ಲೋಥರ್ ಮಥಾಯಸ್ ಬದಲಿಗೆ ಬ್ರೀಮ್ ತೆಗೆದುಕೊಂಡಿದ್ದರು.

‘ಏರ್‌ಪೋರ್ಟ್‌, ಶಾಪಿಂಗ್‌... ಹೀಗೆ ನಾನೆಲ್ಲೇ ಹೋದರೂ ಜನರು ಅದರ ಬಗ್ಗೆ ಕೇಳುತ್ತಿದ್ದರು’ ಎಂದು ಈ ಹಿಂದೆ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಕೆಲಸಮಯದ ಹಿಂದಷ್ಟೇ ಜರ್ಮನಿಯ ಇನ್ನೊಬ್ಬ ದಂತಕತೆ ಆಟಗಾರ ಫ್ರಾಂಝ್ ಬೆಕೆನ್‌ಬಾರ್ ಕಳೆದ ತಿಂಗಳು ಮೃತಪಟ್ಟಿದ್ದರು.

‘ಆ್ಯಂಡಿ ನಮ್ಮ ವಿಶ್ವಕಪ್‌ ಹೀರೊ, ನನಗೆ ಅವರು ಅದಕ್ಕಿಂತ ಹೆಚ್ಚು– ಅವರು ನನ್ನ ಆಪ್ತ ಮಿತ್ರ ಮತ್ತು ಜೊತೆಗಾರ’ ಎಂದು ಇನ್ನೊಬ್ಬ ತಾರೆ ರೂಡಿ ವಾಲರ್ ಶೋಕ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT